ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817
ಸುದ್ದಿಒನ್, ಚಿತ್ರದುರ್ಗ,(ಜು.17) : ರೇಷ್ಮೆಗೂಡಿನ ದರ ತೀವ್ರ ಕುಸಿತಗೊಂಡಿರುವುದರಿಂದ ರಾಜ್ಯ ಸರ್ಕಾರ ಮಧ್ಯಪ್ರವೇಶಿಸಿ ಕೆ.ಜಿ. 1ಕ್ಕೆ ರೂ.800/- ಕಡಿಮೆ ಇಲ್ಲದಂತೆ ನಿಗದಿ ಮಾಡಿ ಖರೀದಿ ಮಾಡಬೇಕು. ಚಾಕಿ ಹುಳುವಿನ ದರ ಏರಿಕೆಯಾಗಿದ್ದು, ಚಾಕಿ ದರ ಕಡಿಮೆಗೊಳಿಸಿ ರೈತರಿಗೆ ಸಬ್ಸಿಡಿ ದರದ ರೂಪದಲ್ಲಿ ಚಾಕಿ ಹುಳುಗಳನ್ನು ವಿತರಿಸಬೇಕು, ಚಾಕಿ ಕೇಂದ್ರಗಳ ಗುಣಮಟ್ಟ ರಕ್ಷಣೆಗೆ ರೇಷ್ಮೆ ಇಲಾಖೆ ನಿಗವಹಿಸಬೇಕು ಸೇರಿದಂತೆ ಇತರೆ ಬೇಡಿಕೆಯನ್ನು ಈಡೇರಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘದ ನೇತೃತ್ವದಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗದಲ್ಲಿ ಪ್ರತಿಭಟನೆಯನ್ನು ನಡೆಸಿದರು.
ಇತ್ತೀಚಿನ ವರ್ಷಗಳಲ್ಲಿ ನಮ್ಮ ಜಿಲ್ಲೆಯಲ್ಲಿ ವ್ಯಾಪಕವಾಗಿ ರೇಷ್ಮೆ ಕೃಷಿಯನ್ನು ಕೈಗೊಂಡಿದ್ದು, ಇದು ಅತ್ಯಂತ ಸೂಕ್ಷ್ಮ ಬೆಳೆಯಾಗಿದ್ದು, ಬಹಳ ಜೋಪಾನವಾಗಿ ವೈಜ್ಞಾನಿಕ ಕ್ರಮ ಅನುಸರಿಸಿ ಬೆಳೆ ಬೆಳೆಯಬೇಕಾಗಿರುತ್ತದೆ. ಇದುವರೆಗೂ ಬೈವೋಲ್ಟಿನ್ ತಳಿಯ ಬೆಳೆಗೆ ಕೆ.ಜಿ 1ಕ್ಕೆ ರೂ.800/- ಇದ್ದು, ಇತ್ತೀಚಿನ ದಿನಗಳಲ್ಲಿ ಕೇಂದ್ರ ಸರ್ಕಾರ ಚೀನಾದಿಂದ ಹೆಚ್ಚಿನ ಪ್ರಮಾಣದಲ್ಲಿ ರೇಷ್ಮೆ ನೂಲು ಆಮದು ಮಾಡಿಕೊಂಡಿರುವುದರಿಂದ ಬೆಲೆ ಕುಸಿತ ಕಂಡಿರುತ್ತದೆ. ಸ್ಥಳೀಯ ಡೀಲರ್‍ಗಳು ರೇಷ್ಮೆ ಗೂಡಿಗೆ ಹೆಚ್ಚಿನ ಬೆಲೆಗೆ ಖರೀದಿ ಮಾಡುತ್ತಿಲ್ಲ. ಆದ್ದರಿಂದ ರೇಷ್ಮೆ ಬೆಳೆಗಾರರು ಕಾಂಗಲಾಗಿದ್ದು, ಉತ್ಪಾದನಾ ವೆಚ್ಚ ಅಧಿಕವಾದ ಕಾರಣ ರೇಷ್ಮೆ ಬೆಳೆಯನ್ನು ಕೈಬಿಡುವ ಪರಿಸ್ಥಿತಿ ಉಂಟಾಗಿದೆ. ಆದ್ದರಿಂದ ಕರ್ನಾಟಕ ಸರ್ಕಾರ ಮಧ್ಯಪ್ರವೇಶಿಸಿ ರೇಷ್ಮೆ ಬೆಳೆಗಾರರ ಹಿತ ಕಾಪಾಡಬೇಕೆಂದು ಮನವಿ ಮಾಡಲಾಯಿತು.
ರೇಷ್ಮೆಗೂಡಿಗೆ ಕೆ.ಜಿ 1ಕ್ಕೆ ರೂ.50/- ಇದ್ದ ಪ್ರೋತ್ಸಾಹ ಧನ ನಿಲ್ಲಿಸಲಾಗಿದ್ದು, ಕೂಡಲೇ ಪುನಾರಂಭಿಸಿ ಕೆ.ಜಿ. ರೂ.200/- ಕಡಿಮೆ ಇಲ್ಲದಂತೆ ಪ್ರೋತ್ಸಾಹ ಧನ ಸರ್ಕಾರ ನಿಗದಿಗೊಳಿಸಬೇಕು ರೇಷ್ಮೆಗೂಡಿನ ಸಾಗಣಿಕೆ ವೆಚ್ಚವನ್ನು ಬೇರೆ ಜಿಲ್ಲೆಗಳಂತೆ ನಮ್ಮ ಜಿಲ್ಲೆಗೂ ವಿಸ್ತರಿಸಬೇಕು. 5. ರೇಷ್ಮೆ ಹುಳುವಿನ ಸಾಕಾಣಿಕೆ ಮನೆಯನ್ನು ನಿರ್ಮಿಸಲು ಈಗ ರೂ.3 ಲಕ್ಷ ಸಹಾಯಧನ ನೀಡುತ್ತಿದ್ದು, ಎಲ್ಲಾ ವಸ್ತುಗಳು ಮತ್ತು ನಿರ್ಮಾಣದ ವೆಚ್ಚ ಅಧಿಕವಾಗಿರುವುದರಿಂದ ರೂ.6 ಲಕ್ಷಕ್ಕೆ ಜಾಸ್ತಿ ಮಾಡಬೇಕು ಎಂದು ಆಗ್ರಹಿಸಲಾಯಿತು.
ಪ್ರತಿಭಟನೆಯಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಜಿ.ಸುರೇಶ್ ಬಾಬು, ತಾಲ್ಲೂಕು ಅಧ್ಯಕ್ಷ ಧನಂಜಯ, ಮುಖಂಡರಾದ ಭೂತಯ್ಯ, ಮಂಜಪ್ಪ ಶಿವನಕೆರೆ, ಸಿ.ನಾಗರಾಜು ಮುದ್ದಾಪುರ, ಎಸ್.ಟಿ.ಚಂದ್ರಪ್ಪ, ಚಿಕ್ಕಪ್ಪನಹಳ್ಳಿ ರುದ್ರಸ್ವಾಮಿ, ಮಕ್ಲಹಳ್ಳಿ ರವಿಕುಮಾರ್, ಬೇಡರೆಡ್ಡಿ ಹಳ್ಳಿ ಬಸವರೆಡ್ಡಿ ಎಂ.ಬಿ.ತಿಪ್ಪೇಸ್ವಾಮಿ ಕಾಂತರಾಜು, ಮೂರ್ತಿ, ಮಹಂತಣ್ಣ, ಶಾಂತಣ್ಣ, ಮಲ್ಲಿಕಾರ್ಜನ ನಾಗರಾಜು ಸೇರಿದಂತೆ ಇತರರು ಭಾಗವಹಿಸಿದ್ದರು.