ಸುದ್ದಿಒನ್, ಹಿರಿಯೂರು, ಮೇ. 09 : ಭಾರತ ಮತ್ತು ಪಾಕಿಸ್ತಾನ ನಡುವೆ ನಡೆಯುತ್ತಿರುವ ಸಂಘರ್ಷ ಹಿನ್ನೆಲೆಯಲ್ಲಿ ವಾಣಿ ವಿಲಾಸ ಜಲಾಶಯಕ್ಕೆ ಭದ್ರತೆ ಒದಗಿಸಲಾಗಿದ್ದು, ಸಾರ್ವಜನಿಕರ ಪ್ರವೇಶವನ್ನು ನಿಷೇಧಿಸಲಾಗಿದೆ.
ವಿವಿ ಸಾಗರ ಡ್ಯಾಂ ಎಲ್ಲಾ ಗೇಟ್ ಗಳನ್ನು ಬಂದ್ ಮಾಡಲಾಗಿದೆ. ಜೊತೆಗೆ ಐಬಿ ರೂಂಗಳನ್ನು ಸಹ ಬಂದ್ ಮಾಡಿ, ಪ್ರವೇಶ ನಿರ್ಬಂಧಿಸಲಾಗಿದೆ. ಗೇಟ್ ಗೆ ಬೀಗ ಹಾಕಿದ್ದು, ಪೊಲೀಸರನ್ನು ನಿಯೋಜಿಸಲಾಗಿದೆ.
ವಿಶ್ವೇಶ್ವರಯ್ಯ ಜಲ ನಿಗಮ ವಿವಿ ಸಾಗರ ಉಪ ವಿಭಾಗದ ಸಹಾಯಕ ಇಂಜಿನಿಯರ್ ಜಯಕುಮಾರ್ ಮಾತನಾಡಿ ದೇಶದಲ್ಲಿನ ಪ್ರಸ್ತುತ ಬೆಳವಣಿಗೆಗಳ ಹಿನ್ನೆಲೆಯಲ್ಲಿ ರಾಜ್ಯದ ಎಲ್ಲಾ ಆಣೆಕಟ್ಟುಗಳಿಗೆ ಭದ್ರತೆ ಒದಗಿಸಬೇಕೆಂಬ ಜಲ ಸಂಪನ್ಮೂಲ ಇಲಾಖೆಯ ಆದೇಶದಂತೆ ತಾಲೂಕಿನ ವಿವಿ ಸಾಗರ ಜಲಾಶಯಕ್ಕೂ ಭದ್ರತೆ ಒದಗಿಸಲಾಗಿದೆ. ಜಲಾಶಯಕ್ಕೆ ಪೊಲೀಸ್ ಬಂದೋಬಸ್ತ್ ನೀಡಲಾಗಿದ್ದು ಸಾರ್ವಜನಿಕರ ಪ್ರವೇಶವನ್ನು ನಿರ್ಬಂಧಿಸಲಾಗಿದೆ ಎಂದು ತಿಳಿಸಿದ್ದಾರೆ.
