ಹೆಚ್ಚುತ್ತಿರುವ ಬಿಸಿಲ ಝಳ : ಸಾರ್ವಜನಿಕರು ಅನುಸರಿಸಬೇಕಾದ ಸರಳ ಉಪಾಯಗಳ ಬಗ್ಗೆ ಮಾಹಿತಿ ನೀಡಿದ ಜಿಲ್ಲಾ ಆಯುಷ್ ಅಧಿಕಾರಿ ಡಾ.ಚಂದ್ರಕಾಂತ್ ಎಸ್.ನಾಗಸಮುದ್ರ

2 Min Read

ಚಿತ್ರದುರ್ಗ. ಮೇ.02: ರಾಜ್ಯಾದ್ಯಂತ ಬಿಸಿಲಬೇಗೆ ದಿನೇ ದಿನೇ ಹೆಚ್ಚಾಗುತ್ತಿದ್ದು, ಇನ್ನೂ ಕೆಲವು ದಿನಗಳ ಕಾಲ ಉಷ್ಣ ಹವೆ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಬಿಸಿಲ ಝಳವು ಮನುಷ್ಯನ ಆರೋಗ್ಯದ ಮೇಲೆ ತೀವ್ರತರವಾದ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಆದ ಕಾರಣ ಸಾರ್ವಜನಿಕರು ಬಿಸಿಲಿನ ಝಳದಿಂದ ತಪ್ಪಿಸಿಕೊಳ್ಳಲು ಕೆಲವೊಂದು ಉಪಾಯ ಅನುಸರಿಸುವ ಮೂಲಕ ತಮ್ಮ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ಜಿಲ್ಲಾ ಆಯುಷ್ ಅಧಿಕಾರಿ ಡಾ.ಚಂದ್ರಕಾಂತ್ ಎಸ್ ನಾಗಸಮುದ್ರ ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ.

ಆಯುರ್ವೇದದಲ್ಲಿ ಈ ಕಾಲವನ್ನು ಉತ್ತರಾಯಣದ ಗ್ರೀಷ್ಮ ಋತು ಎಂದು ಕರೆದಿದ್ದು, ಈ ಕಾಲದಲ್ಲಿ ಸೂರ್ಯನ ತಾಪ ಹೆಚ್ಚಾಗಿರುತ್ತದೆ ಹಾಗೂ ವಾತಾವರಣದಲ್ಲಿ ಒಣಹಾವೆ ಇರುತ್ತದೆ. ಈ ಕಾರಣದಿಂದ ಮನುಷ್ಯನ ಶಕ್ತಿ ಸಹಜವಾಗಿ ಕುಂದು ತತ್ಪರಿಣಾಮವಾಗಿ ಜ್ವರ, ಸುಸ್ತು, ಚರ್ಮದ ಸೋಂಕುಗಳು, ತಲೆನೋವು ಇತ್ಯಾದಿ ಕಾಯಿಲೆಗಳು ಹೆಚ್ಚಾಗಿ ಕಂಡುಬರುತ್ತವೆ. ವಿಶೇಷವಾಗಿ ಮಕ್ಕಳಲ್ಲಿ ಈ ತೀವ್ರವಾದ ಬಿಸಿಲು ಮತ್ತು ಉಷ್ಣಾಂಶ ಹೆಚ್ಚು ಅನಾರೋಗ್ಯವನ್ನು ಉಂಟುಮಾಡುತ್ತದೆ.

ಸಾರ್ವಜನಿಕರು ಕೆಲವು ಸರಳ ಉಪಾಯಗಳಿಂದ ಬಿಸಿಲ ಬೇಗೆಯಿಂದ ತಮ್ಮನ್ನು ತಾವು ರಕ್ಷಿಸಿಕೊಳ್ಳಬಹುದಾಗಿದೆ. ಬೇಸಿಗೆ ಕಾಲದಲ್ಲಿ ಸೇವಿಸುವ ಆಹಾರದ ಮೇಲೆ ಗಮನ ಇರಲಿ. ದ್ರವಾಂಶ ಹೆಚ್ಚಾಗಿರುವಂತಹ ಸೊಪ್ಪು, ತರಕಾರಿ, ಹಣ್ಣುಗಳನ್ನು ಹೆಚ್ಚು ಹೆಚ್ಚು ಸೇವಿಸಿ, ಇವು ದೇಹದಲ್ಲಿಯ ನೀರಿನ ಅಂಶವನ್ನು ಸಮತೋಲನದಲ್ಲಿಡಲು ಸಹಾಯಕ. ಮೇಲಿಂದ ಮೇಲೆ ಮಜ್ಜಿಗೆ, ತಂಪಾದ ಮಡಿಕೆಯ ನೀರು ಇತ್ಯಾದಿ ಆರೋಗ್ಯಕರ ಪಾನೀಯಗಳನ್ನು ಸೇವಿಸಿ.

ನೈಸರ್ಗಿಕವಾಗಿ ಸಿಹಿಯಾದ ಹಣ್ಣುಗಳನ್ನು ಹಣ್ಣಿನ ರಸವನ್ನು, ಸರಳವಾಗಿ ಜೀರ್ಣವಾಗುವ ಆಹಾರವನ್ನು ಹಾಗೂ ಮೇಲಿಂದ ಮೇಲೆ ಮಜ್ಜಿಗೆ, ಆರೋಗ್ಯದಾಯಕ ಪಾನೀಯಗಳನ್ನು ಮನೆಯಲ್ಲೇ ತಯಾರಿಸಿ ಸೇವಿಸುವುದು ಉತ್ತಮ. ಹೆಚ್ಚು ಮಸಾಲೆಯುಕ್ತ, ಹುರಿದ, ಕರಿದ ಆಹಾರ ಸೇವನೆ ಬೇಡ. ಬಿಸಿಲಿನ ಝಳದಿಂದ ತಪ್ಪಿಸಿಕೊಳ್ಳಲು ಯಾವಾಗಲೂ ಛತ್ರಿ ಅಥವಾ ತಲೆ ಮೇಲೆ ವಸ್ತ್ರವನ್ನು ಉಪಯೋಗಿಸಿ. ಹತ್ತಿ ಬಟ್ಟೆಗಳನ್ನು ಧರಿಸುವುದು ಸೂಕ್ತ.  ದೇಹಕ್ಕೆ ತಂಪನ್ನು ನೀಡುವಂತಹ ಖರ್ಜೂರ, ಒಣದ್ರಾಕ್ಷಿ, ಸಾಂಪ್ರದಾಯಕವಾಗಿ ತಯಾರಿಸಿದ ತುಪ್ಪ, ಹಾಲಿನಂತಹ ಶಕ್ತಿದಾಯಕ ಆಹಾರ ಸೇವಿಸಬೇಕು.

ಆರೋಗ್ಯದಾಯಕ ಪಾನೀಯಗಳನ್ನು ಮನೆಯಲ್ಲೇ ತಯಾರಿಸಿ ಸೇವಿಸಿ. ಹಣ್ಣಿನ ರಸಗಳನ್ನು ಸೇವಿಸುವ ಅಭ್ಯಾಸ ಮಾಡಿಕೊಳ್ಳಿ. ತೀವ್ರವಾದ ಬಿಸಿಲಿಗೆ ಹೊರಗೆ ಹೋಗದೆ ಮುಂಜಾಗ್ರತೆ ಕೈಗೊಂಡು ತಮ್ಮ ಆರೋಗ್ಯ ಸಂರಕ್ಷಿಸಿಕೊಳ್ಳಬೇಕು ಎಂದು ಜಿಲ್ಲಾ ಆಯುಷ್ ಅಧಿಕಾರಿ ಡಾ.ಚಂದ್ರಕಾಂತ್ ಎಸ್ ನಾಗಸಮುದ್ರ ಅವರು ಸಾರ್ವಜನಿಕರಿಗೆ ಕರೆ ನೀಡಿದ್ದಾರೆ.

 

ಡಾ.ಚಂದ್ರಕಾಂತ್ ಎಸ್ ನಾಗಸಮುದ್ರ
ಜಿಲ್ಲಾ ಆಯುಷ್ ಅಧಿಕಾರಿ, ಚಿತ್ರದುರ್ಗ

Share This Article
Leave a Comment

Leave a Reply

Your email address will not be published. Required fields are marked *