ಸುದ್ದಿಒನ್, ಡಿಸೆಂಬರ್.01 : ಇಂದು ರಾಯ್‌ಪುರ ಮೈದಾನದಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ ನಾಲ್ಕನೇ ಟಿ20 ಪಂದ್ಯದಲ್ಲಿ ಭಾರತ 20 ರನ್‌ಗಳ ಜಯ ಸಾಧಿಸಿದೆ.
ಇದರೊಂದಿಗೆ ಭಾರತ ಇನ್ನೂ ಒಂದು ಪಂದ್ಯ ಬಾಕಿ ಇರುವಂತೆಯೇ 3-1 ಅಂತರದಲ್ಲಿ ಸರಣಿ ವಶಪಡಿಸಿಕೊಂಡಿದೆ. 175 ರನ್ ಗಳ ಗುರಿಯೊಂದಿಗೆ ಕಣಕ್ಕೆ ಇಳಿದ ಆಸೀಸ್ ನಿಗದಿತ 20 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 154 ರನ್ ಮಾತ್ರ ಗಳಿಸಿತು.
ಭಾರತದ ಬೌಲರ್‌ಗಳಲ್ಲಿ ಅಕ್ಷರ್ ಪಟೇಲ್ ಮೂರು, ದೀಪಕ್ ಚಹಾರ್ ಎರಡು, ರವಿ ಬಿಷ್ಟೋಯ್ ಮತ್ತು ಅವೇಶ್ ಖಾನ್ ತಲಾ ಒಂದು ವಿಕೆಟ್ ಪಡೆದರು.
ಆಸ್ಟ್ರೇಲಿಯಾದ ಬ್ಯಾಟ್ಸ್ ಮನ್ ಗಳಲ್ಲಿ ಮ್ಯಾಥ್ಯ ವೇಡ್ (36) ಗರಿಷ್ಠ ಸ್ಕೋರರ್ ಎನಿಸಿಕೊಂಡರು. ಮೊದಲು ಬ್ಯಾಟ್ ಮಾಡಿದ ಭಾರತ ನಿಗದಿತ 20 ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ 174 ರನ್ ಗಳಿಸಿತು. ಟೀಂ ಇಂಡಿಯಾ ಬ್ಯಾಟ್ಸ್ ಮನ್ ಗಳ ಪೈಕಿ ರಿಂಕು ಸಿಂಗ್ ಮತ್ತೊಮ್ಮೆ ಅದ್ಭುತ ಇನ್ನಿಂಗ್ಸ್ ಆಡಿದರು.
ರಿಂಕು 29 ಎಸೆತಗಳಲ್ಲಿ 4 ಬೌಂಡರಿ ಹಾಗೂ 2 ಸಿಕ್ಸರ್ ನೆರವಿನಿಂದ 46 ರನ್ ಗಳಿಸಿದರು. ರಿಂಕು ಅವರೊಂದಿಗೆ ಜಿತೇಶ್ ಶರ್ಮಾ (35), ಯಶಸ್ವಿ ಜೈಶ್ವಾಲ್ (37) ಮತ್ತು ರುತುರಾಜ್ ಗಾಯಕ್ವಾಡ್ (32) ರನ್ ಗಳಿಸಿ ಮಿಂಚಿದರು.
ಆಸೀಸ್ ಬೌಲರ್‌ಗಳ ಪೈಕಿ ಬೆನ್ ದ್ವಾರಶೂಯಿಸ್ ಮೂರು ವಿಕೆಟ್ ಪಡೆದರು.ಜೇಸನ್ ಬೆಹೆಂಡಾರ್ಫ್ ಮತ್ತು ಸಂಗ ತಲಾ ಎರಡು ವಿಕೆಟ್ ಪಡೆದರು.