ಚಿತ್ರದುರ್ಗ ಮೆಡಿಕಲ್ ಕಾಲೇಜಿನಲ್ಲಿ ವೈಟ್ ಕೋಟ್ ಸಮಾರಂಭ :ನಿಸ್ವಾರ್ಥ ಸೇವೆ ಸಲ್ಲಿಸುವ ವೈದ್ಯರಾಗಿ ಹೊರಹೊಮ್ಮಿ : ಕೇಂದ್ರ ಸಚಿವ ಎ.ನಾರಾಯಣಸ್ವಾಮಿ ಸಲಹೆ

2 Min Read

 

 

ಚಿತ್ರದುರ್ಗ. ಡಿ.22: ಚಿತ್ರದುರ್ಗ ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಗೆ ಪ್ರಸಕ್ತ ಸಾಲಿನಲ್ಲಿ 150 ವಿದ್ಯಾರ್ಥಿಗಳು ವೈದ್ಯಕೀಯ ಶಿಕ್ಷಣಕ್ಕೆ ಪ್ರವೇಶ ಪಡೆದಿದ್ದು, ಭವಿಷ್ಯದಲ್ಲಿ ರಾಜ್ಯ, ರಾಷ್ಟ್ರ, ವಿಶ್ವಕ್ಕೆ ನಿಸ್ವಾರ್ಥವಾಗಿ ಸೇವೆ ಸಲ್ಲಿಸುವ ವೈದ್ಯರಾಗಿ ಹೊರಹೊಮ್ಮಬೇಕು ಎಂದು ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಇಲಾಖೆ ರಾಜ್ಯ ಸಚಿವ ಎ.ನಾರಾಯಣ ಸ್ವಾಮಿ ವೈದ್ಯಕೀಯ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

ನಗರದ ತರಾಸು ರಂಗಮಂದಿರದಲ್ಲಿ ಶುಕ್ರವಾರ ಚಿತ್ರದುರ್ಗ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಸಂಸ್ಥೆ ವತಿಯಿಂದ ಹಮ್ಮಿಕೊಂಡಿದ್ದ 2023-24ನೇ ಶೈಕ್ಷಣಿಕ ಸಾಲಿನ ಎಂಬಿಬಿಎಸ್ ವಿದ್ಯಾರ್ಥಿಗಳಿಗೆ ವೈಟ್ ಕೋಟ್ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ ಪ್ರತಿ ಸಾವಿರ ಮಂದಿಗೆ ಒಬ್ಬ ವೈದ್ಯರು ಇರಬೇಕು. ಆದರೆ ದೇಶದಲ್ಲಿ 800 ಮಂದಿಗೆ ಒಬ್ಬ ವೈದ್ಯರು ಇದ್ದಾರೆ.  ನರೇಂದ್ರ ಮೋದಿ ಅವರು ಪ್ರಧಾನಿ ಆದ ನಂತರ 60 ಸಾವಿರ ವಿದ್ಯಾರ್ಥಿಗಳನ್ನು ವೈದ್ಯಕೀಯ ಕ್ಷೇತ್ರದ ಪ್ರವೇಶಕ್ಕೆ ಅವಕಾಶ ಕಲ್ಪಿಸಿದ್ದಾರೆ ಎಂದು ತಿಳಿಸಿದರು.

ವಿಶ್ವ ಆರೋಗ್ಯ ಸಂಸ್ಥೆಯ ನಿಯಮಕ್ಕಿಂತಲೂ ನಮ್ಮ ದೇಶದಲ್ಲಿ ವೈದ್ಯರ ಸಂಖ್ಯೆ ಜಾಸ್ತಿ ಇದೆ. ಆದರೆ ಈ ದೇಶದ ಜನರಿಗೆ ವೈದ್ಯಕೀಯ ಸೇವೆಯ ವೆಚ್ಚವೂ ಜಾಸ್ತಿಯಾಗುತ್ತಿದೆ. ಇದಕ್ಕೆ ನಮಲ್ಲಿ ಮೌಲ್ಯಗಳ ಕುಸಿತ, ಸಾಮಾಜಿಕ ಕಳಕಳಿ ಇಲ್ಲದೇ ಇರುವುದೇ ಪ್ರಮುಖ ಕಾರಣವಾಗಿದೆ.  ಯಾವುದೇ ವೃತ್ತಿಯಲ್ಲಿ ನೈತಿಕತೆ ಇರಬೇಕು. ನೈತಿಕತೆ ಇಲ್ಲದ ವೃತ್ತಿ ವೃತ್ತಿಯೇ ಅಲ್ಲ ಎಂದು ಹೇಳಿದರು.

ವಿಧಾನ ಪರಿಷತ್ ಸದಸ್ಯ ಕೆ.ಎಸ್.ನವೀನ್ ಮಾತನಾಡಿ, ವೈದ್ಯರಲ್ಲಿ ದೇವರನ್ನು ಕಾಣುವ ಪರಂಪರೆ ಭಾರತೀಯ ಸಂಸ್ಕøತಿಯಲ್ಲಿ ಹಿಂದಿನಿಂದಲೂ ಪಾಲಿಸಿಕೊಂಡು ಬರಲಾಗುತ್ತಿದೆ. ರೋಗಿಗಳ ಪ್ರಾಣವನ್ನು ಉಳಿಸುವ ನಿಟ್ಟಿನಲ್ಲಿ ಮಾನವೀಯತೆ, ಪ್ರಾಮಾಣಿಕತೆಯಿಂದ ಸೇವೆ ಸಲ್ಲಿಸಿದರೆ ಹೆಸರು, ಕೀರ್ತಿ, ಹಣವೂ ಸಿಗಲಿದೆ. ಕೇವಲ ಹಣದ ಹಿಂದೆ ಹೋಗಬಾರದು ಎಂದು ಕಿವಿಮಾತು ಹೇಳಿದರು.

ಜಿಲ್ಲೆಯ ಜನರು ಹಾಗೂ ಜನಪ್ರತಿನಿಧಿಗಳ ಅನೇಕ ವರ್ಷಗಳ ಹೋರಾಟದ ಫಲವಾಗಿ ಚಿತ್ರದುರ್ಗ ಜಿಲ್ಲೆಗೆ ಸರ್ಕಾರಿ ವೈದ್ಯಕೀಯ ಕಾಲೇಜು ಹಾಗೂ ಸಂಶೋಧನಾ ಸಂಸ್ಥೆ ಮಂಜೂರಾಗಿದೆ. ಇಲ್ಲಿ ಪ್ರವೇಶ ಪಡೆದ ವೈದ್ಯಕೀಯ ವಿದ್ಯಾರ್ಥಿಗಳು ವಿಶ್ವದ ಎಲ್ಲ ಕಡೆಗಳಲ್ಲಿಯೂ ಚಿತ್ರದುರ್ಗ ಜಿಲ್ಲೆಗೆ ಕೀರ್ತಿ ತರಬೇಕು ಎಂದರು.

ಚಿತ್ರದುರ್ಗ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಸಂಸ್ಥೆ ವಿಶೇಷಾಧಿಕಾರಿ ಡಾ.ಬಿ.ವೈ.ಯುವರಾಜ್ ಮಾತನಾಡಿ, ಎಂಬಿಬಿಎಸ್ ವಿದ್ಯಾರ್ಥಿಗಳಿಗೆ ವೈಟ್‍ಕೋಟ್ ಸಮಾರಂಭವು ವಿದ್ಯಾರ್ಥಿಗಳಿಗೆ ವೈದ್ಯಕೀಯ ವೃತ್ತಿ ಅಂಗೀಕಾರದ ವಿಧಿಯಾಗಿದೆ. ಇದು ವೈದ್ಯಕೀಯ ವಿದ್ಯಾರ್ಥಿಗಳ ವೈದಕೀಯ ವೃತ್ತಿಗೆ ಪ್ರವೇಶ ಸೂಚಿಸುತ್ತದೆ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ರಾಷ್ಟ್ರೀಯ ವೈದ್ಯಕೀಯ ಆಯೋಗದನ್ವಯ ಮಹರ್ಷಿ ಚರಕ ಶಪಥವನ್ನು ಚಿತ್ರದುರ್ಗ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಸಂಸ್ಥೆ ವಿಶೇಷಾಧಿಕಾರಿ ಡಾ.ಬಿ.ವೈ.ಯುವರಾಜ್ ವೈದ್ಯಕೀಯ ವಿದ್ಯಾರ್ಥಿಗಳಿಗೆ ಬೋಧಿಸಿದರು. ಸಮಾರಂಭದ ಅಂಗವಾಗಿ ಪ್ರತಿ ಎಂಬಿಬಿಎಸ್ ವಿದ್ಯಾರ್ಥಿ ಇದೇ ಸಂದರ್ಭದಲ್ಲಿ ಬಿಳಿ ಕೋಟ್ ಧರಿಸಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಜಿ.ಪಿ.ರೇಣುಪ್ರಸಾದ್, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಎಸ್.ಪಿ. ರವೀಂದ್ರ, ಚಿತ್ರದುರ್ಗ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಸಂಸ್ಥೆಯ ಮುಖ್ಯ ಲೆಕ್ಕಾಧಿಕಾರಿ ಹಾಗೂ ಆರ್ಥಿಕ ಸಲಹೆಗಾರ ವಿ.ಮಹೇಶ್, ಉಪನ್ಯಾಸಕರಾದ ಡಾ.ಪ್ರಕಾಶ್, ಡಾ.ಸಾಗರ್, ಡಾ.ಶ್ರೀನಿವಾಸ್ ಸೇರಿದಂತೆ ಎಂಬಿಬಿಎಸ್ ಪ್ರಥಮ ವರ್ಷದ ವಿದ್ಯಾರ್ಥಿಗಳು ಇದ್ದರು.

Share This Article
Leave a Comment

Leave a Reply

Your email address will not be published. Required fields are marked *