ಬೆಂಗಳೂರು: ಗಣಿ ಮತ್ತು ಭೂವಿಜ್ಞಾನ ಇಲಾಖೆಯಲ್ಲಿ ಹಿರಿಯ ಭೂವಿಜ್ಞಾನಿಯಾಗಿ ಕೆಲಸ ಮಾಡುತ್ತಿದ್ದ ಮಹಿಳೆಯೊಬ್ಬರು ತಮ್ಮ ನಿವಾಸದಲ್ಲಿ ಕೊಲೆಯಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ ಎಂದು ಪೊಲೀಸರು ಭಾನುವಾರ ತಿಳಿಸಿದ್ದಾರೆ.
ಮೃತರನ್ನು 43 ವರ್ಷದ ಕೆ ಎಸ್ ಪ್ರತಿಮಾ ಎಂದು ಗುರುತಿಸಲಾಗಿದೆ.
ಶನಿವಾರ ರಾತ್ರಿ ಸುಬ್ರಹ್ಮಣ್ಯಪುರ ಪೊಲೀಸ್ ಠಾಣಾ ವ್ಯಾಪ್ತಿಯ ದೊಡ್ಡಕಲ್ಲಸಂದ್ರದಲ್ಲಿರುವ ತನ್ನ ನಿವಾಸದಲ್ಲಿ ಈ ಘಟನೆ ನಡೆದಿದೆ ಎಂದು ಅಧಿಕಾರಿಗಳು ಶಂಕಿಸಿದ್ದಾರೆ.
ಪೋಲೀಸರ ಪ್ರಕಾರ, ಕತ್ತು ಹಿಸುಕಿ ಮತ್ತು ಕತ್ತು ಸೀಳಿದ್ದರಿಂದ ಸಾವು ಸಂಭವಿಸಿದೆ.
ಶನಿವಾರ ರಾತ್ರಿ 8 ಗಂಟೆ ಸುಮಾರಿಗೆ ಪ್ರತಿಮಾ ಮನೆಗೆ ಬಂದಿದ್ದಾರೆ. ನಿನ್ನೆ ರಾತ್ರಿ ಮತ್ತು ಇಂದು ಬೆಳಿಗ್ಗೆ ಫೋನ್ ಕರೆಗಳಿಗೆ ಸ್ಪಂದಿಸದ ಕಾರಣ ಆಕೆಯ ಅಣ್ಣ ಮನೆಗೆ ಬಂದು ಪರಿಶೀಲಿಸಿದಾಗ ಕೊಲೆ ನಡೆದಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ ಎಂದು ಬೆಂಗಳೂರು ನಗರದ ದಕ್ಷಿಣ ವಿಭಾಗದ ಡಿಸಿಪಿ ರಾಹುಲ್ ಕುಮಾರ್ ಶಹಾಪುರವಾಡ್ ತಿಳಿಸಿದರು.
ಫೊರೆನ್ಸಿಕ್ ಮತ್ತು ತಾಂತ್ರಿಕ ತಂಡಗಳು ಸ್ಥಳದಲ್ಲಿ ಕಾರ್ಯನಿರ್ವಹಿಸುತ್ತಿವೆ. ತನಿಖೆಗಾಗಿ ಮೂರು ತಂಡಗಳನ್ನು ರಚಿಸಲಾಗಿದೆ. ಏನಾಯಿತು ಎಂಬುದನ್ನು ನಿಖರವಾಗಿ ತಿಳಿದ ನಂತರ ನಾವು ಹೆಚ್ಚಿನ ಮಾಹಿತಿಯನ್ನು ನೀಡುತ್ತೇವೆ ಎಂದು ಅವರು ಹೇಳಿದರು.
ಪ್ರತಿಮಾ ಅವರು ಕಳೆದ ನಾಲ್ಕು ವರ್ಷಗಳಿಂದ ಬೆಂಗಳೂರು ನಗರದಲ್ಲಿ ಕೆಲಸ ಮಾಡುತ್ತಿದ್ದು, ಕಳೆದ ನಾಲ್ಕೈದು ವರ್ಷಗಳಿಂದ ಒಂದೇ ಮನೆಯಲ್ಲಿ ವಾಸಿಸುತ್ತಿದ್ದರು ಎಂದು ಅವರು ತಿಳಿಸಿದರು.
“ಕತ್ತು ಹಿಸುಕಿ ಮತ್ತು ಕುತ್ತಿಗೆ ಸೀಳಿ ಸಾವು ಸಂಭವಿಸಿದೆ” ಎಂದು ಅವರು ಹೇಳಿದರು. ಪ್ರಾಥಮಿಕ ತನಿಖೆಯಲ್ಲಿ ಯಾವುದೇ ಆಭರಣ ಅಥವಾ ಬೆಲೆಬಾಳುವ ವಸ್ತುಗಳನ್ನು ಕಳ್ಳತನವಾಗಿಲ್ಲ ಎಂದು ಹೇಳಿದರು.
ಘಟನೆ ಕುರಿತು ಮೈಸೂರಿನಲ್ಲಿ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೊಲೆಯ ಬಗ್ಗೆ ತನಿಖೆ ನಡೆಸಲಾಗುವುದು ಮತ್ತು ಕಾರಣ ಇನ್ನೂ ತಿಳಿದುಬಂದಿಲ್ಲ.ನನಗೆ ಅದರ ಬಗ್ಗೆ ಈಗಷ್ಟೇ ತಿಳಿಯಿತು. ನಾವು ಅದನ್ನು ವಿಚಾರಿಸುತ್ತೇವೆ ಅವರು ಹೇಳಿದರು.
ಮೂಲಗಳ ಪ್ರಕಾರ, ಆಕೆಯ ಪತಿ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯಲ್ಲಿ ವಾಸಿಸುತ್ತಿದ್ದರು ಎಂದು ತಿಳಿದಿದೆ.