ಮಾಹಿತಿ ಮತ್ತು ಫೋಟೋ ಕೃಪೆ
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಚಿತ್ರದುರ್ಗ
ಚಿತ್ರದುರ್ಗ,(ಜುಲೈ26) : ಚಿತ್ರದುರ್ಗ ಜಿಲ್ಲೆಯ ಸಾರ್ವಜನಿಕರು ಹಾಗೂ ಮಕ್ಕಳಲ್ಲಿ ಕಣ್ಣಿನ ಸೋಂಕು (ಕಂಜಂಕ್ಟವೈಟಿಸ್) ಪ್ರಕರಣಗಳು ಹೆಚ್ಚಾಗಿ ವರದಿಯಾಗುತ್ತಿದ್ದು, ಶಾಲಾ ಮಕ್ಕಳು ಮತ್ತು ವಸತಿ ಗೃಹದಲ್ಲಿ ವಾಸಿಸುತ್ತಿರುವ ಮಕ್ಕಳಲ್ಲಿ ಈ ಸೋಂಕು ಹೆಚ್ಚಾಗಿ ಹರಡುತ್ತಿದೆ. ಈ ಹಿನ್ನಲೆಯಲ್ಲಿ ಶಾಲೆಗಳು ಮತ್ತು ಎಲ್ಲಾ ವಸತಿ ಶಾಲೆಗಳಲ್ಲಿ ಮುಂಜಾಗ್ರತೆ ವಹಿಸುವಂತೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಆರ್.ರಂಗನಾಥ ಹೇಳಿದ್ದಾರೆ.
ಕಣ್ಣಿನ ಸೋಂಕು ವೈರಾಣು ಸೋಂಕಾಗಿದ್ದು, ಒಬ್ಬರಿಂದ ಒಬ್ಬರಿಗೆ ಸೋಂಕಿರುವ ವ್ಯಕ್ತಿಯ ಕೈಗಳಿಂದ ಮತ್ತು ಅವರು ಬಳಸಿರುವ ಬಟ್ಟೆ ಹಾಗೂ ವಸ್ತುಗಳು ಸಂಪರ್ಕಕ್ಕೆ ಬಂದಾಗ ಈ ರೋಗಾಣು ಹರಡುತ್ತದೆ. ಸೋಂಕು ತಗುಲಿದಾಗ ಕಣ್ಣು ಕೆಂಪಾಗುವುದು, ಕಣ್ಣಿನಲ್ಲಿ ನೀರು ಬರುವುದು, ಕಣ್ಣಿನಲ್ಲಿ ಪಿಚ್ಚುಗಟ್ಟುವುದು, ಕಣ್ಣಿನಲ್ಲಿ ಏನಾದರು ಬಿದ್ದಿರುವಂತಹ ಅನುಭವ ಇದರ ಲಕ್ಷಣವಾಗಿದೆ. ಕಣ್ಣಿನ ಸೋಂಕು ಇರುವ ವಿದ್ಯಾರ್ಥಿಗಳಿಗೆ ರಜೆಯನ್ನು ನೀಡಿ ಇತರೆ ಬೇರೆ ಮಕ್ಕಳೊಂದಿಗೆ ಬೇರೆಯದೇ ಇರುವ ಬಗ್ಗೆ ಮುಂಜಾಗೃತಾ ಕ್ರಮ ಕೈಗೊಳ್ಳಬೇಕು.
ಕಣ್ಣಿನ ಸೋಂಕು ಇರುವ ವಿದ್ಯಾರ್ಥಿಗಳು ಅಥವಾ ಅವರ ಪಾಲಕರಿಗೆ ಕಡ್ಡಾಯವಾಗಿ ವೈದ್ಯರನ್ನು ಸಂಪರ್ಕಿಸಿ, ಸೂಕ್ತ ಚಿಕಿತ್ಸೆ ಪಡೆಯಲು ಸೂಚಿಸಬೇಕು. ಯಾವುದೇ ಕಾರಣಕ್ಕೂ ವೈದ್ಯರ ಚೀಟಿಯನ್ನು ಪಡೆಯದೇ ಔಷಧಿ ಅಂಗಡಿಗಳಿಂದ ನೇರವಾಗಿ ಕಣ್ಣಿನ ಔಷಧಿಗಳನ್ನು ಪಡೆದು ಬಳಸಬಾರದು.
ಎಲ್ಲಾ ವಿದ್ಯಾರ್ಥಿಗಳಿಗೆ ಆಗಾಗ್ಗೆ ಸೋಪ್ ನಿಂದ ಕೈತೊಳೆಯಲು ಅಥವಾ ಸಾನಿಟೈಜರ್ ಬಳಸಲು ತಿಳಿಸಬೇಕು. ಸೋಂಕಿನಿಂದ ಬಳಲುತ್ತಿರುವ ವಿದ್ಯಾರ್ಥಿಗಳು ಇತರರಿಂದ ದೂರವಿರುವರು ಮತ್ತು ಕನ್ನಡಕಗಳನ್ನು ಧರಿಸಿ, ಕಣ್ಣುಗಳ ರಕ್ಷಣೆ ಮಾಡಿಕೊಳ್ಳಬೇಕು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಆರ್.ರಂಗನಾಥ ಸೂಚಿಸಿದ್ದಾರೆ.