ವರದಿ : ಕೆ.ಎಂ.ಮುತ್ತುಸ್ವಾಮಿ ಕಣ್ಣನ್
ಚಿತ್ರದುರ್ಗ, (ನ.22): ಉಕ್ಕಿನ ಮಹಿಳೆ ಇಂದಿರಾಗಾಂಧಿ ತ್ಯಾಗ ಬಲಿದಾನ ಮಾಡಿರುವುದು ಅನನ್ಯವಾದುದು ಎಂದು ರಾಜ್ಯ ಯುವ ಪ್ರಶಸ್ತಿ ಪುರಸ್ಕೃತ, ಸಿರಿಸಂಪಿಗೆ ಸಂಸ್ಥೆ ಕಾರ್ಯದರ್ಶಿ ಡಿ.ಕುಮಾರ್ ಹೇಳಿದರು.
ನೆಹರು ಯುವ ಕೇಂದ್ರ ಚಿತ್ರದುರ್ಗ, ಚಿನ್ಮಯಿ ಕಲಾ ಯುವತಿಯರ ಮಂಡಳಿ ವತಿಯಿಂದ ದೇವರಾಜ ಅರಸು ವಸತಿ ನಿಲಯದಲ್ಲಿ ಇತ್ತೀಚೆಗೆ ನಡೆದ ರಾಷ್ಟ್ರೀಯ ಏಕೀಕರಣ ದಿನವನ್ನು ಉದ್ಘಾಟಿಸಿ ಮಾತನಾಡಿದರು.
ಇಂದಿರಾಗಾಂಧಿ ದೇಶದ ಪ್ರಧಾನಿಯಾಗಿದ್ದಾಗ ಗರೀಭಿ ಹಠಾವೋ ಸೇರಿದಂತೆ ಹತ್ತು ಹಲವಾರು ಜನಪರ ಯೋಜನೆಗಳನ್ನು ಜಾರಿಗೆ ತಂದರು. ಬ್ಯಾಂಕ್‍ಗಳನ್ನು ರಾಷ್ಟ್ರೀಕರಣಗೊಳಿಸಿ ಬಡವನು ಬ್ಯಾಂಕ್‍ನಲ್ಲಿ ವ್ಯವಹರಿಸುವಂತೆ ಮಾಡಿದ ಕೀರ್ತಿ ಅವರಿಗೆ ಸಲ್ಲುತ್ತದೆ. 1974 ರಲ್ಲಿ ಪರಮಾಣು ಸ್ಪೋಟಿಸಿ ಭಾರತದ ಶಕ್ತಿಯನ್ನು ವಿಶ್ವಕ್ಕೆ ಪರಿಚಯಿಸಿದ ಹೆಗ್ಗಳಿಕೆ ಇಂದಿರಾಗಾಂಧಿಯವರದು ಎಂದು ತಿಳಿಸಿದರು.
ಉಪನ್ಯಾಸಕ ಶಶಿಧರ್ ಮಾತನಾಡಿ ರಾಷ್ಟ್ರದ ಏಕೀಕರಣಕ್ಕಾಗಿ ತಮ್ಮ ಜೀವನವನ್ನೇ ಮುಡುಪಾಗಿಟ್ಟ ಇಂದಿರಾಗಾಂಧಿ ಕೊನೆಗೆ ಅಂಗರಕ್ಷಕರಿಂದಲೇ ಹತ್ಯೆಗೀಡಾಗಿದ್ದು ದೊಡ್ಡ ದುರಂತ. ಅಂತಹ ಮಹಾನ್ ನಾಯಕಿಯ ತತ್ವಾರ್ದಶಗಳನ್ನು ಪಾಲಿಸಬೇಕಿದೆ ಎಂದು ಹೇಳಿದರು.
ವೆಂಕಟೇಶ್ ಮಾತನಾಡುತ್ತ ದೇಶ ವಿಭಜನೆ ಸಂದರ್ಭದಲ್ಲಿ ಅನೇಕ ಹಿರಿಯರು ದೇಶಕ್ಕಾಗಿ ದುಡಿದಿದ್ದಾರೆ. ಅಂತಹವರನ್ನು ಸ್ಮರಿಸಿಕೊಂಡು ನಾವು ನೀವುಗಳೆಲ್ಲಾ ದೇಶ ಸೇವೆ ಮಾಡಬೇಕಿದೆ ಎಂದರು.
ರಂಗ ಭಂಡಾರ ಕಲಾ ಸಂಘದ ಅಧ್ಯಕ್ಷೆ ಶ್ರೀಮತಿ ಬಿ.ನಿರ್ಮಲ, ಚಿನ್ಮಯಿ ಕಲಾ ಯುವತಿಯರ ಮಂಡಳಿ ಅಧ್ಯಕ್ಷೆ ಗೀತ ಎಸ್, ನಿಲಯ ಪಾಲಕಿ ಶ್ರೀಮತಿ ಜಾಹಿದಾ ಈ ಸಂದರ್ಭದಲ್ಲಿದ್ದರು.
ಕು.ರಂಗಮ್ಮ ಪ್ರಾರ್ಥಿಸಿದರು. ಕು.ಅಂಜಲಿ ವಂದಿಸಿದರು.