ಅಂಗಾಂಗಗಳ ದಾನದಲ್ಲಿ ಅಮೆರಿಕ ಹಾಗೂ ಚೀನಾ ದೇಶಗಳ ಬಳಿಕ, ಭಾರತ ಮೂರನೇ ಸ್ಥಾನದಲ್ಲಿದೆ. 2012-13 ನೇ ಸಾಲಿಗೆ ಹೋಲಿಸಿದರೆ, ಅಂಗಾಂಗ ದಾನದ ಪ್ರಮಾಣವು ನಾಲ್ಕು ಪಟ್ಟು ಹೆಚ್ಚಾಗಿದೆ. ದೇಶದಲ್ಲಿ ವಾರ್ಷಿಕ ಅಂಗಾಂಗ ದಾನಗಳ ಸಂಖ್ಯೆ 2013 ರಲ್ಲಿ 4,990 ಆಗಿದ್ದು, 2019 ರಲ್ಲಿ 12,746 ಕ್ಕೆ ಏರಿದೆ.
ಅಂಗಾಂಗ ದಾನದ ಪ್ರಮಾಣದಲ್ಲಿ ನಾಲ್ಕು ಪಟ್ಟು ಏರಿಕೆ ಕಂಡಿದ್ದರೂ, ಅಂಗಾಂಗಗಳ ಬೇಡಿಕೆಯನ್ನು ಪೂರೈಸಲು ಇನ್ನಷ್ಟು ಹಾದಿಯನ್ನು ಸವೆಸಬೇಕಾಗಿದೆ. ದೇಶದಲ್ಲಿ ಕೇವಲ 3% ಜನರು ಮಾತ್ರ ಅಂಗಾಂಗ ದಾನಕ್ಕೆ ನೋಂದಣಿ ಮಾಡಿಕೊಳ್ಳುತ್ತಿದ್ದಾರೆ. ಒಂದು ಅಂದಾಜಿನ ಪ್ರಕಾರ, ದೇಶದಲ್ಲಿ 10 ಲಕ್ಷ ಜನರಲ್ಲಿ, 0.65 ಮಂದಿ ಮಾತ್ರ ಅಂಗಾಂಗ ದಾನ ಮಾಡುತ್ತಿದ್ದಾರೆ. ಸ್ಪೇನ್ ನಲ್ಲಿ ಈ ಪ್ರಮಾಣ 35 ಹಾಗೂ ಅಮೆರಿಕದಲ್ಲಿ 26 ರಷ್ಟಿದೆ. ಕೋವಿಡ್-19 ಸಾಂಕ್ರಾಮಿಕದಿಂದ ಭಾರತ ಸೇರಿದಂತೆ ಜಗತ್ತಿನೆಲ್ಲೆಡೆ ಅಂಗಾಂಗ ದಾನದ ಪ್ರಮಾಣ ಇಳಿಕೆಯಾಗಿದೆ. ಆದರೂ ಸಾಂಕ್ರಾಮಿಕಕ್ಕಿಂತ ಹಿಂದೆಯೂ ಅಂಗಾಂಗ ದಾನ ಹೆಚ್ಚಿನ ಪ್ರಮಾಣದಲ್ಲೇನೂ ನಡೆಯುತ್ತಿರಲಿಲ್ಲ.
ಏಮ್ಸ್ ನ 2019 ರ ಅಂಕಿ ಅಂಶದ ಪ್ರಕಾರ, ವಾರ್ಷಿಕವಾಗಿ 1.5 ರಿಂದ 2 ಲಕ್ಷ ಜನರಿಗೆ ಮೂತ್ರಪಿಂಡ ಕಸಿಯ ಅಗತ್ಯವಿದೆ. ಆದರೆ ಈ ಪೈಕಿ 8,000 ಜನರು ಅಂದರೆ 4% ರಷ್ಟು ಮಂದಿ ಮಾತ್ರ ಮೂತ್ರಪಿಂಡ ಪಡೆಯುತ್ತಿದ್ದಾರೆ. ಇದೇ ರೀತಿ ಪ್ರತಿ ವರ್ಷ 80,000 ರೋಗಿಗಳಿಗೆ ಯಕೃತ್ತು (ಲಿವರ್) ಕಸಿ ಅಗತ್ಯವಿದ್ದು, 1,800 ಮಂದಿ ಮಾತ್ರ ಕಸಿ ಮಾಡಿಸಿಕೊಳ್ಳಲು ಸಾಧ್ಯವಾಗುತ್ತಿದೆ. ವಾರ್ಷಿಕ ಸುಮಾರು 1 ಲಕ್ಷ ರೋಗಿಗಳಿಗೆ ಕಾರ್ನಿಯಾ ಅಥವಾ ಕಣ್ಣು ಸಂಬಂಧಿತ ಕಸಿ ಅಗತ್ಯವಿದ್ದು, ಅರ್ಧಕ್ಕಿಂತಲೂ ಕಡಿಮೆ ಮಂದಿಗೆ ಇದು ಲಭ್ಯವಾಗುತ್ತಿದೆ. ಹೃದಯ ಕಸಿ ಅಗತ್ಯವಿರುವ 10,000 ರೋಗಿಗಳಲ್ಲಿ 200 ಮಂದಿಗೆ ಮಾತ್ರ ಸರಿಯಾದ ಹೊಂದಾಣಿಕೆಯಾಗಿ ದಾನ ದೊರೆಯುತ್ತಿದೆ.
ಜನರಲ್ಲಿ ಜಾಗೃತಿಯ ಕೊರತೆಯಿಂದಾಗಿ ಅಂಗಾಂಗ ದಾನ ಕಡಿಮೆಯಾಗಿದೆ. ಅಂಗಾಂಗ ದಾನ ಹೆಚ್ಚಿಸಲು ಇಡೀ ಸಮಾಜ, ಜಾಗೃತ ನಾಗರಿಕರು, ವೈದ್ಯರು ಹಾಗೂ ಮಾಧ್ಯಮಗಳು ತಮ್ಮ ಪಾತ್ರ ವಹಿಸಬೇಕಿದೆ. ಈ ಮೂಲಕ ಅಂಗಾಂಗ ದಾನದ ಪ್ರಮಾಣ ಹೆಚ್ಚಿಸಬೇಕಿದೆ.