ಹೊಸದುರ್ಗ ಮತ್ತು ಹಿರಿಯೂರಿನಲ್ಲಿ ಫೆಬ್ರವರಿ 06 ರಿಂದ ಬೆಂಬಲ ಬೆಲೆಯಲ್ಲಿ ಉಂಡೆಕೊಬ್ಬರಿ ಖರೀದಿ : ಡಿಸಿ ದಿವ್ಯಪ್ರಭು ಸೂಚನೆ

3 Min Read

 

ಮಾಹಿತಿ ಕೃಪೆ
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಚಿತ್ರದುರ್ಗ

ಚಿತ್ರದುರ್ಗ (ಫೆ. 02) : ಸರ್ಕಾರದ ಬೆಂಬಲ ಬೆಲೆ ಯೋಜನೆಯಡಿ ಎಫ್‍ಎಕ್ಯೂ ಗುಣಮಟ್ಟದ ಉಂಡೆಕೊಬ್ಬರಿಯನ್ನು ಜಿಲ್ಲೆಯಲ್ಲಿ ರೈತರಿಂದ ಖರೀದಿಸಲು ಫೆ. 06 ರಿಂದ ನೊಂದಣಿಯನ್ನು ಪ್ರಾರಂಭಿಸಿ, ಹೊಸದುರ್ಗ ಮತ್ತು ಹಿರಿಯೂರಿನಲ್ಲಿ ಖರೀದಿ ಕೇಂದ್ರ ತೆರೆಯಲು ಅಗತ್ಯ ಸಿದ್ಧತೆ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ದಿವ್ಯಪ್ರಭು ಜಿ.ಆರ್.ಜೆ. ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಬೆಂಬಲ ಬೆಲೆಯಲ್ಲಿ ಉಂಡೆಕೊಬ್ಬರಿಯನ್ನು ಖರೀದಿಸುವುದಕ್ಕೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಗುರುವಾರ ಏರ್ಪಡಿಸಲಾದ ಜಿಲ್ಲಾ ಕಾರ್ಯಪಡೆ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಬೆಂಬಲ ಬೆಲೆ ಮಾರ್ಗಸೂಚಿಯನ್ವಯ ಎಫ್‍ಎಕ್ಯೂ ಗುಣಮಟ್ಟದ ಉಂಡೆ ಕೊಬ್ಬರಿಗೆ ಕೇಂದ್ರ ಸರ್ಕಾರ ಪ್ರತಿ ಕ್ವಿಂಟಾಲ್‍ಗೆ 11,750 ರೂ. ಗಳ ಬೆಂಬಲ ಬೆಲೆ ಘೋಷಿಸಿದ್ದು, ರೈತರಿಂದ ನಾಫೆಡ್ ಸಂಸ್ಥೆ ಮೂಲಕ ಕನಾಟಕ ರಾಜ್ಯ ಸಹಕಾರ ಮಾರಾಟ ಮಹಾ ಮಂಡಳ ನಿಯಮಿತ ಇವರು ಖರೀದಿ ಕೇಂದ್ರವನ್ನು ಹೊಸದುರ್ಗ ಹಾಗೂ ಹಿರಿಯೂರಿನ ಎಪಿಎಂಸಿ ಆವರಣದಲ್ಲಿ ಖರೀದಿ ಕೇಂದ್ರ ತೆರೆಯಬೇಕು.  ಮಾರ್ಗಸೂಚಿಯಂತೆ ಪ್ರತಿ ಎಕರೆಗೆ ಗರಿಷ್ಠ 06 ಕ್ವಿಂ. ನಂತೆ, ಪ್ರತಿ ರೈತರಿಂದ ಗರಿಷ್ಠ 20 ಕ್ವಿಂ. ಉಂಡೆ ಕೊಬ್ಬರಿಯನ್ನು ಖರೀದಿಸಲು ಅವಕಾಶವಿದೆ.  ಫ್ರೂಟ್ಸ್ ತಂತ್ರಾಂಶದಲ್ಲಿ ರೈತರು ನೊಂದಣಿ ಮಾಡಿಸಿರಬೇಕು.

ಉಂಡೆಕೊಬ್ಬರಿಯನ್ನು ಬೆಂಬಲ ಬೆಲೆಯಲ್ಲಿ ಮಾರಾಟ ಮಾಡಲು ಆಸಕ್ತಿ ಇರುವ ರೈತರು ಫೆ. 06 ರಿಂದ ನೊಂದಣಿ ಮಾಡಿಸಬಹುದಾಗಿದೆ.  ರೈತರ ನೊಂದಣಿಗೆ ಮಾರ್ಚ್ 12 ರವರೆಗೆ ಅವಕಾಶ ಕಲ್ಪಿಸಲಾಗಿದೆ.  ಹದಿನೈದು ದಿನಗಳ ಒಳಗಾಗಿ ಹೊಸದುರ್ಗ ಹಾಗೂ ಹಿರಿಯೂರಿನಲ್ಲಿ ಉಂಡೆಕೊಬ್ಬರಿ ಖರೀದಿ ಕಾರ್ಯ ಪ್ರಾರಂಭಿಸಬೇಕು.  ಖರೀದಿ ಪ್ರಕ್ರಿಯೆ ಆರು ತಿಂಗಳವರೆಗೆ ಅಂದರೆ ಜುಲೈ 27 ರವರೆಗೂ ಮುಂದುವರೆಯಲಿದೆ.  ಖರೀದಿಗಾಗಿ ಅಗತ್ಯ ಗ್ರೇಡರ್ ಹಾಗೂ ಇನ್ನಿತರ ವ್ಯವಸ್ಥೆಯನ್ನು ಅಧಿಕಾರಿಗಳು ಕೈಗೊಳ್ಳಬೇಕು.  ರೈತರ ನೊಂದಣಿ, ಎಫ್‍ಎಕ್ಯೂ ಗುಣಮಟ್ಟ ಹಾಗೂ ಖರೀದಿ ಪ್ರಕ್ರಿಯೆಯಲ್ಲಿ ರೈತರಿಗೆ ಯಾವುದೇ ಗೊಂದಲ ಉಂಟಾಗದಂತೆ ವ್ಯಾಪಕ ಜಾಗೃತಿ ಮೂಡಿಸಬೇಕು.  ರೈತರ ಹೆಸರಿನ ಆಧಾರ್ ಸಂಖ್ಯೆ ಜೋಡಣೆಗೊಂಡ ಬ್ಯಾಂಕ್ ಖಾತೆಗೆ ಮಾತ್ರ ನೇರನಗದು ಪಾವತಿ ಮೂಲಕ ಹಣ ಜಮಾ ಮಾಡಬೇಕು.  ರೈತರಿಂದ ಮಾತ್ರ ಉಂಡೆ ಕೊಬ್ಬರಿ ಖರೀದಿಸಬೇಕು, ಇದರಲ್ಲಿ ಯಾವುದೇ ದುರುಪಯೋಗ ಆಗದಂತೆ ಎಚ್ಚರಿಕೆ ವಹಿಸಬೇಕು. ಒಟ್ಟಾರೆ ಬೆಂಬಲ ಬೆಲೆಯಲ್ಲಿ ಉಂಡೆಕೊಬ್ಬರಿ ಖರೀದಿ ಪ್ರಕ್ರಿಯೆ ಸುಗಮವಾಗಿ ನಡೆಯುವಂತೆ ಸಿದ್ಧತೆ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ದಿವ್ಯಪ್ರಭು ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಸಭೆಯಲ್ಲಿ ಭಾಗವಹಿಸಿದ್ದ ಜಂಟಿಕೃಷಿ ನಿರ್ದೇಶಕ ರಮೇಶ್‍ಕುಮಾರ್ ಮಾತನಾಡಿ, ಸದ್ಯ ಮಾರುಕಟ್ಟೆಯಲ್ಲಿ ಉಂಡೆಕೊಬ್ಬರಿಗೆ ಪ್ರತಿ ಕ್ವಿಂಟಾಲ್‍ಗೆ ರೂ. 9500 ರಿಂದ 10600 ವರೆಗೂ ದೊರೆಯುತ್ತಿದೆ.  ಸರ್ಕಾರ 11750 ರೂ. ಬೆಂಬಲ ಬೆಲೆ ನಿಗದಿಪಡಿಸಿರುವುದರಿಂದ, ಹೆಚ್ಚಿನ ರೈತರು ಖರೀದಿಗೆ ಮುಂದಾಗಬಹುದು ಎಂದರು.

ಚಿತ್ರದುರ್ಗ ಎಪಿಎಂಸಿ ಉಪನಿರ್ದೇಶಕ ಎಸ್.ಎನ್. ಪತ್ತಾರ್ ಮಾತನಾಡಿ, ಉಂಡೆಕೊಬ್ಬರಿ ಖರೀದಿಗಾಗಿ ಜಿಲ್ಲೆಯಲ್ಲಿ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗುತ್ತಿದ್ದು, ಕೊಬ್ಬರಿ ದಾಸ್ತಾನಿಗೂ ವ್ಯವಸ್ಥೆ ಕೈಗೊಳ್ಳಲಾಗಿದೆ ಎಂದರು.

ರಾಜ್ಯ ಸಹಕಾರ ಮಾರಾಟ ಮಹಾ ಮಂಡಳದ ಶಾಖಾ ವ್ಯವಸ್ಥಾಪಕ ಬಸವರಾಜ್ ಮಾತನಾಡಿ, ರೈತರು ಒಂದು ಚೀಲದಲ್ಲಿ ಗರಿಷ್ಟ 40 ರಿಂದ 50 ಕೆ.ಜಿ. ಉಂಡೆಕೊಬ್ಬರಿ ತರುವುದರಿಂದ, ಆ ಚೀಲವನ್ನು ಖಾಲಿ ಮಾಡಿಸಿ, ಖರೀದಿಸಿದ ಕೊಬ್ಬರಿಯನ್ನು ಇಲಾಖೆಯಿಂದಲೇ ಬೇರೆ ಚೀಲದಲ್ಲಿ ಪ್ಯಾಕಿಂಗ್ ಮಾಡಲಾಗುವುದು, ಅಲ್ಲದೆ ಉಗ್ರಾಣಕ್ಕೆ ಕಾಲಕಾಲಕ್ಕೆ ಸಾಗಾಣಿಕೆ ಮಾಡಲಾಗುವುದು.

ಕಳೆದ ವರ್ಷ ಜಿಲ್ಲೆಯಲ್ಲಿ 2075 ಕ್ವಿಂ. ನಷ್ಟು ಕೊಬ್ಬರಿಯನ್ನು ಬೆಂಬಲ ಬೆಲೆಯಲ್ಲಿ ಖರೀದಿಸಲಾಗಿತ್ತು, ಈ ವರ್ಷ ಜಿಲ್ಲೆಯಲ್ಲಿ ಹೊಸದುರ್ಗ ತಾಲ್ಲೂಕಿನಲ್ಲಿ ಅತಿ ಹೆಚ್ಚು 28315 ಹೆ. ನಲ್ಲಿ ತೆಂಗು ಬೆಳೆ ಇದ್ದು, ಹಿರಿಯೂರಿನಲ್ಲಿ 10037 ಹೆ. ಇದೆ.  ಉಳಿದಂತೆ ಚಳ್ಳಕೆರೆ-822 ಹೆ., ಚಿತ್ರದುರ್ಗ-1049 ಹೆ., ಹೊಳಲ್ಕೆರೆ-5762 ಹೆ., ಮೊಳಕಾಲ್ಮೂರಿನಲ್ಲಿ ಅತಿ ಕಡಿಮೆ 138 ಹೆ. ತೆಂಗು ಬೆಳೆ ಇದೆ.  ಹೀಗಾಗಿ ಈ ಬಾರಿ ಅಂದಾಜು ಎರಡರಿಂದ ಎರಡೂವರೆ ಸಾವಿರ ಕ್ವಿಂ. ನಷ್ಟು ಉಂಡೆಕೊಬ್ಬರಿ ಖರೀದಿಯಾಗುವ ಸಾಧ್ಯತೆಗಳಿವೆ ಎಂದರು.

ಸಭೆಯಲ್ಲಿ ಜಿಲ್ಲಾ ಲೀಡ್ ಬ್ಯಾಂಕ್ ವ್ಯವಸ್ಥಾಪಕ ಚಂದ್ರಯ್ಯ ಹಿರೇಮಠ, ರಾಜ್ಯ ಉಗ್ರಾಣ ನಿಗಮದ ಅಧಿಕಾರಿ ಮಾರುತಿ, ಸಹಕಾರ ಸಂಘಗಳ ಉಪನಿಬಂಧಕ ಹೆಚ್. ಮೂರ್ತಿ, ಹೊಸದುರ್ಗ ಎಪಿಎಂಸಿ ಕಾರ್ಯದರ್ಶಿ ಗೌತಮ್, ಹಿರಿಯೂರಿನ ಅತಾವುಲ್ಲ, ಕಾನೂನು ಮಾಪನ ಶಾಸ್ತ್ರ ಇಲಾಖೆ ನಿರೀಕ್ಷಕ ರಾಗ್ಯಾನಾಯ್ಕ ಮುಂತಾದವರು ಉಪಸ್ಥಿತರಿದ್ದರು.

Share This Article
Leave a Comment

Leave a Reply

Your email address will not be published. Required fields are marked *