India vs Nepal, Asia Cup 2023 : ನೇಪಾಳ ವಿರುದ್ಧ ಗೆದ್ದ ಭಾರತ : ಸೆಪ್ಟೆಂಬರ್ 10 ರಂದು ಪಾಕ್ ವಿರುದ್ಧ ರೋಚಕ ಕದನ

2 Min Read

 

ಸುದ್ದಿಒನ್ : 2023ರ ಏಷ್ಯಾಕಪ್‌ನಲ್ಲಿ ಟೀಂ ಇಂಡಿಯಾ ಸೂಪರ್-4 ಹಂತ ತಲುಪಿದೆ.  ನೇಪಾಳ ವಿರುದ್ಧದ ಪಂದ್ಯದಲ್ಲಿ 10 ವಿಕೆಟ್‌ಗಳ ಜಯದ ನಂತರ ಮೂರು ಅಂಕಗಳೊಂದಿಗೆ ಮುಂದಿನ ಹಂತಕ್ಕೆ ಅರ್ಹತೆ ಪಡೆದಿದೆ.

ಈ ಪಂದ್ಯದಲ್ಲಿ ಮೊದಲು ಟಾಸ್ ಗೆದ್ದ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ನೇಪಾಳಕ್ಕೆ ಬ್ಯಾಟಿಂಗ್ ಆಡಲು ಬಿಟ್ಟುಕೊಟ್ಟರು. ಬ್ಯಾಟ್ಸ್‌ಮನ್‌ಗಳು ಉತ್ತಮ ಪ್ರದರ್ಶನ ನೀಡಿದ್ದರಿಂದಾಗಿ ನೇಪಾಳ 48.2 ಓವರ್‌ಗಳಲ್ಲಿ 230 ರನ್‌ಗಳಿಗೆ ಆಲೌಟಾಯಿತು. ಭಾರತದ ಬೌಲರ್‌ಗಳಲ್ಲಿ ರವೀಂದ್ರ ಜಡೇಜಾ 3, ಸಿರಾಜ್ 3, ಶಮಿ 1, ಹಾರ್ದಿಕ್ ಪಾಂಡ್ಯ 1, ಶಾರ್ದೂಲ್ ಠಾಕೂರ್ 1 ವಿಕೆಟ್ ಪಡೆದರು.

ಆ ನಂತರ ಬ್ಯಾಟಿಂಗ್ ಆರಂಭಿಸಿದ ಭಾರತ  2.1 ಓವರ್‌ಗಳಲ್ಲಿ 17/0 ರನ್‌ಗಳ ಹಂತದಲ್ಲಿ ಮಳೆಯು ಪಂದ್ಯಕ್ಕೆ ಅಡ್ಡಿಪಡಿಸಿತು. ಬಹಳ ಸಮಯದವರೆಗೂ ಆಟ ಸ್ಥಗಿತಗೊಂಡಿತ್ತು.
ಅಂತಿಮವಾಗಿ, ಮಳೆ ಕಡಿಮೆಯಾಗುತ್ತಿದ್ದಂತೆ ಅಂಪೈರ್‌ಗಳು ಡಕ್‌ವರ್ತ್ ಲೂಯಿಸ್ ನಿಯಮದಂತೆ 23 ಓವರ್‌ಗಳಲ್ಲಿ 145 ರನ್‌ಗಳ ಗುರಿಯನ್ನು ನೀಡಿದರು.

ಭಾರತದ ಆರಂಭಿಕ ಆಟಗಾರರಾದ ರೋಹಿತ್ ಶರ್ಮಾ ಮತ್ತು ಶುಭಮನ್ ಗಿಲ್ ನೇಪಾಳದ ಬೌಲರ್‌ಗಳಿಗೆ ಬೌಂಡರಿ ಹಾಗೂ ಸಿಕ್ಸರ್ ಗಳ ಮೂಲಕ ರನ್ ಗಳ ರುಚಿ ತೋರಿಸಿದರು. 20.1 ಓವರ್‌ಗಳಲ್ಲಿ ಒಂದೇ ಒಂದು ವಿಕೆಟ್‌ ನಷ್ಟವಾಗದೇ ಗುರಿ ತಲುಪಿದರು. ರೋಹಿತ್ ಶರ್ಮಾ (74) ಮತ್ತು ಶುಭಮನ್ ಗಿಲ್ (67) ಔಟಾಗದೆ ಉಳಿದರು.

ಸೂಪರ್-4 ಹಂತ ತಲುಪಿದ ನಂತರ ಭಾರತ ಸೆಪ್ಟೆಂಬರ್ 10 ರಂದು ಮತ್ತೊಮ್ಮೆ ಪಾಕಿಸ್ತಾನವನ್ನು ಎದುರಿಸಲಿದೆ. ಉಳಿದ ಎರಡು ಪಂದ್ಯಗಳು ಸೆಪ್ಟೆಂಬರ್ 12 ಮತ್ತು ಸೆಪ್ಟೆಂಬರ್ 15 ರಂದು ನಡೆಯಲಿದೆ. ಭಾರತ ಈ ಪಂದ್ಯಗಳನ್ನು ಬಿ ಗುಂಪಿನಿಂದ ಸೂಪರ್-4 ಅರ್ಹತೆ ಪಡೆದ ತಂಡಗಳ ವಿರುದ್ಧ ಆಡಲಿದೆ.

ಗ್ರೂಪ್-ಎ ನಿಂದ ಪಾಕಿಸ್ತಾನ ಈಗಾಗಲೇ ಸೂಪರ್-4ಗೆ ಅರ್ಹತೆ ಪಡೆದಿದೆ. ಮತ್ತು ಈ ಪಂದ್ಯದ ಗೆಲುವಿನೊಂದಿಗೆ ಭಾರತ ಕೂಡ ಸೂಪರ್-4ಗೆ ಅರ್ಹತೆ ಪಡೆದಿದೆ. ಇನ್ನು ಗ್ರೂಪ್-ಬಿ ವಿಚಾರಕ್ಕೆ ಬಂದರೆ ಇಲ್ಲಿಯವರೆಗೂ ಅದರಲ್ಲಿ ಒಂದೇ ಒಂದು ತಂಡವೂ ಮುಂದಿನ ಹಂತಕ್ಕೆ ತಲುಪಿಲ್ಲ. ಮಂಗಳವಾರ ನಡೆಯಲಿರುವ ಅಂತಿಮ ಲೀಗ್ ಹಂತದ ಪಂದ್ಯ ಬಿ ಗುಂಪಿನಲ್ಲಿ ಅರ್ಹತೆ ಪಡೆದ ತಂಡಗಳನ್ನು ನಿರ್ಧರಿಸಲಿದೆ.

ಮಂಗಳವಾರ ಅಫ್ಘಾನಿಸ್ತಾನ-ಶ್ರೀಲಂಕಾ ತಂಡಗಳು ಮುಖಾಮುಖಿಯಾಗಲಿವೆ. ಈ ಪಂದ್ಯದಲ್ಲಿ ಶ್ರೀಲಂಕಾ ಗೆದ್ದರೆ 4 ಅಂಕಗಳೊಂದಿಗೆ ಸೂಪರ್-4 ಹಂತ ತಲುಪಲಿದೆ. ಜತೆಗೆ ಬಾಂಗ್ಲಾದೇಶ ಕೂಡ ಮುನ್ನಡೆ ಸಾಧಿಸಲಿದೆ. ಒಂದು ವೇಳೆ ಅಫ್ಘಾನಿಸ್ತಾನ ಗೆದ್ದರೆ ಆಟ ಮತ್ತಷ್ಟು ರೋಚಕವಾಗಿರುತ್ತದೆ. ಆಗ ಮೂರು ತಂಡಗಳ ಪೈಕಿ ಉತ್ತಮ ರನ್ ರೇಟ್ ಹೊಂದಿರುವ ಎರಡು ತಂಡಗಳು ಸೂಪರ್-4 ಹಂತಕ್ಕೆ ಪ್ರವೇಶಿಸಲಿವೆ.

Share This Article
Leave a Comment

Leave a Reply

Your email address will not be published. Required fields are marked *