ದಾವಣಗೆರೆ (ಜ.24) : ಜಿಲ್ಲಾಡಳಿತ, ಜಿಲ್ಲಾ ಪೊಲೀಸ್ ಇಲಾಖೆ, ಭಾರತ ಸೇವಾದಳ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ದಾವಣಗೆರೆ ಇವರ ಸಹಯೋಗದಲ್ಲಿ ಗಣರಾಜ್ಯೋತ್ಸವದ ಅಂಗವಾಗಿ ಸೋಮವಾರ ಜಿಲ್ಲಾ ಮೀಸಲು ಸಶಸ್ತ್ರ ಪಡೆಯ ಕವಾಯತು ಮೈದಾನದಲ್ಲಿ ದಾವಣಗೆರೆಯ ವಿವಿಧ ಇಲಾಖೆಯ ಸಿಬ್ಬಂದಿಗಳಿಗೆ ರಾಷ್ಟ್ರಧ್ವಜ ಮತ್ತು ರಾಷ್ಟ್ರಗೀತೆ ಧ್ವಜವಂದನೆಯ ಬಗ್ಗೆ ಮಾಹಿತಿ ಕಾರ್ಯಾಗಾರ ಹಮ್ಮಿಕೊಳ್ಳಲಾಯಿತು.
ವಲಯ ಸಂಘಟಕ ಎಂ. ಅಣ್ಣಯ್ಯರವರು ಶಿಬಿರಾರ್ಥಿಗಳಿಗೆ ರಾಷ್ಟ್ರಧ್ವಜ ಮತ್ತು ರಾಷ್ಟ್ರಗೀತೆ ಇತಿಹಾಸ ಹಾಗೂ ಧ್ವಜ ಸಂಹಿತೆಯ ಬಗ್ಗೆ, ಧ್ವಜ ಸಂರಕ್ಷಣೆಯ ನಿಯಮಗಳ ಬಗ್ಗೆ ಮಾಹಿತಿ ನೀಡಿದರು. ಅಲ್ಲದೆ ಕಚೇರಿಗಳಲ್ಲಿ ಧ್ವಜವಂದನೆಯನ್ನು ನೇರವೇರಿಸಲು ಪೂರ್ವ ಸಿದ್ಧತೆ ಮಾಡಿಕೊಳ್ಳುವ ಕುರಿತು ಮಾಹಿತಿ ತಿಳಿಸಿದರು.
ಡಿವೈಎಸ್‍ಪಿ ಪ್ರಕಾಶ್ ರಾಷ್ಟ್ರಧ್ವಜ ಅರಳಿಸಿ ಗೌರವ ವಂದನೆ ಸಲ್ಲಿಸಿದ ಬಳಿಕ ಮಾತನಾಡಿ, ಸಿಬ್ಬಂದಿಗಳಿಗೆ ಸಾರ್ವಜನಿಕರಿಗೆ ರಾಷ್ಟ್ರಧ್ವಜದ ಬಗ್ಗೆ ಸರಿಯಾದ ಮಾಹಿತಿ ಇಲ್ಲದೇ ಇರುವುದರಿಂದ ರಾಷ್ಟ್ರೀಯ ಹಬ್ಬಗಳಲ್ಲಿ ಧ್ವಜವನ್ನು ಸರಿಯಾಗಿ ಕಟ್ಟಲು ಬಾರದೆ ತಲೆಕೆಳಗಾಗಿ ಹಾರಾಟ ಮಾಡಿರುವುದನ್ನು ನಾವು ಗಮನಿಸಿದ್ದೇವೆ.
ಇದು ರಾಷ್ಟ್ರಧ್ವಜಕ್ಕೆ, ರಾಷ್ಟ್ರಕ್ಕೆ ಆಗುವ ಅಪಮಾನವಾಗಿದೆ. ಇಂತಹ ತಪ್ಪುಗಳನ್ನು ಅನಾಹುತಗಳನ್ನು ತಪ್ಪಿಸುವ ಸಲುವಾಗಿ ಜಿಲ್ಲಾಡಳಿತವು ರಾಷ್ಟ್ರಧ್ವಜ ವಂದನೆಯ ಕುರಿತು ಶಿಬಿರಗಳನ್ನು ಆಯೋಜಿಸಲು ಮುಂದಾಗಿದೆ. ಭಾರತ ಸೇವಾದಳವು ದಾವಣಗೆರೆಯಲ್ಲಿ ರಾಷ್ಟ್ರಧ್ವಜ ಮತ್ತು ರಾಷ್ಟ್ರಗೀತೆಗೆ ಸಂಬಂಧಿಸಿದಂತೆ ಪ್ರತಿವರ್ಷ ತರಬೇತಿಗಳನ್ನು ನಡೆಸಿಕೊಂಡು ಬರುತ್ತಿದೆ.
ಜಿಲ್ಲೆಯ ನೌಕರರು, ವಿವಿಧ ಸಂಘ ಸಂಸ್ಥೆಗಳಲ್ಲಿ ಕೆಲಸ ಮಾಡುವ ಸಿಬ್ಬಂದಿ ವರ್ಗದವರು ಇಂತಹ ಶಿಬಿರಗಳಲ್ಲಿ ಭಾಗವಹಿಸಿ ಧ್ವಜವನ್ನು ಕಟ್ಟುವ ಹಾಗೂ ಇಳಿಸುವ ಬಗ್ಗೆ ಪ್ರತ್ಯಕ್ಷ ಶಿಕ್ಷಣವನ್ನು ಪಡೆದುಕೊಂಡು ತಮ್ಮ ತಮ್ಮ ಕಚೇರಿಗಳಲ್ಲಿ ಶಿಸ್ತುಬದ್ಧವಾಗಿ ರಾಷ್ಟ್ರೀಯ ಹಬ್ಬಗಳನ್ನು ಆಚರಣೆ ಮಾಡುವುದು ಉತ್ತಮ. ಇಂತಹ ಶಿಬಿರಗಳು ಇನ್ನೂ ಹೆಚ್ಚಾಗಿ ನಡೆಯಬೇಕಾಗಿದೆ ಮುಂದಿನ ದಿನಗಳಲ್ಲಿ ಸಂಘ ಸಂಸ್ಥೆಗಳನ್ನು ಸಂಘಟಿಸಿಕೊಂಡು ತರಬೇತಿ ಕಾರ್ಯಾಗಾರ ಮಾಡಲಾಗುವುದು ಎಂದು ತಿಳಿಸಿದರು.
ಸಂಪನ್ಮೂಲ ಶಿಕ್ಷಕರಾದ ಟಿ.ಎಸ್.ಕುಮಾರಸ್ವಾಮಿ, ಎ.ಆರ್.ಗೋಪಾಲಪ್ಪ, ಡಾ.ಲಕ್ಷ್ಮಣ್ ರವರು ಶಿಬಿರಾರ್ಥಿಗಳ ತಂಡಗಳನ್ನು ರಚನೆ ಮಾಡಿಕೊಂಡು ಅವರಿಗೆ ರಾಷ್ಟ್ರಧ್ವಜ ಕಟ್ಟುವ ಮತ್ತು ಇಳಿಸುವ ಹಾಗೂ ಮಡಿಸುವ ಪ್ರತ್ಯಕ್ಷ ಶಿಕ್ಷಣವನ್ನು ನೀಡಿದರು. ಧ್ವಜ ಮತ್ತು ಧ್ವಜಾವಂದನೆಗೆ ಸಂಬಂಧಿಸಿದಂತೆ ಶಿಬಿರಾರ್ಥಿಗಳಲ್ಲಿದ್ದ ಅನೇಕ ಪ್ರಶ್ನೆಗಳು ಮತ್ತು ಗೊಂದಲಗಳಿಗೆ ಉತ್ತರ ಸಹ ನೀಡಿದರು.
ಶಿಬಿರದಲ್ಲಿ ದಾವಣಗೆರೆಯ ನ್ಯಾಯಾಲಯಗಳ ಸಿಬ್ಬಂದಿಗಳು ಸೇರಿದಂತೆ ವಿವಿಧ ಇಲಾಖೆಯ ಸಿಬ್ಬಂದಿ ವರ್ಗದವರು ಭಾಗವಹಿಸಿದ್ದರು. ಆರ್‍ಎಸ್‍ಐ ಚನ್ನಪ್ಪ ಪೂಜಾರ್ ರವರು ಸ್ವಾಗತಿಸಿದರು, ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ಎ.ಪಿ.ಠಾಕೂರ್ ಕಾರ್ಯಕ್ರಮವನ್ನು ನಿರೂಪಿಸಿದರೆ, ಆರ್‍ಎಸ್‍ಐ ಅಣ್ಣಿಗೇರಿ ವಂದಿಸಿದರು.