ಚಿತ್ರದುರ್ಗ: ಮುನ್ನೂರು ಕೋಟಿ ರೂ.ಗಳಲ್ಲಿ ಹೊಸ ಬಸ್‍ಗಳನ್ನು ಖರೀದಿಸುವಂತೆ ರಾಜ್ಯದ ಮುಖ್ಯಮಂತ್ರಿಗೆ ಪ್ರಸ್ತಾವನೆ ಸಲ್ಲಿಸಿರುವುದಕ್ಕೆ ಸ್ಪಂದಿಸಿದ್ದಾರೆ ಎಂದು ಹೊಳಲ್ಕೆರೆ ಶಾಸಕ ಎಂ.ಚಂದ್ರಪ್ಪ ತಿಳಿಸಿದರು.
ಆಶ್ರಯ ಯೋಜನೆಯಡಿ ಬಡ ಫಲಾನುಭವಿಗಳಿಗೆ ಮನೆಗಳನ್ನು ನಿರ್ಮಿಸುವ ಸಂಬಂಧ ಪ್ರವಾಸಿ ಮಂದಿರದಲ್ಲಿ ಶನಿವಾರ ಭರಮಸಾಗರ ಹೋಬಳಿಯ ಎಲ್ಲಾ ಗ್ರಾಮ ಪಂಚಾಯಿತಿ ಪಿ.ಡಿ.ಓ.ಹಾಗೂ ಕಾರ್ಯದರ್ಶಿಗಳ ಸಭೆ ನಡೆಸಿದ ನಂತರ ಸುದ್ದಿಗಾರರ ಜೊತೆ ಮಾತನಾಡಿದ ಶಾಸಕರು ಕಳೆದ ಎರಡು ವರ್ಷಗಳಿಂದ ಕೊರೋನಾ ಸಂದಿಗ್ದ ಪರಿಸ್ಥಿತಿಯಲ್ಲಿ ಕೆ.ಎಸ್.ಆರ್.ಟಿ.ಸಿ.ನಷ್ಟ ಅನುಭವಿಸಿದರೂ ಪ್ರಯಾಣಿಕರ ಮೇಲೆ ಹೊರೆಯಾಗಬಾರದೆಂದು ಬಸ್ ದರವನ್ನು ಏರಿಸಿಲ್ಲ.
7300 ಕೋಟಿ ರೂ.ನಷ್ಟದಲ್ಲಿದ್ದರು ಪ್ರತಿ ತಿಂಗಳ ಏಳನೇ ತಾರೀಖಿನಂದು ಎಲ್ಲಾ ಚಾಲಕರು ಹಾಗೂ ನಿರ್ವಾಹಕರುಗಳಿಗೆ ಸಂಬಳ ನೀಡುತ್ತಿದ್ದೇವೆ.
ರಾಜ್ಯದಲ್ಲಿ ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿರುವ ಎಲ್ಲಾ ಕಾರ್ಮಿಕ ವರ್ಗಕ್ಕೆ ಉಚಿತ ಬಸ್‍ಪಾಸ್ ನೀಡಲು ತೀರ್ಮಾನಿಸಲಾಗಿದೆ. ಹತ್ತು ಸಾವಿರದಿಂದ ಇಪ್ಪತ್ತು ಸಾವಿರ ಕುಟುಂದವರು ಇದರ ಪ್ರಯೋಜನ ಪಡೆಯಲಿದ್ದಾರೆಂದು ಹೇಳಿದರು.
ಚಿತ್ರದುರ್ಗದಲ್ಲಿ ಮೂವತ್ತು ಕೋಟಿ ರೂ.ಗಳ ಹೈಟೆಕ್ ಬಸ್‍ನಿಲ್ದಾಣ ನಿರ್ಮಾಣ ಮಾಡಲಾಗುವುದು. ಮುಖ್ಯಮಂತ್ರಿಗಳು ಹಣ ಮಂಜೂರು ಮಾಡಿದ ಮೇಲೆ ಕಾಮಗಾರಿ ಆರಂಭಗೊಳ್ಳಲಿದೆ. ಡೀಸೆಲ್ ರೇಟ್ ಜಾಸ್ತಿಯಾಗಿದೆ. ಶಿವಮೊಗ್ಗದಿಂದ ಚಿತ್ರದುರ್ಗಕ್ಕೆ ಪ್ರಯಾಣ ದರವನ್ನು 105 ರೂ.ಗಳಿಗೆ ನಿಗಧಿ ಮಾಡಿದ್ಧರೂ ಪ್ರಯಾಣಿಕರಿಂದ 90 ರೂ.ಗಳನ್ನಷ್ಟೆ ಪಡೆಯಲಾಗುತ್ತಿದೆ.
ವ್ಯವಹಾರ ಎನ್ನುವುದಕ್ಕಿಂತಲೂ ಸೇವಾ ಮನೋಭಾವವನ್ನಿಟ್ಟುಕೊಂಡು ಬಸ್‍ಗಳು ಸಂಚರಿಸುತ್ತಿವೆ. ಇನ್ನು ಆರು ತಿಂಗಳೊಳಗೆ ಐವತ್ತು ಎಲೆಕ್ಟ್ರಿಕ್ ಬಸ್‍ಗಳು ರಾಜ್ಯದಲ್ಲಿ ಸಂಚರಿಸಲಿವೆ. ಹೈದರಾಬಾದ್‍ನಲ್ಲಿ ಬಸ್‍ಗಳು ತಯಾರಾಗುತ್ತಿದೆ. ಒಟ್ಟಾರೆ ಕೆ.ಎಸ್.ಆರ್.ಟಿ.ಸಿ.ಯಲ್ಲಿ ಸುಧಾರಣೆ ತರುವುದು ನಮ್ಮ ಉದ್ದೇಶ ಎಂದರು.
ಕ್ಷೇತ್ರಾದ್ಯಂತ ಪ್ರತಿ ಗ್ರಾಮ ಪಂಚಾಯಿತಿಗಳಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರ ಐದರಿಂದ ಹತ್ತು ಕೋಟಿ ರೂ.ಗಳನ್ನು ನೀಡಿದೆ. ಇದರಲ್ಲಿ ಚರಂಡಿ, ಮನೆಗಳ ನಿರ್ಮಾಣ ಮಾಡಲಾಗುವುದು. ಯಾದವ ಸಮಾಜದ ಅಲೆಮಾರಿಗಳಿಗೂ ಮನೆಗಳನ್ನು ಕಟ್ಟಿಸಿಕೊಡುತ್ತೇವೆ.
ಪ್ರತಿ ಶನಿವಾರ ಸಭ ನಡೆಸಿ ಬಡವರು, ನಿವೇಶನರಹಿತರಿಗೆ ಮನೆಗಳನ್ನು ಕಟ್ಟಿಸಿಕೊಡುವ ಕೆಲಸವನ್ನು ಆರಂಭಿಸಲಾಗುವುದು. ಮೂರು ನಾಲ್ಕು ವರ್ಷಗಳಿಂದ ಮಳೆ ಸರಿಯಾಗಿ ಸುರಿಯದ ಕಾರಣ ಹೊಳಲ್ಕೆರೆ ಕ್ಷೇತ್ರದಲ್ಲಿ ರೈತರು ಸಂಕಷ್ಟದಲ್ಲಿದ್ಧಾರೆ. ಈಗ ಸ್ವಲ್ಪ ಸುಧಾರಣೆಯಾಗಿದೆ. ಗ್ರಾಮೀಣ ಭಾಗದಲ್ಲಿ ವಿದ್ಯುತ್, ನೀರು, ಚರಂಡಿ ವ್ಯವಸ್ಥೆ ಮಾಡಿದ್ದೇವೆ. ಅದಕ್ಕಾಗಿ ಕಂದಾಯವನ್ನು ಸರಿಯಾಗಿ ವಸೂಲು ಮಾಡುವಂತೆ ಗ್ರಾಮ ಪಂಚಾಯಿತಿಗಳಿಗೆ ಸೂಚಿಸಿದ್ದೇನೆ.
ಎಂಬತ್ತು ಪರ್ಸೆಂಟ್ ಕಂದಾಯ ವಸೂಲಾಗಿದೆ. ಉಳಿದ ಬಾಕಿ ಕಂದಾಯವನ್ನು ವಸೂಲು ಮಾಡಬೇಕು. ನಾಲ್ಕು ವರ್ಷಗಳಲ್ಲಿ ಹೊಳಲ್ಕೆರೆ ಕ್ಷೇತ್ರ ಅಭಿವೃದ್ದಿಪಥದತ್ತ ಸಾಗುತ್ತಿದೆ. ಇದಕ್ಕೆ ಅಧಿಕಾರಿಗಳು ಸ್ಪಂದಿಸಿ ಕೆಲಸ ಮಾಡುತ್ತಿದ್ದಾರೆಂದು ಶಾಸಕರು ಮೆಚ್ಚುಗೆ ವ್ಯಕ್ತಪಡಿಸಿದರು.
ಚಿತ್ರದುರ್ಗ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಹನುಮಂತಪ್ಪ, ತಹಶೀಲ್ದಾರ್ ಜಿ.ಹೆಚ್.ಸತ್ಯನಾರಾಯಣ, ಮಾಧ್ಯಮ ವಕ್ತಾರ ದಗ್ಗೆಶಿವಪ್ರಕಾಶ್ ಈ ಸಂದರ್ಭದಲ್ಲಿದ್ದರು.