ಬೆಂಗಳೂರು: ಇಂಡಿಯಾ ಹೆಸರು ಭಾರತ್ ಎಂದು ಮಾಡುವ ಬಗ್ಗೆ ಸಾಕಷ್ಟು ಪರ ವಿರೋಧ ಕೇಳಿ ಬಂದಿದೆ. ಇದರ ನಡುವೆ ಈಗಾಗಲೇ ಎನ್ ಸಿ ಇ ಆರ್ ಟಿ ಇಂಡಿಯಾ ಬದಲಿಗೆ ಪಠ್ಯ ಪುಸ್ತಕದಲ್ಲಿ ಭಾರತ್ ಎಂದು ಬದಲಾಯಿಸಲು ಸೂಚನೆ ನೀಡಿದೆ. ಈ ಸಂಬಂಧ ಮಾತನಾಡಿರುವ ಡಿಸಿಎಂ ಡಿಕೆ ಶಿವಕುಮಾರ್, ಈ ರೀತಿಯ ಪ್ರಯತ್ನಗಳು ಜನರನ್ನು ಗೊಂದಲಕ್ಕೆ ಸಿಲುಕಿಸುವ ಪ್ರಯತ್ನ ಎಂದು ಕೇಂದ್ರ ಸರ್ಕಾರದ ಮೇಲೆ ವಾಗ್ದಾಳಿ ನಡೆಸಿದ್ದಾರೆ.
ನಾವೂ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ, ಇಂಡಿಯನ್ ಅಡ್ಮಿನಿಸ್ಟ್ರೇಟಿವ್ ಸರ್ವೀಸ್, ಇಂಡಿಯನ್ ಫಾರಿನ್ ಸರ್ವೀಸ್ ಅಂತ ಯಾಕೆ ಹೇಳುತ್ತಿದ್ದೀವಿ..? ನಮ್ಮ ಪಾಸ್ ಪೋರ್ಟ್ ನಲ್ಲೂ ರಿಪಬ್ಲಿಕ್ ಆಫ್ ಇಂಡಿಯಾ ಅಂತಾನೇ ಇದೆ. ಅವರು ಭಾರತೀಯರ ಮನಸ್ಸನ್ನು ಏಕೆ ಗೊಂದಲಗೊಳಿಸುತ್ತಿದ್ದಾರೆ ಎಂದು ಕೇಂದ್ರ ಸರ್ಕಾರವನ್ನು ಡಿಕೆ ಶಿವಕುಮಾರ್ ಪ್ರಶ್ನಿಸಿದ್ದಾರೆ. ಇದು ಸಂಪೂರ್ಣವಾಗಿ ಜನ ವಿರೋಧಿ, ಇಂಡಿಯಾ ವಿರೋಧಿಯಾಗಿದೆ ಎಂದಿದ್ದಾರೆ.
ನೀವೂ ಭಾರತದ ಇತಿಹಾಸವನ್ನು ಬದಲಾಯಿಸುವುದಕ್ಕೆ ಆಗಲ್ಲ. ಕರ್ನಾಟಕ ಈ ಹಿಂದೆ ಏನಿದೆಯೋ ಅದನ್ನೇ ಮುಂದುವರೆಸುತ್ತದೆ. ಎನ್ ಸಿ ಇ ಆರ್ ಟಿಗೆ ಎನ್ಡಿಎ ಸರ್ಕಾರ ಒತ್ತಡ ಏರುತ್ತಿದೆ. ಇದು ಸಂಪೂರ್ಣವಾಗಿ ತಪ್ಪು. ಹೊಸ ಪಠ್ಯಪುಸ್ತಕ ಮತ್ತು ಅಭಿವೃದ್ಧಿ ಪ್ರಕ್ರಿಯೆಯಲ್ಲಿದೆ. ವಿಷಯಾನುಸಾರ ತಜ್ಞರ ಗುಂಪುಗಳು ಅದಕ್ಕೆ ಸೂಚನೆ ನೀಡುತ್ತಿದ್ದಾರೆ. ಆದ್ದರಿಂದ ವಿಷಯಗಳ ಕುರಿತು ಮಾಧ್ಯಮದಲ್ಲಿ ಆಗುತ್ತಿರುವ ಸುದ್ದಿಗಳ ಬಗ್ಗೆ ಪ್ರತಿಕ್ರಿಯೆ ನೀಡಲು ಇದು ಅಕಾಲಿಕ ಎಂದಿದ್ದಾರೆ.