ಸುದ್ದಿಒನ್, ಮೈಸೂರು: ನಾಡಹಬ್ಬ ದಸರಾಗೆ ಈಗಾಗಲೇ ತಯಾರಿ ನಡೆಯುತ್ತಾ ಇದೆ. ಗಜರಾಜರ ತಂಡ ಇಷ್ಟರಲ್ಲಿಯೇ ಸಾಂಸ್ಕೃತಿಕ ನಗರಿಗೆ ಆಗಮಿಸಲಿವೆ. ಇದರ ನಡುವೆ ದಸರಾ ಉದ್ಘಾಟನೆಯನ್ನು ಮಾಡುವುದರ ಬಗ್ಗೆಯೂ ಸಿಎಂ ಸಿದ್ದರಾಮಯ್ಯ ಮಾಹಿತಿ ನೀಡಿದ್ದಾರೆ. ಈ ಬಾರಿಯ ದಸರಾವನ್ನು ನಾದಬ್ರಹ್ಮ ಎಂದೇ ಖ್ಯಾತಿ ಪಡೆದಿರುವ ಹಂಸಲೇಖ ಅವರು ಉದ್ಘಾಟನೆ ಮಾಡಲಿದ್ದಾರೆ ಎಂದಿದ್ದಾರೆ.
ಮೈಸೂರಿನಲ್ಲಿ ಮಾತನಾಡಿದ ಅವರು, ನಮ್ಮ ಸರ್ಕಾರ 100 ದಿನಗಳನ್ನು ಪೂರೈಸಿದೆ. ಗ್ಯಾರಂಟಿ ವಿಚಾರಗಳಲ್ಲಿ ಬದ್ಧತೆ ಇತ್ತು. ಹೀಗಾಗಿ ಅವುಗಳ ಜಾರಿ ಕೂಡ ಕಠಿಣ ಎನಿಸಲಿಲ್ಲ. ಮಾತು ಕೊಟ್ಟಂತೆ ನಡೆದುಕೊಳ್ಳುತ್ತಿದ್ದೇವೆ. ಪ್ರಧಾನಿ ಅವರು ಕೂಡ ಗ್ಯಾರಂಟಿಗಳ ಬಗ್ಗೆ ಆರೋಪ ಮಾಡಿದ್ದರು. ಆದ್ರೆ ರಾಜ್ಯ ಯಾವ ದಿವಾಳಿಯೂ ಆಗಿಲ್ಲ. ಇನ್ನು ಗೃಹಲಕ್ಷ್ಮೀ ಯೋಜನೆಗೆ ವರ್ಷಕ್ಕೆ 32 ಸಾವಿರ ಕೋಟಿ ಹಣ ಖರ್ಚಾಗುತ್ತದೆ. ದೇಶದ ಇತಿಹಾಸದಲ್ಲಿಯೇ ಇದು ದೊಡ್ಡ ಯೋಜನೆಯಾಗಿದೆ ಎಂದಿದ್ದಾರೆ. ಇನ್ನು ರಾಹುಲ್ ಗಾಂಧಿಯವರು ನಾಳೆ ಮೈಸೂರಿನಲ್ಲಿ ಈ ಯೋಜನೆಗೆ ಚಾಲನೆ ನೀಡಲಿದ್ದಾರೆ. ಕರ್ನಾಟಕದ ಲಕ್ಷಾಂತರ ಮನೆಯ ತಜಮಾನಿಯರು ಕಾಯುತ್ತಿರುವ ಯೋಜನೆಗೆ ನಾಳೆಯೇ ಚಾಲನೆ ಸಿಗಲಿದೆ. ನಾಳೆಯೇ ಅಕೌಂಟ್ ಗೂ ಹಣ ಜಮಾವಣೆಯಾಗಲಿದೆ.
ಇನ್ನು ದಸರಾ ಉದ್ಘಾಟನೆ ಬಗ್ಗೆ ಮಾತನಾಡಿ, ಈ ಬಾರಿಯ ದಸರಾಗೆ ಎಲ್ಲಾ ತಯಾರಿ ನಡೆಯುತ್ತಿದೆ. ಖ್ಯಾತ ಸಂಗೀತ ನಿರ್ದೇಶಕ ಹಂಸಲೇಖ ಅವರಿಂದ ಉದ್ಘಾಟನೆಯಾಗಲಿದೆ ಎಂಬ ಮಾಹಿತಿಯನ್ನು ನೀಡಿದ್ದಾರೆ.
ಅವರು ಇಂದು ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿ ತಾಯಿ ಚಾಮುಂಡೇಶ್ವರಿಯ ದರ್ಶನ ಪಡೆದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ ಈ ವಿಷಯ ತಿಳಿಸಿದರು.
ಡಿಸಿಎಂ ಡಿ.ಕೆ.ಶಿವಕುಮಾರ್, ಜಿಲ್ಲಾ ಉಸ್ತುವಾರಿ ಸಚಿವ ಡಾ.ಹೆಚ್.ಸಿ.ಮಹದೇವಪ್ಪ , ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಜತೆಗಿದ್ದರು.