ಸುದ್ದಿಒನ್, ಚಿತ್ರದುರ್ಗ, ಏಪ್ರಿಲ್. 16 : ಜನರ ಜ್ವಲಂತ ಸಮಸ್ಯೆಗಳ ವಿರುದ್ಧ ಹೋರಾಟಗಳನ್ನು ಕಟ್ಟುತ್ತಿರುವ ಪಕ್ಷ ಎಸ್‍ಯುಸಿಐ (ಕಮ್ಯುನಿಸ್ಟ್)ನ ಅಭ್ಯರ್ಥಿ ಸುಜಾತ.ಡಿ ಅವರು ನಗರದಲ್ಲಿ ಇಂದು ವೋಟು ಕೊಡಿ ನೋಟು ಕೊಡಿ ಎಂದು ಜನರ ಬಳಿ ಮತ ಕೇಳುವುದರೊಂದಿಗೆ ತಮ್ಮ ಹೋರಾಟಕ್ಕೆ ನಿಧಿ ಸಂಗ್ರಹಣೆಯನ್ನು ಮಾಡಿದರು.
ಸಂದರ್ಭದಲ್ಲಿ ಮಾತನಾಡಿದ ಪಕ್ಷದ ರಾಜ್ಯ ಮುಖಂಡರಾದ ಕಾಮ್ರೇಡ್ ಎಂ. ಎನ್. ಮಂಜುಳಾ ಅವರು “ನಮ್ಮ ಪಕ್ಷದ ಎಲ್ಲಾ ಚಟುವಟಿಕೆಗಳು ಮತ್ತು ಹೋರಾಟಗಳು ಜನರ ಬೆಂಬಲ ಮತ್ತು ಸಹಕಾರದಿಂದಲೇ ನಡೆಯುತ್ತಿವೆ. ನಮ್ಮ ಪಕ್ಷವು ಚುನಾವಣೆಯನ್ನು ಸಹ ಒಂದು ಹೋರಾಟದ ಭಾಗವೆಂದು ಪರಿಗಣಿಸುತ್ತದೆ. ಒಂದು ವೈಚಾರಿಕ ಸಂಘರ್ಷದ ವೇದಿಕೆಯಾಗಿ ಚುನಾವಣೆಯನ್ನು ಎದುರಿಸುತ್ತದೆ. ಆದ್ದರಿಂದ ನಮ್ಮ ಈ ಹೋರಾಟಕ್ಕೆ ಜನಗಳ ಬೆಂಬಲ ಖಂಡಿತ ಅವಶ್ಯಕ” ಎಂದರು.
ಅನಂತರ ಮಾತನಾಡಿದ ಪಕ್ಷದ ಅಭ್ಯರ್ಥಿ ಸುಜಾತ.ಡಿ ಅವರು “ಮತದಾರರಿಗೆ ವಿವಿಧ ಆಮಿಷಗಳನ್ನು ಒಡ್ಡುತ್ತಾ ಮತ ಪ್ರಚಾರ ನಡೆಸುವ ಇಂದಿನ ದಿನಗಳಲ್ಲಿ, ಚುನಾವಣಾ ಹೋರಾಟಕ್ಕೂ ಜನಗಳಿಂದಲೇ ನಿಧಿ ಸಂಗ್ರಹಿಸಿ ನಮ್ಮ ಹೋರಾಟವನ್ನು ನಡೆಸುತ್ತಿದ್ದೇವೆ. ನಾವು ಯಾವುದೇ ಉದ್ಯಮಪತಿಗಳಿಂದ ದೇಣಿಗೆ ಸ್ವೀಕರಿಸುವುದಿಲ್ಲ. ಬದಲಿಗೆ ನಮ್ಮ ಹೋರಾಟದ ನಿಧಿಗೆ ಜನಸಾಮಾನ್ಯರಿಂದಲೇ ನಿಧಿ ಸಂಗ್ರಹಿಸುತ್ತಿದ್ದು, ಜನರ ನೈಜ ಸಮಸ್ಯೆಗಳ ವಿರುದ್ಧದ ನಮ್ಮ ಹೋರಾಟ ನಿರಂತರವಾಗಿರುತ್ತದೆ” ಎಂದರು.
ಹೋರಾಟದ ನಿಧಿ ಸಂಗ್ರಹಕ್ಕೆಂದು ಬಾಕ್ಸ್ ಹಿಡಿದು ಅಭ್ಯರ್ಥಿಯು ಸಂತೆ ಹೊಂಡದ ಸುತ್ತಮುತ್ತಲಿನ ವ್ಯಾಪಾರಿಗಳು ಮತ್ತು ಜನಸಾಮಾನ್ಯರಲ್ಲಿ ನಿಧಿ ಸಂಗ್ರಹಣೆ ಮಾಡಿದರು ಹಾಗೂ ಮತ ಪ್ರಚಾರ ನಡೆಸಿದರು. ಜನರ ಪ್ರತಿಕ್ರಿಯೆ ಉತ್ತಮವಾಗಿತ್ತು. ಅಲ್ಲಿಂದ ಮುಂದೆ ವಾಸವಿ ಮಹಲ್ ರೋಡ್, ಮೈಸೂರು ಬ್ಯಾಂಕ್ ವೃತ್ತದ ಮೂಲಕ ಹಾದು ಮಹಾತ್ಮ ಗಾಂಧಿ ವೃತ್ತದವರೆಗೆ ಪಾದಯಾತ್ರೆಯ ಮೂಲಕ ಮತ ಪ್ರಚಾರ ಮತ್ತು ನಿಧಿ ಸಂಗ್ರಹಣೆಯ ಕಾರ್ಯ ಮುಂದುವರೆಸಿದರು. ಈ ಸಂದರ್ಭದಲ್ಲಿ ಪಕ್ಷದ ಕಾರ್ಯಕರ್ತರು ಮತ್ತು ಬೆಂಬಲಿಗರು ಜೊತೆಯಲಿದ್ದರು.