ಹಾಲು, ಮೊಸರು ದರ ಹೆಚ್ಚಳ : ಎಸ್ ಯು ಸಿ ಐ(ಸಿ) ಖಂಡನೆ

1 Min Read

 

ಚಿತ್ರದುರ್ಗ, (ನ.24) : ಕರ್ನಾಟಕ ಹಾಲು ಮಹಾಮಂಡಳಿ ( ಕೆಎಂಎಫ್) ಯು ನಂದಿನಿ ಬ್ರ್ಯಾಂಡ್ ನ ಎಲ್ಲಾ ಮಾದರಿಯ ಹಾಲು ಹಾಗೂ ಮೊಸರಿನ ದರವನ್ನು ಪ್ರತಿ ಲೀಟರ್ ಗೆ  2 ರೂಗಳನ್ನು ಹೆಚ್ಚಿಸಿರುವುದನ್ನು ಎಸ್ ಯು ಸಿ ಐ (ಸಿ) ಕರ್ನಾಟಕ ರಾಜ್ಯ ಸಮಿತಿ ಖಂಡಿಸಿದೆ.

ಕರ್ನಾಟಕ ಸರ್ಕಾರವು ಈ ಬೆಲೆ ಏರಿಕೆಯನ್ನು ತಡೆಗಟ್ಟುವುದರ ಬದಲು ಅನುಮೋದನೆ ನೀಡಿರುವುದು ಅತ್ಯಂತ ಖಂಡನಾರ್ಹ. ಪ್ರತಿಯೊಂದು ಅಗತ್ಯ ವಸ್ತುಗಳ ಬೆಲೆ ಏರಿಕೆಯ ಸಂದರ್ಭದಲ್ಲೂ ಒಂದಲ್ಲ ಒಂದು ಸಬೂಬು ಹೇಳುವುದು ಎಲ್ಲಾ ಜನವಿರೋಧಿ ಸರ್ಕಾರಗಳ ವಾಡಿಕೆ.

ಅಂತೆಯೇ ಈ ಸಂದರ್ಭದಲ್ಲೂ ರೈತರಿಗೆ ನೆರವು ನೀಡಬೇಕೆಂದು ಕುಂಟು ನೆಪವೊಡ್ಡಿ ಹಾಲು, ಮೊಸರಿನ ದರ ಏರಿಸುವುದರ ಮೂಲಕ ಈಗಾಗಲೇ ಸಂಕಷ್ಟದಲ್ಲಿರುವ ಮಧ್ಯಮ ವರ್ಗ ಹಾಗೂ ಕೆಳ ಮಧ್ಯಮ ವರ್ಗದ ಜನರ ಹೆಗಲ ಮೇಲೆ ಭಾರ ಹೊರಿಸಿರುವುದು, ಸರ್ಕಾರದ ಅತ್ಯಂತ ಜನ ವಿರೋಧಿ ನಿಲುವನ್ನು ಪ್ರದರ್ಶಿಸುತ್ತದೆ. ಸರ್ಕಾರ ಜನರಲ್ಲಿ ಗೊಂದಲಗಳನ್ನು ಸೃಷ್ಟಿಸುವ   ಕ್ರಮಗಳನ್ನು ಕೈ ಬಿಟ್ಟು ತನ್ನ ಖಜಾನೆಯಿಂದ  ರೈತರಿಗೂ ಸಹಾಯ ಧನ ನೀಡಿ ಅವರ ಸಂಕಷ್ಟಗಳನ್ನು ನಿವಾರಿಸಬೇಕು. ಅಂತೆಯೇ ಗ್ರಾಹಕರಿಗೂ ಬೆಲೆ ಹೆಚ್ಚಳವಾಗದಂತೆ ಸಹಾಯಧನ ನೀಡುತ್ತಾ ಉತ್ಪಾದನಾ ವೆಚ್ಚವನ್ನೂ ಸರಿದೂಗಿಸಬೇಕು.

ಜನಸಾಮಾನ್ಯರಿಗೆ ನೆರವಾಗಲು ಬಳಸಬೇಕಾದ ಇಂತಹ ಹಣವನ್ನು  ಕಾರ್ಪೊ ರೇಟ್ ಮನೆತನಗಳಿಗೆ ತೆರಿಗೆ ವಿನಾಯಿತಿ, ಸಹಾಯಧನ   ನೀಡಲು ವಿನಿಯೋಗಿಸುತ್ತಿರುವುದನ್ನು  ನಿಲ್ಲಿಸಬೇಕು. ಈಗಾಗಲೇ ಬೆಲೆ ಏರಿಕೆ, ನಿರುದ್ಯೋಗಗಳಿಂದ ತತ್ತರಿಸುತ್ತಿರುವ ಬಡಜನರ ಜೇಬಿಗೆ ಕನ್ನಾ ಹಾಕುವ ನೀತಿಗಳನ್ನು ಕೈಬಿಟ್ಟು ಜನರ ಜೀವನವನ್ನು ಸುಧಾರಿಸುವ ನೀತಿಗಳನ್ನು ಜಾರಿಗೊಳಿಸಬೇಕೆಂದು ಎಸ್ ಯು ಸಿ ಐ(ಸಿ) ರವಿ ಕುಮಾರ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *