ಚಿತ್ರದುರ್ಗ : ನಗರದ ಹೊರವಲಯ ಕುಂಚಿಗನಹಾಳ್ ಸಮೀಪ ಜಿಲ್ಲಾಧಿಕಾರಿ ಕಚೇರಿ ಕಟ್ಟಡ ನಿರ್ಮಾಣ ಕಾಮಗಾರಿಯಲ್ಲಿ ಅಕ್ರಮ ಕಲ್ಲು ಗಣಿಗಾರಿಕೆ ನಡೆಯುತ್ತಿದೆ. ಈ ಸಂಬಂಧ ತಪ್ಪಿತಸ್ಥರ ವಿರುದ್ದ ಕ್ರಮ ಕೈಗೊಳ್ಳುವಂತೆ ಹೈಕೋರ್ಟ್ ಮೆಟ್ಟಿಲೇರಿದ್ದು, ತಪ್ಪಿತಸ್ಥರು ಯಾರೆ ಆಗಿರಲಿ ಕ್ರಮ ಕೈಗೊಳ್ಳುವಂತೆ ಇದೆ ತಿಂಗಳ 16 ರಂದು ರಾಜ್ಯ ಸರ್ಕಾರದ ಪ್ರಿನ್ಸಿಪಲ್ ಸೆಕ್ರೆಟರಿ ಹಾಗೂ ಜಿಲ್ಲಾಧಿಕಾರಿಗೆ ಆದೇಶಿಸಿದೆ ಎಂದು ಇಂಗಳದಾಳ್ ಗ್ರಾಮ ಪಂಚಾಯಿತಿ ಅಧ್ಯಕ್ಷ ವೆಂಕಟೇಶ್ ನಾಯಕ್ ತಿಳಿಸಿದರು.
ಬೆಂಗಳೂರು ರಸ್ತೆಯಲ್ಲಿರುವ ಕಣಿವೆ ಆಂಜನೇಯಸ್ವಾಮಿ ದೇವಸ್ಥಾನದ ಆವರಣದಲ್ಲಿ ಗುರುವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ಜಿಲ್ಲಾಧಿಕಾರಿ ಕಚೇರಿ ಕಟ್ಟಡ ನಿರ್ಮಾಣ ಕಾಮಗಾರಿಯಲ್ಲಿ ಅಕ್ರಮ ಕಲ್ಲುಗಣಿಗಾರಿಕೆ ನಡೆಯುತ್ತಿರುವುದನ್ನು ವಿರೋಧಿಸಿ ಹೈಕೋರ್ಟ್ಗೆ ಹೋದಾಗ ಸ್ಥಳ ತನಿಖೆ ನಡೆಸಿ ವರದಿ ನೀಡುವಂತೆ ಜಿಲ್ಲಾಧಿಕಾರಿ ಹಾಗೂ ಗಣಿ ಮತ್ತು ಭೂವಿಜ್ಞಾನ ಇಲಾಖೆಗೆ ಸೂಚಿಸಿತು.
ಆದರೆ ತನಿಖೆ ನಡೆಸಿದ ಅಧಿಕಾರಿಗಳು ಇಲ್ಲಿ ಯಾವುದೇ ರೀತಿಯ ಅಕ್ರಮ ಕಲ್ಲುಗಣಿಗಾರಿಕೆ ನಡೆದಿಲ್ಲ ಎಂದು ವರದಿ ನೀಡಿದ್ದರು. ಆದರೆ ಪಿಎನ್‌ಸಿ.ಕಂಪನಿಯವರು ಸರ್ವೆ ನಂ.84 ರಲ್ಲಿಯೂ ನಲವತ್ತು ಎಕರೆ ಸೇರಿದಂತೆ ಒಟ್ಟು ತೊಂಬತ್ತು ಎಕರೆ ಜಾಗದಲ್ಲಿ ಕಲ್ಲುಗಣಿಗಾರಿಕೆ ನಡೆಸುತ್ತಿದ್ದು, ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗೆ ಸಾಗಿಸುತ್ತಿದ್ದಾರೆ.
ಇವರ ಜೊತೆ ಲೋಕೋಪಯೋಗಿ, ಗಣಿ ಮತ್ತು ಭೂವಿಜ್ಞಾನ ಇಲಾಖೆ ಜೊತೆಗೂಡಿ ಪ್ರಕೃತಿದತ್ತವಾಗಿರುವ ಗಿಡ ಮರ, ಕಲ್ಲುಗಳನ್ನು ಸರ್ವ ನಾಶ ಮಾಡುತ್ತಿದ್ದಾರೆ. ತಪ್ಪಿತಸ್ಥರು ಕಂಪನಿಯವರಾಗಲಿ, ಅಧಿಕಾರಿಗಳಾಗಲಿ ಕಾನೂನು ರೀತಿಯ ಕ್ರಮ ಕೈಗೊಳ್ಳುವಂತೆ ಹೈಕೋರ್ಟ್ ಆದೇಶಿಸಿಹೈಕೋರ್ಟ್
ಯುವ ನ್ಯಾಯವಾದಿ ಪ್ರತಾಪ್‌ಜೋಗಿ ಮಾತನಾಡಿ ಜಿಲ್ಲಾಧಿಕಾರಿ ಕಚೇರಿ ಕಟ್ಟಡ ನಿರ್ಮಾಣಕ್ಕಾಗಿ ಸುಮಾರು ಹತ್ತು ಎಕರೆ ಭೂಮಿಯನ್ನು ಸಮತಟ್ಟು ಮಾಡಬೇಕು.
ಇದರ ನೆಪದಲ್ಲಿ 90 ಎಕರೆ ಜಾಗದಲ್ಲಿ ಅಕ್ರಮ ಕಲ್ಲುಗಣಿಗಾರಿಕೆ ನಡೆಯುತ್ತಿದ್ದು, ಸರ್ಕಾರಕ್ಕೆ ತೆರಿಗೆ ವಂಚನೆಯಾಗುತ್ತಿದೆ. ತಪ್ಪಿತಸ್ಥರಿಗೆ ಕಾನೂನು ರೀತಿ ಶಿಕ್ಷೆ ವಿಧಿಸುವಂತೆ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದೆವು.
ಜಿಲ್ಲಾಧಿಕಾರಿ ಹಾಗೂ ಗಣಿ ಮತ್ತು ಭೂವಿಜ್ಞಾನ ಇಲಾಖೆಯವರು ಸರ್ವೆ ನಡೆಸಿ ವರದಿ ಸಲ್ಲಿಸುವಂತೆ ಹೈಕೋರ್ಟ್ ಸೂಚಿಸಿತ್ತು. ಪಿಎನ್‌ಸಿ.ಕಂಪನಿ ಇಲ್ಲಿ ಅಕ್ರಮವಾಗಿ ಕಲ್ಲು ಮಣ್ಣುಗಳನ್ನು ತೆಗೆಯುತ್ತಿದ್ದು, ಸುತ್ತಮುತ್ತಲಿನ ಬೆಳೆಗಳು ನಾಶವಾಗುತ್ತಿವೆ. ಇದರಿಂದ ಪರಿಸರ ಹಾಗೂ ರೈತರ ಮೇಲೆ ಕೆಟ್ಟ ಪರಿಣಾಮ ಬೀರುತ್ತಿದೆ.
ಬೆಂಗಳೂರು, ಮೈಸೂರು, ಬಳ್ಳಾರಿ ಹಾಗೂ ಚಿತ್ರದುರ್ಗ ವಿಭಾಗದವರು ಸೇರಿ ಜಂಟಿ ಪರಿಶೀಲನೆ ನಡೆಸಿದಾಗ ಅಕ್ರಮ ನಡೆಯುತ್ತಿರುವುದು ಸಾಬೀತಾಗಿದೆ. ಹಾಗಾಗಿ ಪಿಎನ್‌ಸಿ.ಕಂಪನಿ ಮತ್ತು ತಪ್ಪಿತಸ್ಥ ಅಧಿಕಾರಿಗಳ ವಿರುದ್ದ ಶಿಸ್ತು ಕ್ರಮಕ್ಕೆ ಹೈಕೋರ್ಟ್ ಸೂಚಿಸಿದೆ ಎಂದು ಹೇಳಿದರು.
ಗ್ರಾಮ ಪಂಚಾಯಿತಿ ಸದಸ್ಯ ಸಿರುವಲ್ಲಪ್ಪ ಮಾತನಾಡಿ ಜಿಲ್ಲಾಧಿಕಾರಿ ಕಚೇರಿ ಕಟ್ಟಡ ನಿರ್ಮಾಣವಾಗುತ್ತಿರುವುದು ನಮಗೂ ಸಂತೋಷ. ಇಲ್ಲಿ ಡಿ.ಸಿ.ಕಚೇರಿ ಆರಂಭವಾದರೆ ಸುತ್ತಮುತ್ತಲಿನ ಗ್ರಾಮಗಳ ಅಭಿವೃದ್ದಿಯಾಗಲಿದೆ. ಆದರೆ ಇಲ್ಲಿ ಅಕ್ರಮ ಕಲ್ಲುಗಣಿಗಾರಿಕೆ ನಡೆಯುತ್ತಿರುವುದು ಯಾವ ನ್ಯಾಯ. ಹತ್ತು ಎಕರೆ ಜಾಗದಲ್ಲಿ ಮಾತ್ರ ಜಿಲ್ಲಾಧಿಕಾರಿ ಕಚೇರಿ ಕಟ್ಟಡ ನಿರ್ಮಾಣಕ್ಕೆ ನೆಲ ಸಮತಟ್ಟು ಮಾಡಬೇಕು. ಇದರ ನೆಪದಲ್ಲಿ ಸುಮಾರು ತೊಂಬತ್ತು ಎಕರೆ ಪ್ರದೇಶದಲ್ಲಿ ಅಕ್ರಮವಾಗಿ ಕಲ್ಲುಗಣಿಗಾರಿಕೆ ನಡೆಯುತ್ತಿರುವುದಕ್ಕೆ ನಮ್ಮ ವಿರೋಧವಿದೆ. ತಪ್ಪಿತಸ್ಥರು ಯಾರೇ ಆಗಲಿ ಅವರ ಮೇಲೆ ಕಾನೂನು ರೀತಿಯ ಕ್ರಮ ಕೈಗೊಳ್ಳುವತನಕ ನಮ್ಮ ಹೋರಾಟ ನಿಲ್ಲುವುದಿಲ್ಲ ಎಂದು ಎಚ್ಚರಿಸಿದರು.
ಸತೀಶ್ ಹೆಚ್, ಲಕ್ಷ್ಮೀಕಾಂತ್ ಎಸ್, ಬಸವರಾಜು ಎಂ, ನಾಗರಾಜ್, ಡಿ.ಎಸ್.ಹಳ್ಳಿ ಜಿಲ್ಲಾ ಪಂಚಾಯಿತಿ ಸ್ಪರ್ಧಾಕಾಂಕ್ಷಿ ತಮ್ಮಣ್ಣ, ನ್ಯಾಯವಾದಿಗಳಾದ ಸೌಮ್ಯಶ್ರೀನಿವಾಸ್ ಜೋಗಿ, ಫೈಜಾನ್, ಗುರು, ಅಜಯ್ ಪತ್ರಿಕಾಗೋಷ್ಟಿಯಲ್ಲಿ ಹಾಜರಿದ್ದರು.