ದಾವಣಗೆರೆ: ಪ್ರಜ್ಞಾವಂತರು ದೇಶದ ಆಳುವ ವರ್ಗಕ್ಕೆ ಬಂದರೆ ಭಾರತ ಸುಭದ್ರವಾಗಿರುತ್ತದೆ ಎಂದು ಖ್ಯಾತ ವ್ಯಂಗ್ಯಚಿತ್ರಕಾರ ಹೆಚ್.ಬಿ.ಮಂಜುನಾಥ್ ಹೇಳಿದರು.
ನಗರದ ಮಾಗನೂರು ಬಸಪ್ಪ ಕಾಲೇಜಿನಲ್ಲಿ ಗುರುವಾರ ನಡೆದ ವಿದ್ಯಾರ್ಥಿವೇದಿಕೆ ಉದ್ಘಾಟನೆ ಹಾಗು ಟ್ಯಾಲೆಂಟ್ ಹಂಟ್ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿ ಅವರು ಮಾತನಾಡಿದರು.
ಹಲವು ದಶಕಗಳ ಹಿಂದೆ ಕೊನೆಯ ಸಾಲಿನಲ್ಲಿರುವ ವಿದ್ಯಾರ್ಥಿಗಳ ದೇಶ ಆಳುತ್ತಿದ್ದರು. ಆದರೆ ಈಗ ಪ್ರಜ್ಞಾವಂತರು ಬರುತ್ತಿರುವುದು ಆಶಾದಾಯಕ ಬೆಳವಣಿಗೆ. ಒಂದು ಕಾಲದಲ್ಲಿ ಪರಕೀಯರ ಗುಲಾಮಗಿರಿಯಲ್ಲಿ ನರಳಿದ ಭಾರತೀಯರು ಇಂದು ಜಗತ್ತನ್ನು ಆಳುವ ಮಟ್ಟಿಗೆ ಬೆಳೆದಿದ್ದಾರೆ. ಇದಕ್ಕೆ ಮುಖ್ಯ ಕಾರಣ ಭಾರತೀಯ ಶಿಕ್ಷಣ ಪದ್ಧತಿ ಹಾಗು ಕ್ಷಮತೆ. ನಮ್ಮ ದೇಶದ ಅದೆಷ್ಟೋ ಪ್ರತಿಭೆಗಳು ಜಗತ್ತಿನ ವಿವಿಧ ದೇಶಗಳಲ್ಲಿ ಉತ್ತಮ ಹೆಸರು ಮಾಡುವಂತೆ ಕೆಲಸ ನಿರ್ವಹಿಸುತ್ತಿದ್ದಾರೆ. ಇದು ಇಂದಿನ ಶಿಕ್ಷಣದಿಂದ ಸಾಧ್ಯ ಎಂದು ತಿಳಿಸಿದರು.
ವಿದ್ಯಾರ್ಥಿ ಜೀವನದಲ್ಲಿ ಪದವಿ ಪೂರ್ವ ಹಂತ ಬಹಳ ಮುಖ್ಯವಾದುದಾಗಿದೆ. ಕಾರಣ ಇಲ್ಲಿ ಶ್ರದ್ಧೆಯಿಂದ ಅಭ್ಯಸಿಸಿದರೆ ಭವಿಷ್ಯ ಉತ್ತಮವಾಗಿ ರೂಪುಗೊಳ್ಳುವುದರಲ್ಲಿ ಸಂಶಯವಿಲ್ಲ. ಯಾವುದೇ ಒಂದು ರಂಗದಲ್ಲಿ ಸಾಧನೆ ಮಾಡಬೇಕಾದರೆ ಅದಕ್ಕೆ ತಕ್ಕಂತೆ ಪರಿಶ್ರಮವಿರುತ್ತದೆ. ಶ್ರಮಕ್ಕೆ ತಕ್ಕ ಪ್ರತಿಫಲ ಸಿಗುತ್ತದೆ. ವಿದ್ಯಾರ್ಥಿಗಳು ಮುಂದಿನ ಗುರಿಯನ್ನು ಪ್ರತಿಕ್ಷಣವೂ ಜ್ಞಾಪಿಸಿಕೊಂಡು ಇಂದು ಅಭ್ಯಸಿಸಿರಿ ಯಶಸ್ಸು ನಿಮ್ಮದಾಗುತ್ತದೆ. ಪೋಷಕರು ಇಂದು ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ನೀಡಿ ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡುತ್ತಿದ್ದಾರೆ. ನಿಮ್ಮ ವಿದ್ಯಾಭ್ಯಾಸದ ಶ್ರಮದ ಹಿಂದೆ ಹೆತ್ತವರಿನ ಬೆವರಿನ ಘಮಲು ಇರುತ್ತದೆ ಅದನ್ನು ಎಂದಿಗೂ ಮರೆಯಬೇಡಿ ಎಂದು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.
ವಿದ್ಯಾರ್ಥಿ ವೇದಿಕೆಯನ್ನು ಕಾಲೇಜಿನ ನಿರ್ದೇಶಕರಾದ ಡಾ.ಜಿ.ಎನ್.ಹೆಚ್.ಕುಮಾರ್ ಉದ್ಘಾಟಿಸಿ ಮಾತನಾಡಿ, ಕಾಲೇಜಿನಲ್ಲಿ ಉತ್ತಮ ಬೋಧಕ ವರ್ಗವಿದೆ. ವಿದ್ಯಾಭ್ಯಾಸದಲ್ಲಿ ಏನೇ ಸಮಸ್ಯೆ ಬಂದರೂ ಉಪನ್ಯಾಸಕರ ಜೊತೆ ಮುಕ್ತವಾಗಿ ಚರ್ಚಿಸಿ ಕಠಿಣ ಶ್ರಮದಿಂದ ಅಭ್ಯಾಸ ಮಾಡಿರಿ ಎಂದು ಸಲಹೆ ನೀಡಿದರು.
ಮಾಗನೂರು ಬಸಪ್ಪ ಪಬ್ಲಿಕ್ ಟ್ರಸ್ಟ್‍ನ ಗೌರವ ಕಾರ್ಯದರ್ಶಿಗಳಾದ ಶರಣ ಸಂಗಮೇಶ್ವರ ಗೌಡರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು.
ಕಾಲೇಜಿನ ಪ್ರಾಂಶುಪಾಲರಾದ ಡಾ.ಪ್ರಸಾದ್ ಬಂಗೇರ ಕಾರ್ಯಕ್ರಮವನ್ನು ಕುರಿತು ಮಾತನಾಡಿದರು. ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಂದ ಸಾಂಸ್ಕøತಿಕ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ಸಭೆಯಲ್ಲಿ ಉಪನ್ಯಾಸಕರಾದ ಸುರೇಖಾ ಜಗದೀಶ್ ಮತ್ತು ಸಿಬ್ಬಂದಿ ವರ್ಗ ಹಾಜರಿದ್ದರು.