ರಾಮನಗರ: ಇಂದು ಹಾರೋಹಳ್ಳಿಯಲ್ಲಿ ನೂತನ ತಾಲೂಕು ಉದ್ಘಾಟನೆ ಕಾರ್ಯಕ್ರಮಕ್ಕೆ ಶಾಸಕಿ ಅನಿತಾ ಕುಮಾರಸ್ವಾಮಿ ಅವರನ್ನು ಆಹ್ವಾನ ಮಾಡಲಾಗಿತ್ತು. ಆದರೆ ಅನಿತಾ ಕುಮಾರಸ್ವಾಮಿ ಅವರು ಬರುವುದಕ್ಕೂ ಮುನ್ನವೇ ಸಚಿವ ಅಶ್ವತ್ಥ್ ನಾರಾಯಣ್ ಅವರು ಕಾರ್ಯಕ್ರಮ ಉದ್ಘಾಟನೆ ಮಾಡಿದ್ದರು. ಇದಕ್ಕೆ ಶಾಸಕಿ ಕೆಂಡಾಮಂಡಲಾರಗಿದ್ದರು.
ಜೊತೆಗೆ ಶಾಸಕಿ ಅನಿತಾ ಕುಮಾರಸ್ವಾಮಿ ಬಂದಾದ ಬಳಿಕ ಸೆಷನ್ ಇದೆ ಅಂತ ಅಶ್ವತ್ಥ್ ನಾರಾಯಣ್ ಹೊರಟೇ ಬಿಟ್ಟಿದ್ದರು. ಬಳಿಕ ಭಾಷಣ ಮಾಡಿದ ಅನಿತಾ ಕುಮಾರಸ್ವಾಮಿ ಅವರು, ಕಾರ್ಯಕ್ರಮದ ಅಧ್ಯಕ್ಷತೆಗೆ ನನ್ನ ಹೆಸರು ಹಾಕಿ, ನಾನು ಬರುವುದಕ್ಕೂ ಮುನ್ನವೇ ಉದ್ಘಾಟನೆ ಮಾಡಿದ್ದೀರಿ. ಕಾಟಾಚಾರಕ್ಕೆ ನನ್ನನ್ನು ಕರೆದಿದ್ದಾರೆ. ತಾಲೂಕಿನ ಜನರ ಪ್ರೀತಿಗೆ ಬಂದಿದ್ದೇನೆ ಎಂದು ಅಶ್ವತ್ಥ್ ನಾರಾಯಣ್ ಅವರಿಗೆ ಟಾಂಗ್ ನೀಡಿದ್ದಾರೆ.
ಈ ತಾಲೂಕು ರಚನೆಗೆ ನನ್ನ ಶ್ರಮವಿದೆ. ಸದನದಲ್ಲಿ ಈ ಬಗ್ಗೆ ಚರ್ಚೆ ಮಾಡಿ ಅನುಮೋದನೆ ಪಡೆದಿದ್ದೇವೆ. ಉಸ್ತುವಾರಿ ಸಚಿವರು ಈಗ ಹೇಳಿದ ನೀರಾವರಿ ಯೋಜನೆ ಕುಮಾರಸ್ವಾಮಿ ಕಾಲದಲ್ಲಿಯೇ ಆಗಿದ್ದು. ಕುಮಾರಸ್ವಾಮಿ ಅವರು ಪಂಚರತ್ನ ಯಾತ್ರೆಯಲ್ಲಿದ್ದಾರೆ. ಅವರು ಬಂದಿದ್ದರೆ ಯಾರು ಮಾತನಾಡುತ್ತಿರಲಿಲ್ಲ. ನಮ್ಮ ಸರ್ಕಾರ ಬಂದ ಮೇಲೆ ಅದಾಯ್ತು, ಇದಾಯ್ತು ಅಂತಾರೆ. ಬರೀ ಬುರುಡೆ ಬಿಡೋದೆ ಆಗೋಯ್ತು. ಸಚಿವರು ಮೊದಲು ಮಲ್ಲೇಶ್ವರಂಗೆ ಹೋಗಿ ಅಭಿವೃದ್ಧಿ ಮಾಡಲಿ ಎಂದಿದ್ದಾರೆ.