ಚಿತ್ರದುರ್ಗ, (ಅಕ್ಟೋಬರ್.26) : 100 ಕೋಟಿ ಲಸಿಕೆ ನೀಡಿದ ವಿಶ್ವದ ಮೊದಲ ದೇಶ ಎಂಬ ಹೆಗ್ಗಳಿಕೆಗೆ ಭಾರತ ಪಾತ್ರವಾಗಿದೆ. ಇಂತಹ ಸಂದರ್ಭದಲ್ಲಿ ನಮ್ಮ ಕ್ಷೇತ್ರದ ವ್ಯಾಪ್ತಿಯ ಜನರು ತಪ್ಪು ತಿಳುವಳಿಕೆ ಹೋಗಲಾಡಿಸಿ ಲಸಿಕೆ ಪಡೆಯಿರಿ ಎಂದು ತಾಲ್ಲೂಕು ಪಂಚಾಯತ್ ಸದಸ್ಯ ಎಸ್.ಸುರೇಶ್ ಹೇಳಿದರು.
ಚಿತ್ರದುರ್ಗ ತಾಲ್ಲೂಕಿನ ಹುಣಸೆಕಟ್ಟೆ ಮತ್ತು ಹಿರೇಗುಂಟನೂರು ಗೊಲ್ಲರಹಟ್ಟಿ ಗ್ರಾಮಗಳಲ್ಲಿ ಲಸಿಕೆ ಹಿಂಜರಿಕೆ ಇದ್ದ ಕಾರಣ ಮಂಗಳವಾರ ತಾಲ್ಲೂಕು ಆರೋಗ್ಯಾಧಿಕಾರಿಗಳ ತಂಡ ಗ್ರಾಮಕ್ಕೆ ಭೇಟಿ ನೀಡಿ ಗ್ರಾಮ ನಿಘಾವಣಾ ತಂಡ ಮತ್ತು ಮನೆ ಮನೆ ಭೇಟಿ ಗುಂಪು ಸಭೆ ಗ್ರಾಮಸ್ಥರೊಂದಿಗೆ ಸಭೆ ನಡೆಸಲಾಯಿತು.
ತಾಲ್ಲೂಕು ಆರೋಗ್ಯ ಶಿಕ್ಷಣಾಧಿಕಾರಿ ಎನ್.ಎಸ್. ಮಂಜುನಾಥ್ ಮಾತನಾಡಿ, ಲಸಿಕೆ ಸುರಕ್ಷಿತವಾಗಿದೆ ಯಾವುದೇ ಅನುಮಾನ ಬೇಡ ನಿಮ್ಮ ಕುಟುಂಬದ ರಕ್ಷಣೆ ನಿಮ್ಮ ಜೊತೆ ಇರುವ ಸಮುದಾಯದ ಸುರಕ್ಷತೆಗಾಗಿ ಲಸಿಕೆ ಪಡೆಯಿರಿ ಎಂದರು.
ಗ್ರಾಮದಲ್ಲಿ ಜಾಥಾ ನಡೆಸಿ ಲಸಿಕೆ ಹಾಕಿಸಿ ಕೋವಿಡ್ ಓಡಿಸಿ ಎಂದು ಘೋಷಣೆ ಕೂಗಿ ಜಾಗೃತಿ ಮೂಡಿಸಿ 250 ಜನರಿಗೆ ಲಸಿಕೆ ನೀಡಲಾಯಿತು.
ಕಾರ್ಯಕ್ರಮದಲ್ಲಿ ಆರೋಗ್ಯ ನಿರೀಕ್ಷಣಾಧಿಕಾರಿ ಶಾಂತಮ್ಮ, ಪರ್ವಿನ್, ಹನೀಫ್, ಏಕಾಂತ್, ಆಶಾ ಕಾರ್ಯಕರ್ತೆ ಸಿದ್ದಮ್ಮ, ಶಾಲಾ ಶಿಕ್ಷಕರಾದ ಚಂದ್ರಪ್ಪ ಉಪಸ್ಥಿತರಿದ್ದರು.