ಮಂಡ್ಯ: 2023ರ ಚುನಾವಣೆಗೆ ದಿನಾಂಕ ಘೋಷಣೆಗಾಗಿ ಎಲ್ಲರು ಕಾಯುತ್ತಿದ್ದಾರೆ. ಆದ್ರೆ ಈ ಮಧ್ಯೆ ಟಿಕೆಟ್ ಆಕಾಂಕ್ಷಿಗಳ ಸಂಖ್ಯೆ ಹನುಮನ ಬಾಲ ಬೆಳೆದಂತೆ ಬೆಳೆಯುತ್ತಲೆ ಇದೆ. ಟಿಕೆಟ್ ನೀಡುವುದು ಒಬ್ಬರಿಗಾದರೆ ಆಕಾಂಕ್ಷಿಗಳನ್ನು ಸಮಾಧಾನಪಡಿಸುವುದೇ ಮತ್ತಷ್ಟು ದೊಡ್ಡ ಕೆಲಸವಾಗಿರುತ್ತದೆ. ಇದೀಗ ಮಂಡ್ಯ ವಿಧಾನಸಭಾ ಕ್ಷೇತ್ರದಿಂದ ಟಿಕೆಟ್ ಗಾಗಿ ಹದಿನಾಲ್ಕು ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದಾರೆ.

ಜೆಡಿಎಸ್ ನಲ್ಲಿ ಗುರುತಿಸಿಕೊಂಡಿದ್ದ ಕೀಲಾರ ರಾಧಾಕೃಷ್ಣ, ಗಣಿಗ ರವಿಕುಮಾರ್, ಮಾಜಿ ಸಚಿವ ಆತ್ಮಾನಂದ, ಮಾಜಿ ಶಾಸಕ ಹೆಚ್ ಬಿ ರಾಮು ಸೇರಿದಂತೆ ಹದಿನಾಲ್ಕು ಅಭ್ಯರ್ಥಿಗಳು ಅರ್ಜಿ ಹಾಕಿದ್ದಾರೆ. ಜಿಲ್ಲೆಯಲ್ಲಿ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳ ಸಂಖ್ಯೆ ಜಾಸ್ತಿಯಾಗುತ್ತಾ ಇದೆ. ಇನ್ನು ಹೆಚ್ಚಿನ ಕಾಲಾವಕಾಶ ಇರುವ ಹಿನ್ನೆಲೆ ಇನ್ನಷ್ಟು ಅರ್ಜಿಗಳು ಸಲ್ಲಿಕೆಯಾಗುವ ಸಾಧ್ಯತೆ ಇದೆ. ಇದು ಕಾಂಗ್ರೆಸ್ ಗೆ ತಲೆನೋವಾಗಲಿದೆ.

ನಾಗಮಂಗಲ, ಮದ್ದೂರು ಕ್ಷೇತ್ರದಿಂದ ಟಿಕೆಟ್ ಆಕಾಂಕ್ಷಗಳ ಸಂಖ್ಯೆ ಏನು ಹೇಳಿಕೊಳ್ಳುವಂತೆ ಇಲ್ಲ. ಚೆಲುವರಾಯಸ್ವಾಮಿ ಮಾತ್ರ ಬಿಫಾರಂಗೆ ಅರ್ಜಿ ಹಾಕಿದ್ದಾರೆ. ಜಾತಿವಾರು ಲೆಕ್ಕಾಚಾರದಲ್ಲಿ ನೋಡುವುದಾದರೆ ಮಂಡ್ಯದಲ್ಲಿ ಕಾಂಗ್ರೆಸ್ ಗೆ ಗೆಲುವು ಸುಲಭವಾಗಲಿದೆ. ಯಾಕಂದ್ರೆ ಪರಿಶಿಷ್ಟ ಜಾತಿ, ಕುರುಬ, ಮುಸ್ಲಿಂ ಮತಗಳೇ 75 ಸಾವಿರವಿದೆ. ಹೀಗಾಗಿ ಅಭ್ಯರ್ಥಿಗಳ ಆಯ್ಕೆಯ ವಿಚಾರವೇ ಕಾಂಗ್ರೆಸ್ ಗೆ ದೊಡ್ಡ ತಲೆನೋವಾಗಲಿದೆ.

