ಸುದ್ದಿಒನ್, ನವದೆಹಲಿ : ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಕೆಗೆ ಜುಲೈ 31 ಕೊನೆಯ ದಿನವಾಗಿದ್ದು ಅದು ನಿನ್ನೆಗೆ ಕೊನೆಗೊಂಡಿದೆ. ಇದಕ್ಕೂ ಮುನ್ನ ಆದಾಯ ತೆರಿಗೆ ಇಲಾಖೆ ಬುಧವಾರ ಸಂಜೆ 7 ಗಂಟೆಯವರೆಗೆ 7 ಕೋಟಿಗೂ ಅಧಿಕ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಕೆಯಾಗಿದೆ ಎಂದು ಇಲಾಖೆ ಪ್ರಕಟಿಸಿದೆ.
ಈ ಪೈಕಿ ಜುಲೈ 31ರಂದೇ 50 ಲಕ್ಷಕ್ಕೂ ಹೆಚ್ಚು ರಿಟರ್ನ್ಸ್ ಸಲ್ಲಿಕೆಯಾಗಿದೆ. ಎಲ್ಲಾ ಜನರು ಆದಷ್ಟು ಬೇಗ ರಿಟರ್ನ್ಸ್ ಸಲ್ಲಿಸುವಂತೆ ಇಲಾಖೆ ಮನವಿ ಮಾಡಿತ್ತು. ಈ ಹಿನ್ನೆಲೆಯಲ್ಲಿ ಭಾರೀ ಪ್ರಮಾಣದ ರಿಟರ್ನ್ಸ್ ಸಲ್ಲಿಕೆಯಾಗಿದೆ ಎಂದು ಐಟಿ ಅಧಿಕಾರಿಗಳು ತಿಳಿಸಿದ್ದಾರೆ. ಈ ಮೈಲಿಗಲ್ಲನ್ನು ಸಾಧಿಸಿದ್ದಕ್ಕಾಗಿ ತೆರಿಗೆ ಪಾವತಿದಾರರಿಗೆ ಧನ್ಯವಾದ ಅರ್ಪಿಸಿದರು.
ದಿನದ 24 ಗಂಟೆಯೂ ಜನರಿಗೆ ಸಹಾಯ ಮಾಡಲು ಇಲಾಖೆ ಸಿದ್ಧವಾಗಿದೆ. 2023-24 ರ ಆರ್ಥಿಕ ವರ್ಷಕ್ಕೆ 2024-25 ರ ಮೌಲ್ಯಮಾಪನ ವರ್ಷಕ್ಕೆ ರಿಟರ್ನ್ಸ್ ಸಲ್ಲಿಸಲು ಕೊನೆಯ ದಿನಾಂಕ ಜುಲೈ 31. ನೀವು ದಂಡವನ್ನು ಕಟ್ಟದೇ ಸಾಧ್ಯವಾದಷ್ಟು ಬೇಗ ITR ಅನ್ನು ಸಲ್ಲಿಸಿ ಎಂದು ಆದಾಯ ತೆರಿಗೆ ಇಲಾಖೆ ಸಾಮಾಜಿಕ ಮಾಧ್ಯಮ ವೇದಿಕೆ X ಮೂಲಕ ಮನವಿ ಮಾಡಿತ್ತು.
ಐಟಿಆರ್ ಫೈಲಿಂಗ್ ನಲ್ಲಿ ಹೊಸ ದಾಖಲೆ :
ಐಟಿಆರ್ ಫೈಲಿಂಗ್ ನಲ್ಲಿ ಈ ವರ್ಷ ಹೊಸ ದಾಖಲೆ ಸೃಷ್ಟಿಸಿದೆ ಎಂದು ಆದಾಯ ತೆರಿಗೆ ಇಲಾಖೆ ಹೇಳಿದೆ. ಕಳೆದ ವರ್ಷ ಜುಲೈ 31ರವರೆಗೆ 6.77 ಕೋಟಿ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಕೆಯಾಗಿತ್ತು. ಈ ವರ್ಷ ಈ ಸಂಖ್ಯೆ 7 ಕೋಟಿ ದಾಟಿದೆ. ಜುಲೈ 31, 2024 ರವರೆಗೆ ಆದಾಯ ತೆರಿಗೆ ರಿಟರ್ನ್ ಸಲ್ಲಿಸಲು ಯಾವುದೇ ದಂಡವಿರುವುದಿಲ್ಲ. ಇದರ ನಂತರ, ತೆರಿಗೆದಾರರು ಡಿಸೆಂಬರ್ 31 ರವರೆಗೆ ತಡವಾಗಿ ರಿಟರ್ನ್ಸ್ ಸಲ್ಲಿಸಬಹುದು. ಆದರೆ, ಅದಕ್ಕೆ 1000 ರೂ.ನಿಂದ 5000 ರೂ.ವರೆಗೆ ದಂಡ ತೆರಬೇಕಾಗುತ್ತದೆ ಎಂದು ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.