ಅಪೌಷ್ಠಿಕತೆಯಿಂದ ಶಿಶು ಮರಣ, ತಾಯಿ ಮರಣ ಆಗಬಾರದು : ಡಾ.ಬಿ.ವಿ.ಗಿರೀಶ್

2 Min Read

ಚಿತ್ರದುರ್ಗ. ಮಾ.15: ಅಪೌಷ್ಟಿಕತೆಯ ಕಾರಣದಿಂದ ಶಿಶು ಮರಣ, ತಾಯಿ ಮರಣ ಆಗಬಾರದು ಎಂದು ಚಿತ್ರದುರ್ಗ ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಬಿ.ವಿ.ಗಿರೀಶ್ ಹೇಳಿದರು.

ಚಿತ್ರದುರ್ಗ ತಾಲ್ಲೂಕಿನ ತುರುವನೂರು ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯ ಅಂಗನವಾಡಿ ಕೇಂದ್ರದಲ್ಲಿ ಶನಿವಾರ ಆರೋಗ್ಯ ಇಲಾಖೆ ಮತ್ತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಹಯೋಗದೊಂದಿಗೆ ಹಮ್ಮಿಕೊಂಡಿದ್ದ ಗ್ರಾಮ ಆರೋಗ್ಯ ಪೌಷ್ಠಿಕ ದಿನದಲ್ಲಿ ಅವರು ಮಾತನಾಡಿದರು.

ಗರ್ಭಿಣಿ ಆರೈಕೆ, ಬಾಣಂತಿ ಆರೈಕೆ, ಮಕ್ಕಳ ಆರೈಕೆ, ತಾಯಿ ಮಕ್ಕಳ ಆರೋಗ್ಯ ಸೇವೆಯಲ್ಲಿ ಪ್ರಮುಖ ಜವಾಬ್ದಾರಿಗಳಾಗಿವೆ. 12 ವಾರಗಳ ಒಳಗಡೆ ಗರ್ಭಿಣಿಯರನ್ನು ನೋಂದಾಯಿಸಿ, ತಾಯಿ ಕಾರ್ಡ್ ವಿತರಣೆ ಮಾಡಿ. ಪ್ರಾಥಮಿಕ ಹಂತದ ತಪಾಸಣೆ ನಡೆಸಿ ರಕ್ತದ ಒತ್ತಡ ಪರೀಕ್ಷೆ, ಹಿಮೋಗ್ಲೋಬಿನ್ ಪರೀಕ್ಷೆ ದಾಖಲಾತಿ ತೆಗೆದುಕೊಳಿ.  ಪ್ರತಿ ತಿಂಗಳು ಪ್ರಧಾನ ಮಂತ್ರಿ ಸುರಕ್ಷಿತ ಮಾತೃತ್ವ ಅಭಿಯಾನದಲ್ಲಿ ಪಾಲ್ಗೊಳ್ಳುವಂತೆ ಮನವರಿಕೆ ಮಾಡಿ ಪೌಷ್ಟಿಕ ಆಹಾರ ಸೇವನೆಯ ಬಗ್ಗೆ ತಿಳಿಸಿ ಸುರಕ್ಷಿತ ತಾಯ್ತನ ಪಡೆಯುವಂತೆ ಮಾಡಿ ಎಂದು ಹೇಳಿದರು.

ಮನೆ ಆಧಾರಿತ ನವಜಾತ ಶಿಶು ಭೇಟಿ ಕಾರ್ಯಕ್ರಮಗಳ ಬಲವರ್ಧನೆಗೊಳಿಸಿ, ಎದೆ ಹಾಲು ಉಣಿಸುವಿಕೆ, ಮಕ್ಕಳಿಗೆ ನೀಡುವ ಪೂರಕ ಪೌಷ್ಠಿಕ ಆಹಾರದ ಮಾಹಿತಿಯನ್ನು ಗ್ರಾಮ ಆರೋಗ್ಯ ಪೌಷ್ಠಿಕ ದಿನದಂದು ಎಲ್ಲಾ ತಾಯಂದಿರಿಗೂ ತಿಳಿಸಿಕೊಡಿ ಎಂದು ಸಲಹೆ ನೀಡಿದರು.

ತಾಲ್ಲೂಕು ಆರೋಗ್ಯ ಶಿಕ್ಷಣಾಧಿಕಾರಿ ಎನ್.ಎಸ್. ಮಂಜುನಾಥ್ ಮಾತನಾಡಿ, ವಾರದಲ್ಲಿ ಎರಡು ದಿನ ಪ್ರತಿ ಮಂಗಳವಾರ ಮತ್ತು ಶುಕ್ರವಾರ ಗೃಹ ಆರೋಗ್ಯ ಸೇವೆ ಒದಗಿಸಲು ಸಮುದಾಯ ಆರೋಗ್ಯ ಅಧಿಕಾರಿಗಳು, ಪ್ರಾಥಮಿಕ ಆರೋಗ್ಯ ಸುರಕ್ಷತಾ ಅಧಿಕಾರಿಗಳು, ಆಶಾ ಕಾರ್ಯಕರ್ತೆಯರು, ಆರೋಗ್ಯ ನಿರೀಕ್ಷಣಾಧಿಕಾರಿಗಳು ನಿಮ್ಮ ಮನೆಗಳಿಗೆ ಭೇಟಿ ನೀಡುತ್ತಾರೆ. ಸಾಂಕ್ರಾಮಿಕವಲ್ಲದ ರೋಗಗಳಾದ ರಕ್ತದ ಒತ್ತಡ, ಮಧುಮೇಹ, ಬಾಯಿ ಕ್ಯಾನ್ಸರ್, ಸ್ತನ ಕ್ಯಾನ್ಸರ್ ತಪಾಸಣೆ ನಡೆಸಿ ಸೂಕ್ತ ಚಿಕಿತ್ಸೆಯ ಮಾರ್ಗದರ್ಶನ ಉಚಿತವಾಗಿ ನೀಡುತ್ತಾರೆ. ಈ ಸಂದರ್ಭದಲ್ಲಿ 30 ವರ್ಷದ ಮೇಲ್ಪಟ್ಟ ಎಲ್ಲಾ ನಾಗರಿಕರು ತಪಾಸಣೆ ಮಾಡಿಸಿಕೊಳ್ಳಿ. ಮಧುಮೇಹ, ರಕ್ತದ ಒತ್ತಡ ರೋಗಗಳಿಂದ ಮುಕ್ತಿ ಪಡೆಯಿರಿ, ಅಲ್ಲದೆ ಮಕ್ಕಳಿಗೆ ಕಾಲಕಾಲಕ್ಕೆ 12 ಮಾರಕ ರೋಗಗಳ ವಿರುದ್ಧ ಲಸಿಕೆ ಕೊಡಿಸಿ ಎಂದು ಹೇಳಿದರು.

ಈ ದಿನ ನಿಮ್ಮ ಮುಂದೆ ಪೌಷ್ಠಿಕ ಆಹಾರದ ಪ್ರಾತ್ಯಕ್ಷಿಕೆ ನೀಡಲಾಗಿದೆ. ನುಗ್ಗೆಕಾಯಿ, ನುಗ್ಗೆ ಸೊಪ್ಪಿನಲ್ಲಿ ಹೇರಳವಾಗಿ ಕಬ್ಬಿನಾಂಶ, ಕ್ಯಾಲ್ಸಿಯಂ ಅಂಶ ವಿಟಮಿನ್ ಮತ್ತು ಬಿ ಕಾಂಪ್ಲೆಕ್ಸ್‍ಗಳ ಅಂಶ ದೊರೆಯುತ್ತದೆ. ಬೇಳೆ ಕಾಳು ಸೇವನೆ ಮಾಡಿ ಅಗತ್ಯ ಪೋಷಕಾಂಶಗಳನ್ನು ನಿಮ್ಮ ದೇಹಕ್ಕೆ ನೀಡಿ, ಬೇಸಿಗೆ ಕಾಲವಾಗಿರುವುದರಿಂದ ಶಾಖದ ಗಾಳಿ, ಶಾಖದ ಅಲೆ ಸಂಭವಿಸುವ ಬಗ್ಗೆ ಈಗಾಗಲೇ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿರುತ್ತಾರೆ. ಬಿಸಿಲಿನಲ್ಲಿ ವಿನಾಕಾರಣ ಓಡಾಡುವುದು ಬೇಡ. ನೀರು ಹೆಚ್ಚಾಗಿ ಸೇವಿಸಿ ದ್ರವರೂಪದ ಆಹಾರ ಸೇವಿಸಿ ಬೆಳಿಗ್ಗೆ ಮತ್ತು ಸಂಜೆ ನಿಮ್ಮ ಕೆಲಸಗಳನ್ನು ಮಾಡಿಕೊಳ್ಳಿ. ಗರ್ಭಿಣಿ, ಬಾಣಂತಿಯರು ಮಕ್ಕಳು, ವಯೋ ವೃದ್ಧರು, ಮನೆಯಲ್ಲಿ ನೆರಳಿನಲ್ಲಿ ಇದ್ದು, ಎಳನೀರು ನಿಂಬೆಹಣ್ಣಿನ ರಸ ಹೆಚ್ಚು ಹೆಚ್ಚು ಕುಡಿಯರಿ. ಉಷ್ಣಾಘಾತ, ನಿರ್ಜಲೀಕರಣ ಆಗದಂತೆ ನೋಡಿಕೊಂಡು ನಿಮ್ಮ ಆರೋಗ್ಯ ಕಾಪಾಡಿಕೊಳ್ಳಿ ಎಂದರು.

ಕಾರ್ಯಕ್ರಮದಲ್ಲಿ ಸಮುದಾಯ ಆರೋಗ್ಯ ಅಧಿಕಾರಿಗಳಾದ ಮಾಂತಾ ರಾಥೋಡ್ ನವ್ಯಶ್ರೀ, ನಾಗಮಣಿ, ಪ್ರಾಥಮಿಕ ಆರೋಗ್ಯ ಸುರಕ್ಷತಾಧಿಕಾರಿ ವೀಣಾ, ಹಿರಿಯ ಆರೋಗ್ಯ ನಿರಕ್ಷಣಾಧಿಕಾರಿ ತಿಮ್ಮಣ್ಣ ನಾಯಕ, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆ ಮಂಜುಳಾ, ಹಿರಿಯ ನಾಗರಿಕರ,  ತಾಯಂದಿರು, ಗರ್ಭಿಣಿಯರು ಇದ್ದರು.

Share This Article
Leave a Comment

Leave a Reply

Your email address will not be published. Required fields are marked *