ಸುದ್ದಿಒನ್, ಚಿತ್ರದುರ್ಗ, (ಅ.15) : ಇಲ್ಲಿನ ಸರ್ಕಾರಿ ಕಲಾ ಕಾಲೇಜು ಹಿಂಭಾಗ ಯಂಗಮ್ಮನಕಟ್ಟೆ ಹತ್ತಿರವಿರುವ ಪೌರಸೇವಾ ಕಾರ್ಮಿಕರ ವಸತಿ ನಿಲಯದ ರಸ್ತೆಯಲ್ಲಿ ಗುರುವಾರ ರಮಾಬಾಯಿ ಅಂಬೇಡ್ಕರ್ ನಗರ ನಾಮಫಲಕ ಉದ್ಘಾಟಿಸಲಾಯಿತು.
ರೇಷ್ಮೆ ಇಲಾಖೆ ನಿವೃತ್ತ ನೌಕರ ಕೃಷ್ಣಮೂರ್ತಿ ನಾಮಫಲಕ ಉದ್ಘಾಟಿಸಿ ಮಾತನಾಡುತ್ತ ಪೌರ ಕಾರ್ಮಿಕರ ವಸತಿ ನಿಲಯದ ರಸ್ತೆಗೆ ರಮಾಬಾಯಿ ಅಂಬೇಡ್ಕರ್ ನಗರ ಎಂಬ ಹೆಸರಿಟ್ಟಿರುವುದು ಅರ್ಥಪೂರ್ಣವಾಗಿದೆ. ಇಲ್ಲಿ ಪೌರ ಕಾರ್ಮಿಕರೆ ಹೆಚ್ಚಾಗಿ ವಾಸಿಸುತ್ತಿದ್ದು, ಅಂಬೇಡ್ಕರ್‍ರವರ ಸ್ಮರಣೆಯಾಗಬೇಕು ಎಂದು ಹೇಳಿದರು.
ಸಾಮಾಜಿಕ ಸಂಘರ್ಷ ಸಮಿತಿ ಜಿಲ್ಲಾಧ್ಯಕ್ಷ ಕೆ.ಕುಮಾರ್ ಮಾತನಾಡಿ ಕಳೆದ ಇಪ್ಪತ್ತು ವರ್ಷಗಳ ಹಿಂದೆ ನಗರಸಭೆಯಿಂದ ಪೌರ ಕಾರ್ಮಿಕರಿಗೆ ಇಲ್ಲಿ ನಿವೇಶನಗಳನ್ನು ನೀಡಲಾಗಿತ್ತು. ಅದರಲ್ಲಿ ಕೆಲವರು ತಮ್ಮ ನಿವೇಶನಗಳನ್ನು ಮಾರಾಟ ಮಾಡಿಕೊಂಡಿದ್ದಾರೆ. ಖರೀದಿಸಿರುವವರು ಈಗಾಗಲೇ ಮನೆಗಳನ್ನು ಕಟ್ಟಿಕೊಂಡು ವಾಸಿಸುತ್ತಿದ್ದರೆ ಇನ್ನು ಕೆಲವು ಖಾಲಿ ನಿವೇಶನಗಳಿವೆ. ಮುಂದಿನ ದಿನಗಳಲ್ಲಿ ಪೌರ ಕಾರ್ಮಿಕರ ಮಕ್ಕಳ ಮೂಲಕ ನ್ಯಾಯಾಲಯದ ಮೊರೆ ಹೋಗಿ ನಿವೇಶನಗಳನ್ನು ವಾಪಸ್ ಪಡೆಯಲಾಗುವುದು ಎಂದು ತಿಳಿಸಿದರು.
ಸಾಮಾಜಿಕ ಸಂಘರ್ಷ ಸಮಿತಿ ರಾಜ್ಯಾಧ್ಯಕ್ಷ ಪ್ರೊ.ಸಿ.ಕೆ.ಮಹೇಶ್, ಪೌರ ಕಾರ್ಮಿಕ ಎಂ.ಮಲ್ಲಿಕಾರ್ಜುನ್, ಶ್ರೀನಿವಾಸ್, ಬಿ.ಮಲ್ಲಿಕಾರ್ಜುನ್, ಟಿ.ರಾಮು, ಶಿವಣ್ಣ ಕಸವನಹಳ್ಳಿ ಚಿಕ್ಕಣ್ಣ, ಬಿ.ಪಿ.ತಿಪ್ಪೇಸ್ವಾಮಿ ಇನ್ನು ಮುಂತಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.