ಬೆಂಗಳೂರು: ಅವಧಿಗೂ ಮುನ್ನವೇ ಬೇಸಿಗೆಯ ಬಿಸಿ ಜಾಸ್ತಿಯೇ ಆಗಿದೆ. ಈಗಲೇ ಜನ ಹೊರಗೆ ಕಾಲಿಡೋದಕ್ಕೆ ಆಗ್ತಿಲ್ಲ. ದಾಹ ಹೆಚ್ಚಾಗಿದೆ. ಹೀಗಾಗಿ ಜನರು ತಮ್ಮ ಆರೋಗ್ಯದ ಕಡೆಗೆ ಹೆಚ್ಚಿನ ಗಮನವನ್ನು ಕೊಡಲೇಬೇಕಾಗಿದೆ. ಅದರಲ್ಲೂ ಬಯಲು ಸೀಮೆಗಳಲ್ಲಿ ಬಿಸಿಲು ಇನ್ನಷ್ಟು ಏರಿಕೆಯಾಗಿದೆ. ಫೆಬ್ರವರಿ ಮಧ್ಯದಲ್ಲಿಯೇ ಉಷ್ಣಾಂಶ 35 ಡಿಗ್ರಿ ದಾಟಿದೆ. ಇನ್ನು ಮಾರ್ಚ್ – ಏಪ್ರಿಲ್ ವೇಳೆಗೆ ಇನ್ನೆಷ್ಟು ಜಾಸ್ತಿಯಾಗಲಿದೆಯೋ ಎಂಬ ಆತಂಕ ಶುರುವಾಗಿದೆ.

ದಾವಣಗೆರೆ, ಚಿತ್ರದುರ್ಗ, ಬಳ್ಳಾರಿ ಹಾಗೂ ರಾಯಚೂರು ಜಿಲ್ಲೆಗಳಲ್ಲಿ ಕಳೆದ ಒಂದು ವಾರದಿಂದ ತಾಪಮಾನ ಏರುಗತಿಯಲ್ಲಿದೆ. ದಾವಣಗೆರೆಯಲ್ಲಿ ಕಳೆದ ವಾರ 32,33 ಡಿಗ್ರಿ ಇದ್ದ ತಾಪಮಾನ ಈ ವಾರಾಂತ್ಯಕ್ಕೆ 35 ಡಿಗ್ರಿ ಮುಟ್ಟಿದೆ. ಮುಂದಿನ ನಾಲ್ಕು ದಿನ 36 ರಿಂದ 37 ಡಿಗ್ರಿಗೆ ಏರಿಕೆ ಆಗಲಿದೆ ಎಂದು ಹವಮಾನ ಇಲಾಖೆ ಮುನ್ಸೂಚನೆ ನೀಡಿದೆ. ಹಿಂದಿನ ವರ್ಷಕ್ಕೆ ಹೋಲಿಕೆ ಮಾಡಿದರೆ ಈ ಬಾರಿ ತಾಪಮಾನ 3 ಡಿಗ್ರಿ ಹೆಚ್ಚಾಗಿದೆ.

ಆದರೆ ಈ ಬೇಸಿಗೆಯ ಬಿಸಿ ಹೆಚ್ಚಳದಿಂದ ಜನ ಡಿಹೈಡ್ರೇಷನ್ ನಿಂದ ಬಳಲುವ ಸಾಧ್ಯತೆ ಹೆಚ್ಚಾಗಿದೆ. ಹೀಗಾಗಿ ತಮ್ಮ ಆರೋಗ್ಯದ ಬಗ್ಗೆ ಎಲ್ಲರೂ ಕಾಳಜಿ ವಹಿಸಲೇಬೇಕಾಗುತ್ತದೆ. ದೇಹವನ್ನು ಯಾವಾಗಲೂ ತಂಪಾಗಿಡಿ. ಹೆಚ್ಚು ನೀರು ಕುಡಿಯಿರಿ, ಬಿಸಿಲಿಗೆ ವಾಂತಿ, ಬೇಧಿ ಹೆಚ್ಚಾಗುವ ಸಾಧ್ಯತೆ ಇರುವ ಕಾರಣ ನೀರಿನ ಶುದ್ಧತೆ ಬಗ್ಗೆ ಹೆಚ್ಚು ಗಮನವಿರಲಿ. ಹಿರಗೆ ಹೋಗುವಾಗ ಕೈಯಲ್ಲೊಂದು ಛತ್ರಿಯನ್ನು ತೆಗೆದುಕೊಂಡು ಹೋಗುವುದನ್ನು ಮರೆಯಬೇಡಿ. ನೆತ್ತಿಗೆ ಬಿಸಿಲು ಸುಡದಂತೆ ನೋಡಿಕೊಳ್ಳಿ. ಹೆಚ್ಚು ಬಿಸಿಲು ಇದೆ ಎಂದಾಗ ಮಕ್ಕಳು, ಗರ್ಭಿಣಿಯರು, ಹೃದಯ ಸಂಬಂಧಿ ಕಾಯಿಲೆ ಇರುವವರು ಓಡಾಟ ಕಡಿಮೆ ಮಾಡಿ. ಇದು ಸುದ್ದಿ ಒನ್ ಕಳಕಳಿ.

