ಬೆಂಗಳೂರು: ಜೆಡಿಎಸ್ ಹಾಗೂ ಬಿಜೆಪಿ ಮೈತ್ರಿ ಮಾಡಿಕೊಂಡು ಚುನಾವಣೆಯನ್ನ ಎದುರಿಸುತ್ತಿವೆ. ಆದರೆ ಆಗಾಗ ಒಂದಷ್ಟು ಗೊಂದಲದ ಮಾತುಗಳು ಕೇಳಿ ಬರುತ್ತವೆ. ವಿಧಾನಸಭೆ, ಲೋಕಸಭೆಗೆ ಮಾತ್ರ ಮೈತ್ರಿ, ಸ್ಥಳೀಯ ಚುನಾವಣೆಗಳಿಗೆ ಮೈತ್ರಿ ಇರಲ್ಲ ಅಂತಾನೇ ಕೇಳಿ ಬರ್ತಾ ಇತ್ತು. ಇದೀಗ ಅದಕ್ಕೆಲ್ಲಾ ದೇವೇಗೌಡರು ಉತ್ತರ ಕೊಟ್ಟಿದ್ದಾರೆ.
ಜೆಡಿಎಸ್ ಈಗ ಎನ್ಡಿಎ ಮೈತ್ರಿಕೂಟದ ಭಾಗವಾಗಿರುವುದರಿಂದ ಮುಂಬರುವ ಕಾರ್ಪೋರೇಷನ್, ಜಿಲ್ಲಾ ಪಂಚಾಯಿತಿ ಮತ್ತು ತಾಲೂಕು ಪಂಚಾಯತಿ ಚುನಾವಣೆಗಳನ್ನು ಎನ್ಡಿಎ ಜೊತೆಗೆ ಎದುರಿಸಲು ತಮ್ಮ ಪಕ್ಷಕ್ಕೆ ಆಕಾಂಕ್ಷೆ ಇದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಇದು ಪ್ರಾದೇಶಿಕ ಪಕ್ಷವಾಗಿರುವ ಜೆಡಿಎಸ್ ಮತ್ತು ರಾಷ್ಟ್ರೀಯ ಪಕ್ಷವಾಗಿರುವ ಬಿಜೆಪಿ ನಡುವಿನ ನಿರ್ಧಾರವಾಗಿದ್ದು, ಅಂತಿಮ ತೀರ್ಮಾನವನ್ನು ಬಿಜೆಪಿ ತೆಗೆದುಕೊಳ್ಳಬೇಕು. ಬಿಜೆಪಿಯವರು ಯಾವ ನಿರ್ಣಯ ತೆಗೆದುಕೊಳ್ಳುತ್ತಾರೆ ಮತ್ತು ಯಾವ ಭಾವನೆ ವ್ಯಕ್ತಪಡಿಸುತ್ತಾರೆ ಎಂಬುದರ ಮೇಲೆ ಜೆಡಿಎಸ್ ತನ್ನ ಮುಂದಿನ ಹೆಜ್ಜೆ ಇಡಲಿದೆ. ಸಂಸತ್ ಮತ್ತು ಅಸೆಂಬ್ಲಿ ಚುನಾವಣೆಗಳಲ್ಲಿ ಎನ್ಡಿಎ ಜೊತೆಗೆ ಹೋಗೋದಾಗಿಯೂ ಅವರು ಈ ಸಂಬಂಧ ಮಾಹಿತಿ ನೀಡಿದ್ದಾರೆ. ಕೇಂದ್ರ ನಾಯಕರೊಂದಿಗೆ ಚರ್ಚಿಸಲು ಹೆಚ್.ಡಿ.ಕುಮಾರಸ್ವಾಮಿಯವರು ದೆಹಲಿಗೆ ತೆರಳಿದ್ದಾರೆ. ಅವರು ವಾಪಸ್ ಬಂದ ನಂತರ ನಿಖಿಲ್ ಕುಮಾರಸ್ವಾಮಿ, ತಿಪ್ಪೇಸ್ವಾಮಿ, ಬಾಬು ಹಾಗೂ ಇತರ ನಾಯಕರೊಂದಿಗೆ ಚರ್ಚಿಸಿ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು ಎಂದು ದೇವೇಗೌಡರು ಹೇಳಿದ್ದಾರೆ.
ಅತ್ತ ಕುಮಾರಸ್ವಾಮಿ ಕೇಂದ್ರ ನಾಯಕರಾಗಿ ಕೆಲಸ ಮಾಡುತ್ತಿದ್ದಾರೆ. ಇತ್ತ ನಿಖಿಲ್ ಕುಮಾರಸ್ವಾಮಿ ಅವರು ಪಕ್ಷ ಸಂಘಟನೆ ಮಾಡುವತ್ತ ಬ್ಯುಸಿಯಾಗಿದ್ದಾರೆ. ಮಾಡಿಕೊಂಡಿರುವ ಮೈತ್ರಿ ಪ್ರಕಾರ ಎಲ್ಲಾ ಚುನಾವಣೆಗಳಲ್ಲೂ ಮೈತ್ರಿ ಮುಂದುವರೆಯುತ್ತದೆ ಎಂಬ ಸ್ಪಷ್ಟನೆಯನ್ನ ನೀಡಿದ್ದಾರೆ.



