ಸುದ್ದಿಒನ್ : ದಕ್ಷಿಣ ಆಫ್ರಿಕಾದಲ್ಲಿ ಕಳೆದ 30 ವರ್ಷಗಳಿಂದ ನನಸಾಗದ ಕನಸು ನನಸಾಗಲಿದೆ ಎಂದು ಭಾವಿಸಿದ್ದ ರೋಹಿತ್ ಶರ್ಮಾ ಪಡೆ ಮೊದಲ ಟೆಸ್ಟ್ ನಲ್ಲಿ ಹೀನಾಯ ಸೋಲು ಕಂಡಿದೆ. ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡೂ ವಿಭಾಗಗಳಲ್ಲಿ ವಿಫಲವಾಗಿ ಇನ್ನಿಂಗ್ಸ್ 32 ರನ್ ಗಳಿಂದ ಸೋಲು ಕಂಡಿತು.
ಇದರಿಂದ ಭಾರತೀಯ ಅಭಿಮಾನಿಗಳು ತೀವ್ರ ನಿರಾಸೆಗೊಂಡಿದ್ದಾರೆ. ಭಾರತ ಮೊದಲ ಇನ್ನಿಂಗ್ಸ್‌ನಲ್ಲಿ 245 ರನ್‌ಗಳಿಗೆ ಆಲೌಟ್ ಆಗಿತ್ತು. 256/5 ಓವರ್‌ನೈಟ್ ಸ್ಕೋರ್‌ನೊಂದಿಗೆ ಮೂರನೇ ದಿನದಾಟ ಆರಂಭಿಸಿದ ದಕ್ಷಿಣ ಆಫ್ರಿಕಾ 408 ರನ್‌ಗಳಿಗೆ ಆಲೌಟ್ ಆಗಿ 163 ರನ್‌ಗಳ ಮುನ್ನಡೆ ಸಾಧಿಸಿತು. ದಕ್ಷಿಣ ಆಫ್ರಿಕಾ ಪರವಾಗಿ ಎಲ್ಗರ್ 185 ರನ್ ಮತ್ತು ಮಾರ್ಕೊ ಜಾನ್ಸೆನ್ 84 ರನ್ ಗಳಿಸಿದರು.
ಎರಡನೇ ಇನ್ನಿಂಗ್ಸ್ ಆರಂಭಿಸಿದ ಟೀಂ ಇಂಡಿಯಾ ಮೇಲಿಂದಮೇಲೆ ವಿಕೆಟ್‌ಗಳನ್ನು ಕಳೆದುಕೊಂಡಿತು. ವಿರಾಟ್ ಕೊಹ್ಲಿ ಮಾತ್ರ (76 ರನ್, 82 ಎಸೆತ, 12 ಬೌಂಡರಿ, 1 ಸಿಕ್ಸರ್) ಏಕಾಂಗಿ ಹೋರಾಟ ನಡೆಸಿದರು. 8 ಬ್ಯಾಟ್ಸ್‌ಮನ್‌ಗಳು ಸಿಂಗಲ್ ಡಿಜಿಟ್ ಸ್ಕೋರ್‌ಗೆ ಸೀಮಿತರಾದರು. ಭಾರತ ತಂಡದ ನಾಯಕ ರೋಹಿತ್ ಶರ್ಮಾ ಡಕ್ ಆಗಿ ಮರಳುವ ಮೂಲಕ ನಿರಾಸೆ ಮೂಡಿಸಿದರು.
ಯಶಸ್ವಿ ಜೈಸ್ವಾಲ್ 5, ಶುಭಮನ್ ಗಿಲ್ 26, ಶ್ರೇಯಸ್ ಅಯ್ಯರ್ 6, ಕೆಎಲ್ ರಾಹುಲ್ 4, ಅಶ್ವಿನ್ 0, ಶಾರ್ದೂಲ್ ಠಾಕೂರ್ 2 ರನ್ ಗಳಿಸಿದರು. ಕೊಹ್ಲಿ ಸ್ವಲ್ಪ ಹೊತ್ತು ಹೋರಾಟ ನಡೆಸಿದರೂ ಅವರಿಗೆ ಜೊತೆಯಾಗಿ ಯಾವ ಆಟಗಾರನಿಂದಲೂ ಬೆಂಬಲ ಸಿಗಲಿಲ್ಲ. ಕೊನೆಯ ವಿಕೆಟ್ ನೊಂದಿಗೆ ಭಾರತ 131 ರನ್ ಗಳಿಗೆ ಆಲೌಟ್ ಆಯಿತು.
ದಕ್ಷಿಣ ಆಫ್ರಿಕಾದ ಬೌಲರ್‌ಗಳಲ್ಲಿ ಬರ್ಗರ್ 4 ವಿಕೆಟ್ ಹಾಗೂ ಮಾರ್ಕೊ ಜಾನ್ಸನ್ 3 ವಿಕೆಟ್, ರಬಾಡ 2 ವಿಕೆಟ್
ಪಡೆದು ಭಾರತವನ್ನು ಸೋಲಿಸಿದರು.