ಚಿತ್ರದುರ್ಗ. ಅ.04: ಚಿತ್ರದುರ್ಗ ನಗರಸಭೆಯ ವ್ಯಾಪ್ತಿಯಲ್ಲಿ ಇರುವ ಖಾಲಿ ನಿವೇಶನಗಳಿಗೆ ಫೆನ್ಸಿಂಗ್ ನಿರ್ಮಿಸಿಕೊಂಡು, ಸ್ವಚ್ಛವಾಗಿರಿಸಿಕೊಳ್ಳಬೇಕು ಎಂದು ನಗರಸಭೆ ಪೌರಾಯುಕ್ತರು ಸೂಚನೆ ನೀಡಿದ್ದಾರೆ.
ನಗರ ವ್ಯಾಪ್ತಿಯಲ್ಲಿನ ಖಾಲಿ ನಿವೇಶನಗಳಲ್ಲಿ ಪಾರ್ಥೇನಿಯಂ, ಜಾಲಿ ಗಿಡ ಬೆಳೆದಿದ್ದು ಹಾಗೂ ಅಕ್ಕ-ಪಕ್ಕದ ಮನೆಗಳಿಂದ ಉತ್ವತ್ತಿಯಾಗುವ ತ್ಯಾಜ್ಯ(ಕಸ)ವನ್ನು ಖಾಲಿ ಇರುವ ನಿವೇಶನದಲ್ಲಿ ಸುರಿಯುತ್ತಿದ್ದು, ಅಲ್ಲಿ ಕಸ ಸಂಗ್ರಹವಾಗುತ್ತಿರುವುದು ಕಂಡುಬಂದಿದೆ, ಅಲ್ಲದೆ ಖಾಲಿ ಜಾಗಗಳು ಬಿಡಾಡಿ ದನಗಳು, ಹಂದಿಗಳು, ನಾಯಿಗಳು ಇತರೆ ವಿಷಜಂತುಗಳ ವಾಸಸ್ಥಾನವಾಗುತ್ತಿರುವುದು ಕಂಡುಬರುತ್ತಿದೆ.
ಖಾಲಿ ನಿವೇಶನಗಳಲ್ಲಿ ಮಳೆನೀರು ನಿಂತು ಸೊಳ್ಳೆಗಳು ಉತ್ವತ್ತಿಯಾಗಿ ಮಲೇರಿಯಾ, ಡೆಂಗ್ಯೂ, ಚಿಕನ್‍ಗುನ್ಯ ಸೇರಿದಂತೆ ಇನ್ನಿತರೆ ಸಾಂಕ್ರಾಮಿಕ ರೋಗಗಳು ಹರಡುವ ಸಾಧ್ಯತೆ ಇರುತ್ತದೆ, ಅಲ್ಲದೆ ಇದು ನಗರದ ಸೌಂದರ್ಯಕ್ಕೂ ಸಹ ಧಕ್ಕೆ ಉಂಟಾಗುತ್ತಿದೆ.
ಹೀಗಾಗಿ ಸಾರ್ವಜನಿಕರು ತಮ್ಮ ಖಾಲಿ ನಿವೇಶನಗಳಲ್ಲಿ ಇರುವಂತಹ ತ್ಯಾಜ್ಯವನ್ನು, ಗಿಡ ಗಂಟೆಗಳನ್ನು ತೆರವುಗೊಳಿಸಿ ಸ್ವಚ್ಛಗೊಳಿಸಬೇಕು. ಖಾಲಿ ನಿವೇಶನಕ್ಕೆ ಕಾಂಪೌಂಡ್, ಫೆನ್ಷಿಂಗ್ ನಿರ್ಮಿಸಿಕೊಳ್ಳಬೇಕು ತಪ್ಪಿದ್ದಲ್ಲಿ ಅಂತಹವರ ವಿರುದ್ಧ ಕರ್ನಾಟಕ ಸಾಂಕ್ರಾಮಿಕ ರೋಗಗಳ ನಿಯಂತ್ರಣ ಕಾಯ್ದೆ 2020ರ ಅನ್ವಯ ಕಾನೂನು ಕ್ರಮ ಜರುಗಿಸಲಾಗುವುದು.
ಹೆಚ್ಚಿನ ಮಾಹಿತಿಗಾಗಿ ಆರೋಗ್ಯ ಶಾಖೆ ಸಂಪರ್ಕಿಸಬಹುದಾಗಿದೆ ಎಂದು ನಗರಸಭೆ ಪೌರಾಯುಕ್ತೆ ರೇಣುಕಾ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.