ವಾಣಿ ವಿಲಾಸ ಜಲಾಶಯದ ಒಳಹರಿವು ಹೆಚ್ಚಳ : ಸಂಗ್ರಹವಾದ ನೀರು ಎಷ್ಟು ?

2 Min Read

 

ಸುದ್ದಿಒನ್, ಹಿರಿಯೂರು, ಆಗಸ್ಟ್. 08 : ರಾಜ್ಯಾದ್ಯಂತ ಮಳೆ ಸುರಿಯುತ್ತಲೆ ಇದೆ. ಇದರಿಂದ ಡ್ಯಾಂಗಳಲ್ಲಿ ನೀರು ತುಂಬಿ ತುಳುಕುತ್ತಿವೆ. ಇದೀಗ ವಾಣಿ ವಿಲಾಸ ಜಲಾಶಯದಲ್ಲೂ ಹೆಚ್ಚಿನ ನೀರು ಸಂಗ್ರಹವಾಗಿದೆ. ಮಧ್ಯ ಕರ್ನಾಟಕದ ಬಯಲು ಸೀಮೆಯ ಏಕೈಕ ರೈತರ ಜೀವನಾಡಿಯಾಗಿರುವ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿನ ವಾಣಿ ವಿಲಾಸ ಜಲಾಶಯಕ್ಕೆ ಮಳೆಯಿಂದ ಇತ್ತೀಚಿಗಷ್ಟೇ ಜಲಾಶಯಕ್ಕೆ 1.79 ಅಡಿ (1.07 ಟಿಎಂಸಿ) ನೀರು ಹರಿದು ಬಂದಿದೆ. ಈ ಮೂಲಕ ಸದ್ಯ 1.16 ಟಿಎಂಸಿ ನೀರು ಸಂಗ್ರಹವಾಗಿದೆ.

ಇಂದಿನ ವರದಿಯಲ್ಲಿ ವಿವಿ ಸಾಗರ ಜಲಾಶಯಕ್ಕೆ 2195 ಕ್ಯೂಸೆಕ್ ಒಳಹರಿವು ನೀರು ಸಂಗ್ರಹವಾಗಿದೆ. ಇದರಿಂದ ಪ್ರಸ್ತುತ ಜಲಾಶಯದ ನೀರಿನ ಮಟ್ಟ 115.20 ಅಡಿ ಇದೆ. ಜುಲೈ 29 ರಂದು 113.50 (16.07 ಟಿಎಂಸಿ) ರಿಂದ 8/08/2024ಕ್ಕೆ 115.20 ಅಡಿ (17.14ಟಿಎಂಸಿ) ನೀರು ಸಂಗ್ರಹವಾಗಿದೆ. ಡ್ಯಾಂಗೆ ಒಳಹರಿವು ಆರಂಭವಾಗಿದ್ದು ಇಂದಿನ ದಿನದವರೆಗೂ ನೀರು ಹರಿದು ಬರುತ್ತಿದೆ. ಇದಲ್ಲದೆ ಜೊತೆಗೆ ಭದ್ರಾ ಜಲಾಶಯದಿಂದ ವಿವಿ ಸಾಗರ ಡ್ಯಾಂಗೆ ಪ್ರತಿದಿನ 700 ಕ್ಯೂಸೆಕ್ ನೀರು ಹರಿಸಲಾಗುತ್ತಿದೆ.

 

2000ನೇ ಇಸವಿಯಲ್ಲಿ 122.50 ಅಡಿ ತುಂಬಿದ್ದ ಡ್ಯಾಂ ದಾಖಲೆ ಬರೆದಿತ್ತು. ನಂತರ 2021 ನವೆಂಬರ್‌ನಲ್ಲಿ 122.75 ಅಡಿಗೆ ಡ್ಯಾಂ ನೀರಿನ ಮಟ್ಟ ತಲುಪುವ ಮೂಲಕ ಹೊಸ ದಾಖಲೆ ನಿರ್ಮಿಸಿತ್ತು .1958ರಲ್ಲಿ ಡ್ಯಾಂ ನೀರಿನ ಮಟ್ಟ 124.25 ಅಡಿ ದಾಟಿತ್ತು. 1935ರಲ್ಲಿ 135.25 ಅಡಿ ನೀರು ಹರಿದು ಬಂದಿದ್ದರಿಂದ ಮೊದಲ ಬಾರಿಗೆ ಜಲಾಶಯದಲ್ಲಿ ಕೋಡಿ ಬಿದ್ದು ನೀರು ಹರಿದಿತ್ತು. ತದನಂತರ 1934ರಲ್ಲಿ 130.24 ಅಡಿ ನೀರು ಸಂಗ್ರಹವಾಗಿತ್ತು‌. 1957ರಲ್ಲಿ 125.05 ಅಡಿ ಮಾತ್ರ ನೀರು ಸಂಗ್ರಹವಾಗಿತ್ತು. 2000 ಸಾಲಿನಲ್ಲಿ 122.50 ಅಡಿಗೆ ಮಾತ್ರ ನೀರಿನ ಮಟ್ಟ ತಲುಪಿತ್ತು. ಜಲಾಶಯದ ಮೇಲ್ಭಾಗದಲ್ಲಿ ಹೆಚ್ಚು ಮಳೆಯಾಗಿ ನೀರು ಜಲಾಶಯಕ್ಕೆ ಹರಿದು ಬಂದರೆ 2022ರ ಬಳಿಕ ಮತ್ತೆ ಡ್ಯಾಂ ಮೂರನೇ ಬಾರಿಗೆ ಕೋಡಿ ಬೀಳುವ ಸಂಭವವಿದೆ.

ಹೊಸದುರ್ಗ, ಹಿರಿಯೂರು, ಚಿತ್ರದುರ್ಗ ಭಾಗದಲ್ಲಿ 800 ರಿಂದ 1000 ಅಡಿ ಬೋರ್‌ವೆಲ್ ಕೊರೆಸಿದರು ನೀರು ಸಿಗುತ್ತಿರಲಿಲ್ಲ. ಆದರೆ ವಾಣಿವಿಲಾಸ ಜಲಾಶಯದಲ್ಲಿ ನೀರು ಪ್ರಮಾಣದಲ್ಲಿ ಸಂಗ್ರಹವಾಗುತ್ತಿದ್ದಂತೆ ಡ್ಯಾಂ ಸುತ್ತ ಮುತ್ತಲಿನ ಜಮೀನು ಪ್ರದೇಶಗಳಲ್ಲಿ, ಕೊಳವೆ ಬಾವಿಗಳಲ್ಲಿ ನೀರು ಉಕ್ಕಿ ಬರುತ್ತಿವೆ. ಹೊಸದುರ್ಗ, ಹಿರಿಯೂರು ತಾಲೂಕಿನ ಕೆಲ ಭಾಗಗಳಲ್ಲಿ ಕೇವಲ 50 ರಿಂದ 200 ಅಡಿಗೆ ನೀರು ಸಿಗುತ್ತಿದೆ.

ರೈತರಿಗೆ ಬೇಕಾಗಿರುವುದೇ ಹೆಚ್ಚಿನ ನೀರು ಅಲ್ಲವೆ. ಈಗ ಎಲ್ಲೆಡೆ ನೀರಿ ಸಂಗ್ರಹವಾಗುತ್ತಿರುವುದು ರೈತರಿಗೆ ಇನ್ನಿಲ್ಲದ ಸಂತಸವನ್ನು ತಂದಿದೆ. ಕಳೆದ ವರ್ಷ ಬರದಿಂದ ಬೆಂದಿದ್ದ ರೈತರು ಈ ವರ್ಷ ಉತ್ತಮ ಫಸಲು ಪಡೆಯುವ ನಿರೀಕ್ಷೆಯಲ್ಲಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *