ವರದಿ : ಸುರೇಶ್ ಪಟ್ಟಣ್
ಚಿತ್ರದುರ್ಗ, (ನ.30) : ಕಾಂಗ್ರೆಸ್ ನಲ್ಲಿರುವ ಬಂಡಾಸುರ ಹಾಗೂ ಮೂಂಡಾಸುರರಿಂದ ಸಿಎಂ ಸ್ಥಾನಕ್ಕಾಗಿ ಕಚ್ಚಾಟ ಹೆಚ್ಚಾಗಿದ್ದು, ಇದನ್ನು ಮುಚ್ಚಿಕೊಳ್ಳಲು ಇತರರ ಮೇಲೆ ಗೂಬೆ ಕೂರಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ.ಶ್ರೀರಾಮುಲು ಲೇವಡಿ ಮಾಡಿದ್ದಾರೆ.
ನಗರದ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಇಂದು ವಿಧಾನ ಪರಿಷತ್ ಚುನಾವಣೆ ಸಂಬಂಧ ದಾವಣಗೆರೆ ಹಾಗೂ ಚಿತ್ರದುರ್ಗ ಜಿಲ್ಲೆಯ ಬಿಜೆಪಿ ಮುಖಂಡರ ಸಭೆಯ ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
ದೇಶದ ಪ್ರಧಾನಿ ನರೇಂದ್ರ ಮೋದಿಜಿ ಅವರ ಬಗ್ಗೆ ಹಗುರವಾಗಿ ಮಾತನಾಡಿರುವ ಬಂಡಾಸುರರಾದ ಡಿ.ಕೆ.ಶಿವಕುಮಾರ್ ಅವರು ದೊಡ್ಡವರ ಬಗ್ಗೆ ಮಾತನಾಡಿದ ತಕ್ಷಣ ತಾನೂ ಕೂಡ ದೊಡ್ಡವನಾಗುತ್ತೇನೆ ಎಂಬ ಕನಸ್ಸಿನಲ್ಲಿ ತೇಲುತ್ತಿದ್ದಾರೆ. ಯಾವುದೇ ವ್ಯಕ್ತಿ ಬಗ್ಗೆ ಮಾತನಾಡುವ ಮೊದಲು ಯೋಚನೆ ಮಾಡಿ ಮಾತನಾಡುವ ಅರಿವು ಮೂಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಪ್ರಸ್ತುತ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದು, ಮುಂದಿನ ಭಾರೀಯೂ ಬಿಜೆಪಿ ಹೆಚ್ಚಿನ ಸ್ಥಾನಗಳನ್ನು ಗೆಲ್ಲುವ ಮೂಲಕ ಅಧಿಕಾರ ನಡೆಸಲಿದೆ. ಆದರೆ ರಾಜ್ಯ ಸೇರಿದಂತೆ ದೇಶದಲ್ಲೇ ಬೆರಳೆಣಿಕೆಯಷ್ಟು ಸ್ಥಾನಗಳಲ್ಲಿರುವ ಕಾಂಗ್ರೆಸ್ ನಲ್ಲಿ ಬಂಡಾಸುರರಾದ ಡಿ.ಕೆ.ಶಿವಕುಮಾರ್ ಹಾಗೂ ಮೂಂಡಾಸುರರಾದ ಸಿದ್ದರಾಮಯ್ಯ ಅವರು ಸಿಎಂ ಸ್ಥಾನಕ್ಕಾಗಿ ಕಚ್ಚಾಟ ನಡೆಸುತ್ತಿದ್ದಾರೆ. ಇಬ್ಬರಲ್ಲಿನ ಒಳ ಜಗಳ ಹೆಚ್ಚಾಗುತ್ತಿದ್ದು, ಇದನ್ನು ಮುಚ್ಚಿಕೊಳ್ಳಲು ಬಿಜೆಪಿ ಬಗ್ಗೆ ಮಾತನಾಡುತ್ತಿದ್ದಾರೆ. ಆದರೆ ನಮ್ಮಲ್ಲಿ ಯಾವುದೇ ಒಳ ಜಗಳಗಳು ಇಲ್ಲ.ನಾವೆಲ್ಲ ಒಗ್ಗಟ್ಟಿನಿಂದ ಇದ್ದು, ವಿಧಾನ ಪರಿಷತ್ ಚುನಾವಣೆಯಲ್ಲಿ ಹೆಚ್ಚಿನ ಸ್ಥಾನಗಳನ್ನು ಗೆಲ್ಲುವ ಮೂಲಕ ಕಾಂಗ್ರೆಸ್ ಗೆ ತಕ್ಕ ಪಾಠ ಕಲಿಸಲಾಗುವುದು ಎಂದು ಹೇಳಿದರು.
ಬಿಟ್ ಕಾಯನ್ ಬಗ್ಗೆ ಹೇಳಿಕೆ ನೀಡುವ ಕಾಂಗ್ರೆಸ್ ಮುಖಂಡರಗಳು ಮೊದಲು ಆಧಾರ ರಹಿತವಾಗಿ ಮಾತನಾಡುವುದನ್ನು ನಿಲ್ಲಿಸಬೇಕು.ಸಿಎಂ ಬೊಮ್ಮಾಯಿ ಅವರೆ ಹೇಳಿಕೆಯನ್ನು ನೀಡಿರುವಂತೆ ಆಧಾರವನ್ನು ನೀಡಿದಲ್ಲಿ ತಪ್ಪಿತಸ್ಥರ ಮೇಲೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದರು.
ಮಳೆ ತಂದಂತಹ ಅವಾಂತರದಿಂದಾಗಿ ಜಿಲ್ಲೆಯಲ್ಲಿ ಹೆಚ್ಚಿನ ಬೆಳೆ ನಷ್ಟವಾಗಿದೆ. ಈ ಬಗ್ಗೆ ಸಿಎಂ ಜೊತೆಯಲ್ಲಿ ಚರ್ಚಿಸಲಾಗಿದ್ದು, ಕೇಂದ್ರ ಹಾಗೂ ರಾಜ್ಯದಿಂದ ಅಧಿಕಾರಿಗಳ ತಂಡಗಳು ಬಂದು ವರದಿ ನೀಡಿದ ತಕ್ಷಣ ಪರಿಹಾರ ನೀಡುವ ಕಾರ್ಯವನ್ನು ಮಾಡಲಾಗುವುದು ಈ ಬಗ್ಗೆ ರೈತರಲ್ಲಿ ಆತಂಕ ಬೇಡ ಎಂದು ಭರವಸೆ ನೀಡಿದರು.
ಕೊರೊನಾ ಮೂರನೇ ಅಲೆ ಬಗ್ಗೆ ಜನರು ಎಚ್ಚರ ವಹಿಸಬೇಕು. ಸರ್ಕಾರದಿಂದ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸವನ್ನು ಮಾಡಲಾಗುತ್ತಿದ್ದು, ಜನರು ಕೂಡ ಸಾಮಾಜಿಕ ಅಂತರ, ಮಾಸ್ಕ್ ಧರಿಸಿ ಎಚ್ಚರದಿಂದ ಇದ್ದು, ತಮ್ಮ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ಹೇಳಿದರು.
ವಿಧಾನ ಪರಿಷತ್ ಅಭ್ಯರ್ಥಿ ಕೆ.ಎಸ್.ನವೀನ್ ಸೇರಿದಂತೆ ಇತರರು ಉಪಸ್ಥಿತರಿದ್ದರು.