ಚಿತ್ರದುರ್ಗ, ಸುದ್ದಿಒನ್, (ಸೆ.14) : ವಿಶ್ವಹಿಂದು ಪರಿಷತ್ ಮತ್ತು ಬಜರಂಗದಳದ ವತಿಯಿಂದ ನಗರದಲ್ಲಿ ಪ್ರತಿಷ್ಠಾಪಿಸಲಾಗಿರುವ ರಾಜ್ಯದಲ್ಲಿಯೇ ಪ್ರಖ್ಯಾತಿ ಪಡೆದಿರುವ ಚಿತ್ರದುರ್ಗದ ಹಿಂದೂ ಮಹಾಗಣಪತಿ(Hindu Maha Ganapathi 2022) ವಿಸರ್ಜನಾ ಮೆರವಣಿಗೆ ಹಾಗೂ ಶೋಭಾಯಾತ್ರೆ ಸೆ. 17 ರಂದು ಅದ್ದೂರಿಯಾಗಿ ನಡೆಯಲಿದ್ದು, ಜಿಲ್ಲಾಡಳಿತ ಸಕಲ ಸಿದ್ದತೆ ಮಾಡಿಕೊಂಡಿದೆ. ಈ ಹಿನ್ನೆಲೆಯಲ್ಲಿ ನಗರದಲ್ಲಿ ಅಂದು ವಾಹನಗಳು ಬದಲಿ ಮಾರ್ಗದಲ್ಲಿ ಸಂಚರಿಸುವಂತೆ ಸೂಚಿಸಿ ಜಿಲ್ಲಾಧಿಕಾರಿ ಆದೇಶಿಸಿದ್ದಾರೆ.
ಹಿಂದೂ ಮಹಾ ಗಣಪತಿಯ ವಿಸರ್ಜನಾ ಮೆರವಣಿಗೆಯು ನಗರದ ಬಿ.ಡಿ. ರಸ್ತೆಯಲ್ಲಿ ಸಂಚರಿಸಿ, ಹೊಳಲ್ಕೆರೆ ರಸ್ತೆಯ ಮುಖಾಂತರ ಚಂದ್ರವಳ್ಳಿ ಬಳಿಯ ವಿಸರ್ಜನಾ ಸ್ಥಳವನ್ನು ತಲುಪುತ್ತದೆ.
ಗಣಪತಿ ವಿಗ್ರಹದ ವಿಸರ್ಜನಾ ಮೆರವಣಿಗೆಯಲ್ಲಿ ಸುಮಾರು ಒಂದು ಲಕ್ಷಕ್ಕಿಂತ ಅಧಿಕ ಜನರು ಭಾಗವಹಿಸುವ ನಿರೀಕ್ಷೆಯಿದ್ದು, ಸಂಚಾರ ಸುವ್ಯವಸ್ಥೆಯನ್ನು ಕಾಯ್ದುಕೊಂಡು ಹೋಗುವ ಸಲುವಾಗಿ ಚಿತ್ರದುರ್ಗದೊಳಗೆ ಪ್ರವೇಶಿಸುವ ವಾಹನಗಳು ಈ ಕೆಳಕಂಡಂತೆ ಬದಲಿ ಮಾರ್ಗದಲ್ಲಿ ಸಂಚರಿಸುವಂತೆ ತಿಳಿಸಲಾಗಿದೆ.
1. ಬೆಂಗಳೂರು ಹಾಗೂ ಚಳ್ಳಕೆರೆ ಮತ್ತು ಹೊಸಪೇಟೆ ಮಾರ್ಗದಿಂದ ಬರುವ ವಾಹನಗಳು ರಾ.ಹೆ.4ರ ಬೈಪಾಸ್ ರಸ್ತೆ ಮುಖಾಂತರ ಬಂದು ಮೆದೇಹಳ್ಳಿ ರಸ್ತೆ ಮತ್ತು ಎ.ಪಿ.ಎಂ.ಸಿ. ಮಾರುಕಟ್ಟೆ ಮುಖಾಂತರ ಬಸ್ ನಿಲ್ದಾಣಗಳಿಗೆ ಬಂದು ಪುನಃ ಅದೇ ಮಾರ್ಗದಲ್ಲಿ ಹೊರಹೋಗುವುದು.
2. ದಾವಣಗೆರೆ ಮಾರ್ಗದಿಂದ ಬರುವ ವಾಹನಗಳು ಜೆ.ಎಂ.ಐ.ಟಿ, ವೃತ್ತದ ಮುಖಾಂತರವಾಗಿ ಬಂದು ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣಕ್ಕೆ ಬಂದು ಪುನಃ ವಾಪಾಸು ಅದೇ ಮಾರ್ಗದಲ್ಲಿ ಸಂಚರಿಸುವುದು.
3. ಶಿವಮೊಗ್ಗ, ಹೊಳಲ್ಕೆರೆ, ಭೀಮಸಮುದ್ರ ಮಾರ್ಗದಿಂದ ಬರುವ ವಾಹನಗಳು ರಾ.ಹೆ.13ರ ಬೈಪಾಸ್‌ನಲ್ಲಿ ಮುರುಘಾ ಮಠದವರೆಗೆ ಹೋಗಿ ನಂತರ ರಾ.ಹೆ.4ರ ಬೈಪಾಸ್ ರಸ್ತೆ ಮುಖಾಂತರ ಕೆ.ಎಸ್.ಆರ್.ಟಿ. ಮತ್ತು ಖಾಸಗಿ ಬಸ್‌ನಿಲ್ದಾಣಕ್ಕೆ ಬಂದು ಪುನಃ ವಾಪಾಸು ಅದೇ ಮಾರ್ಗದಲ್ಲಿ ಸಂಚರಿಸುವುದು.
4. ಹಿಂದೂಮಹಾಗಣಪತಿ ವಿಸರ್ಜನೆಯಲ್ಲಿ ಭಾಗವಹಿಸುವವರು ಚಳ್ಳಕೆರೆ ಸರ್ಕಲ್ ಮೂಲಕ ಮುರುಘಾರಾಜೇಂದ್ರ ಕ್ರೀಡಾಂಗಣ, ಸರ್ಕಾರಿ ಕಲಾ ಮತ್ತು ವಿಜ್ಞಾನ ಕಾಲೇಜ್ ಹಾಗೂ ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜು ಆವರಣದಲ್ಲಿ ತಮ್ಮ ವಾಹನಗಳನ್ನು ಪಾರ್ಕ್ ಮಾಡುವುದು ಎಂದು ಪೊಲೀಸ್ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.