ಚಿತ್ರದುರ್ಗ,(ಮೇ. 29) : ಮಹಾರಾಷ್ಟ್ರ ರಾಜ್ಯದ ಸಾಂಗ್ಲಿ ಜಿಲ್ಲೆಯ ಜತ್ ತಾಲೂಕಿನ ಸಂಖ ಎಂಬ ಗ್ರಾಮದಲ್ಲಿ ಶ್ರೀ ಶಿವಲಿಂಗೇಶ್ವರ ಶಿಕ್ಷಣ ಸಂಸ್ಥೆಯಡಿ ನಡೆಯುತ್ತಿರುವ ಕಿರಿಯ ಮಹಾ ವಿದ್ಯಾಲಯದಲ್ಲಿ ಪಿಯುಸಿ ವಿಜ್ಞಾನವನ್ನು ಕನ್ನಡ ಮಾಧ್ಯಮದಲ್ಲಿ ಬೋಧಿಸಲಾಗುತ್ತಿದೆ.
ಅಲ್ಲಿನ ವಿದ್ಯಾರ್ಥಿಗಳಿಗೆ ತುಂಬಾ ಅವಶ್ಯಕವಾಗಿರುವ ಪಿಯುಸಿ ವಿಜ್ಞಾನ ಕನ್ನಡ ಮಾಧ್ಯಮ ಪಠ್ಯಪುಸ್ತಕಗಳನ್ನು ಪೂರೈಸಬೇಕು ಹಾಗೂ ರಾಜ್ಯದಲ್ಲಿ ಪಿ.ಯು.ಸಿ. ವಿಜ್ಞಾನ ಕನ್ನಡ ಮಾಧ್ಯಮ ಅನುಷ್ಠಾನಗೊಳಿಸಲು ಕ್ರಮ ಕೈಗೊಳ್ಳಬೇಕೆಂದು ನಿನ್ನೆ ಚಿತ್ರದುರ್ಗಕ್ಕೆ ಆಗಮಿಸಿದ್ದ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್. ನಾಗಾಭರಣ ಅವರಿಗೆ ಅನ್ನದ ಭಾಷೆ ಕನ್ನಡ ವೇದಿಕೆ ವತಿಯಿಂದ ಮನವಿ ಸಲ್ಲಿಸಲಾಯಿತು.
ಸಂಖ ಗ್ರಾಮದಲ್ಲಿ ನಡೆಯುತ್ತಿರುವ ಪದವಿ ಪೂರ್ವ ಕಾಲೇಜಿನಲ್ಲಿ ಕನ್ನಡ ಮಾಧ್ಯಮದಲ್ಲಿ ಪಿ.ಯು.ಸಿ. ವಿಜ್ಞಾನ ಶಿಕ್ಷಣ ಪಡೆದ 10ಕ್ಕೂ ಹೆಚ್ಚು ವಿದ್ಯಾರ್ಥಿಗಳು ವೈದ್ಯಕೀಯಕ್ಕೂ, 20ಕ್ಕೂ ಹೆಚ್ಚು ವಿದ್ಯಾರ್ಥಿಗಳು ಇಂಜಿನಿಯರಿಂಗ್ ವ್ಯಾಸಂಗಕ್ಕೂ ಪ್ರತಿ ವರ್ಷ ತೆರಳುತ್ತಾರೆ.
ಮಹಾರಾಷ್ಟ್ರ ರಾಜ್ಯದ ಈ ಗ್ರಾಮದಲ್ಲಿರುವ ಈ ವಿದ್ಯಾಲಯದಲ್ಲಿ ಪಿ.ಯು.ಸಿ. ವಿಜ್ಞಾನ ಶಿಕ್ಷಣವನ್ನು ಕನ್ನಡ ಮಾಧ್ಯಮದಲ್ಲಿ ಭೋಧಿಸಿದಂತೆ ನಮ್ಮ ರಾಜ್ಯದಲ್ಲೂ ಕನ್ನಡ ಮಾಧ್ಯಮದಲ್ಲಿ ವಿಜ್ಞಾನ ಶಿಕ್ಷಣ ಆರಂಭಿಸಿದರೆ ನಮ್ಮ ರಾಜ್ಯದ ಕನ್ನಡ ವಿದ್ಯಾರ್ಥಿಗಳಿಗೆ ಅದರಲ್ಲೂ ಗ್ರಾಮಾಂತರ ಪ್ರದೇಶದಿಂದ ಕನ್ನಡ ಮಾಧ್ಯಮದಲ್ಲಿ ವ್ಯಾಸಂಗ ಮಾಡಿ ಬರುವಂತ ವಿದ್ಯಾರ್ಥಿಗಳಿಗೆ ಅನುಕೂಲವಾಗುತ್ತದೆ.
ಈ ನಿಟ್ಟಿನಲ್ಲಿ ಚಿತ್ರದುರ್ಗದಿಂದ ಸಂಖ ಗ್ರಾಮಕ್ಕೆ ನಾಲ್ಕು ಜನರ ಅಧ್ಯಯನ ತಂಡ ಹೋಗಿ ಅಧ್ಯಯನ ಮಾಡಿಕೊಂಡು ಬರಲಾಗಿದೆ. ಈ ನಿಟ್ಟಿನಲ್ಲಿ ರಾಜ್ಯದ ಪ್ರತಿ ತಾಲೂಕಿನಲ್ಲೂ ಆರಂಭಿಕವಾಗಿ ಪಿಯುಸಿ ವಿಜ್ಞಾನ ಕನ್ನಡ ಮಾಧ್ಯಮದಲ್ಲಿ ಭೋಧನೆ ಆರಂಭಿಸಲು ನೀವೂ ಸಹಾ ಶ್ರಮಿಸಬೇಕೆಂದು ಮನವಿಯಲ್ಲಿ ಆಗ್ರಹಿಸಲಾಗಿದೆ.
ಅಲ್ಲಿನ ಪಿ.ಯು.ಸಿ. ವಿದ್ಯಾರ್ಥಿಗಳಿಗೆ ತುಂಬಾ ಅಗತ್ಯವಿರುವ ವಿಜ್ಞಾನ ಕನ್ನಡ ಮಾಧ್ಯಮದ ಪಠ್ಯ ಪುಸ್ತಕಗಳನ್ನು ಕಾಲೇಜಿನ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ತಮ್ಮ ಪ್ರಾಧಿಕಾರದಿಂದ ಪಿ.ಯು.ಸಿ. ಕನ್ನಡ ಮಾಧ್ಯಮ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ 200 ಸೆಟ್ ಕನ್ನಡ ಪಠ್ಯ ಪುಸ್ತಕಗಳನ್ನು ಮಂಜೂರು ಮಾಡಿಸಿಕೊಡಬೇಕು ಎಂದು ಮನವಿಯಲ್ಲಿ ಕೋರಲಾಗಿದೆ.
ಈ ಸಂದರ್ಭದಲ್ಲಿ ಅನ್ನದ ಭಾಷೆ ಕನ್ನಡ ವೇದಿಕೆಯ ಸಂಚಾಲಕರೂ ಹಾಗೂ ಅಧ್ಯಯನ ತಂಡದ ಸದಸ್ಯರಾದ ಜೆ. ಯಾದವರೆಡ್ಡಿ, ಡಾ. ಸಂಗೇನಹಳ್ಳಿ ಅಶೋಕ್‍ಕುಮಾರ್, ಚಿಕ್ಕಪ್ಪನಹಳ್ಳಿ ಷಣ್ಮುಖ ಉಪಸ್ಥಿತರಿದ್ದರು.