ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್
ಮೊ : 78998 64552
ಸುದ್ದಿಒನ್, ಚಿತ್ರದುರ್ಗ,(ಮೇ.25) : ಬಿಜೆಪಿ ಸರ್ಕಾರದಲ್ಲಿ ಆಗಿರುವ ಅಭಿವೃದ್ದಿ ಕಾಮಗಾರಿಗಳನ್ನು ಈಗಿನ ನೂತನ ಕಾಂಗ್ರೆಸ್ ಸರ್ಕಾರ ತಡೆಹಿಡಿಯುವುದಾಗಲಿ, ಹಿನ್ನೆಡೆಯುಂಟು ಮಾಡುವುದಾಗಲಿ ಮಾಡಿದರೆ ರಾಜ್ಯಾದ್ಯಂತ ಹೋರಾಟ ಮಾಡುತ್ತೇವೆಂದು ವಿಧಾನಪರಿಷತ್ ಸದಸ್ಯ ಬಿಜೆಪಿ ರಾಜ್ಯ ಕಾರ್ಯದರ್ಶಿ ಕೆ.ಎಸ್.ನವೀನ್ ಎಚ್ಚರಿಸಿದರು.
ಬಿಜೆಪಿ ಕಾರ್ಯಾಲಯದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ರಾಜ್ಯದಲ್ಲಿ ಐದು ವರ್ಷಗಳ ಕಾಲ ಅಧಿಕಾರ ನಡೆಸಿದ ಬಿಜೆಪಿ ಸರ್ಕಾರದಲ್ಲಿ ಆಗಿರುವ ಎಲ್ಲಾ ಕೆಲಸಗಳು ಪೂರ್ಣಗೊಳ್ಳಲು ಬಿಟ್ಟರೆ ಸಾಕು. ವಿಧಾನಸಭೆ ಚುನಾವಣೆ ಪೂರ್ವದಲ್ಲಿ ಕಾಂಗ್ರೆಸ್ ಘೋಷಿಸಿದ ಐದು ಗ್ಯಾರೆಂಟಿಗಳಿಗೆ ಜನ ಮನಸೋತು ಬಹುಮತ ನೀಡಿದ್ದಾರೆ.
ಬಿಟ್ಟಿ ಭಾಗ್ಯಗಳ ಸರದಾರ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಜನರನ್ನು ಹಳ್ಳ ಹಿಡಿಸುವ ಗ್ಯಾರೆಂಟಿ ಕಾರ್ಡ್‍ಗಳ ಮೂಲಕ ರಾಜ್ಯದ ಆರುವರೆ ಕೋಟಿ ಜನರಿಗೆ ಮಹಾದ್ರೋಹ ಎಸಗಿದ್ದಾರೆಂದು ಕಿಡಿ ಕಾರಿದರು.
ನೂತನ ಸರ್ಕಾರದಲ್ಲಿ ಮಂತ್ರಿಗಿರಿಗೆ ಬಡಿದಾಡುತ್ತಿರುವುದನ್ನು ನೋಡಿದರೆ ಅಭಿವೃದ್ದಿ ಬಗ್ಗೆ ಕಾಂಗ್ರೆಸ್‍ಗೆ ಕಾಳಜಿಯಲ್ಲ ಎನ್ನುವುದು ಗೊತ್ತಾಗುತ್ತದೆ. ಬಿಜೆಪಿ. ಸರ್ಕಾರದಲ್ಲಾಗಿರುವ ಅಭಿವೃದ್ದಿ ಕಾಮಗಾರಿಗಳನ್ನು ನಿಲ್ಲಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಆದೇಶಿಸಿರುವುದು ಶೋಭೆಯಲ್ಲ.
ಸರ್ಕಾರ ರಚನೆಯಾದ ಕೂಡಲೆ ಪೊಲೀಸ್ ಅಧಿಕಾರಿಗಳ ಸಭೆ ಕರೆದು ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ ಇವರುಗಳು ಧಮ್ಕಿ ಹಾಕಿರುವುದನ್ನು ನೋಡಿದರೆ ಡಿ.ಕೆ.ಶಿವಕುಮಾರ್ ತನ್ನ ಹಿಂದಿನ ಹಾದಿಯನ್ನು ಪ್ರದರ್ಶಿಸಿದಂತಿದೆ. ಜನ ಬಹುಮತ ಕೊಟ್ಟಿದ್ದಾರೆ.
ಸರ್ಕಾರ ನಡೆಸಲಿ. ಅದನ್ನು ಬಿಟ್ಟು ಆರ್.ಎಸ್.ಎಸ್. ಭಜರಂಗದಳದವರ ಮೇಲೆ ಕೇಸು ಹಾಕುತ್ತೇವೆಂದು ಹೇಳಿ ಬಹುಸಂಖ್ಯಾತ ಹಿಂದೂಗಳ ಸದ್ದಡಗಿಸುವ ದಮನ ಮಾಡಲು ಹೊರಟರೆ ಪರಿಣಾಮ ನೆಟ್ಟಗಿರುವುದಿಲ್ಲ. ಬೆದರಿಕೆಗಳಿಗೆ ನಾವುಗಳು ಹೆದರುವವರಲ್ಲ. ಕ್ರಾಂತಿ ಮಾಡಿರುವ ಪಕ್ಷ ನಮ್ಮದು ಎಂದು ನೂತನ ಸರ್ಕಾರಕ್ಕೆ ಮಾತಿನ ಚಾಟಿ ಬೀಸಿದರು.
ಈ ಬಾರಿಯ ಚುನಾವಣೆಯಲ್ಲಿ ಪಕ್ಷಕ್ಕೆ ಹಿನ್ನೆಡೆಯಾಗಲು ಕಾರಣವೇನೆಂದು ತಿಳಿದುಕೊಳ್ಳಲು ಜಿಲ್ಲೆಯ ಆರು ವಿಧಾನಸಭಾ ಕ್ಷೇತ್ರಗಳ ಕಾರ್ಯಕರ್ತರು, ಪದಾಧಿಕಾರಿಗಳು, ಅಭ್ಯರ್ಥಿಗಳ ಸಮ್ಮುಖದಲ್ಲಿ ವಿಶ್ಲೇಷಣಾ ಸಭೆ ಕರೆದು ಮತದಾರರಿಗೆ ಅಭಿನಂಧಿಸಿ ಸೋಲಿಗೆ ಕಾರಣ ಏನು ಎಂದು ತಿಳಿದುಕೊಂಡು ಆತ್ಮಸ್ಥೈರ್ಯ ತುಂಬುವ ಕೆಲಸ ಮಾಡಲಾಗುವುದು.
ಒಟ್ಟಾರೆ ರಾಜ್ಯದಲ್ಲಿ ಪಕ್ಷದ ಸೋಲಿಗೆ ಕಾರಣ ಹುಡುಕುವುದಕ್ಕಾಗಿ ರಾಜ್ಯ ಹಾಗೂ ಕೇಂದ್ರದ ನಾಯಕರುಗಳು ಆತ್ಮಾವಲೋಕನ, ಪರಾಮರ್ಶೆ, ಚರ್ಚೆಯಲ್ಲಿ ತೊಡಗಿದ್ದಾರೆ. ರಾಜ್ಯ ನಾಯಕರುಗಳ ತಂಡ ಜೂನ್ ಮೊದಲ ವಾರದಲ್ಲಿ ಚಿತ್ರದುರ್ಗ ಜಿಲ್ಲೆಗೆ ಆಗಮಿಸಲಿದೆ. ಸೋಲನ್ನು ಸವಾಲಾಗಿ ಸ್ವೀಕರಿಸುವ ಗಟ್ಟಿ ಮನಸ್ಥಿತಿಯುಳ್ಳ ಕಾರ್ಯಕರ್ತರು ನಮ್ಮ ಪಕ್ಷದಲ್ಲಿದ್ದಾರೆ. ಸೋಲಿಗೆ ದೃತಿಗೆಡದೆ ಕಾರಣ ಹುಡುಕಿ ಮುಂದಿನ ನಡೆ ಇರಿಸುವುದಾಗಿ ತಿಳಿಸಿದರು.
ಬಿ.ಎಸ್.ಯಡಿಯೂರಪ್ಪ, ಬಸವರಾಜ್ ಬೊಮ್ಮಾಯಿ ಇವರುಗಳು ರಾಜ್ಯದ ಮುಖ್ಯಮಂತ್ರಿಯಾಗಿದ್ದಾಗ ಒಳ್ಳೊಳ್ಳೆ ಕೆಲಸಗಳನ್ನು ಮಾಡಿದ್ದರೂ ಮತದಾರರ ಮನವೊಲಿಕೆಯಲ್ಲಿ ಪಕ್ಷ ಹಿಂದೆ ಬಿದ್ದಿದೆ. ಮುಂಬರುವ ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ, ಸ್ಥಳೀಯ ಸಂಸ್ಥೆ ಹಾಗೂ ಪಾರ್ಲಿಮೆಂಟ್ ಚುನಾವಣೆಯಲ್ಲಿ ಒಳ್ಳೆಯ ಫಲಿತಾಂಶ ಪಡೆಯುವ ನಿಟ್ಟಿನಲ್ಲಿ ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇವೆ.
ವಿಧಾನಸಭೆ ಚುನಾವಣೆಯಲ್ಲಿ ಗೆದ್ದವರ ಮೇಲೆ ಜವಾಬ್ದಾರಿಯಿದೆ. 2013 ರಿಂದ 2018 ರವರೆಗೆ ರಾಜ್ಯದಲ್ಲಿ ಅಧಿಕಾರದಲ್ಲಿದ್ದಾಗ ಕಾಂಗ್ರೆಸ್ ಜಿಲ್ಲೆಯ ಅಭಿವೃದ್ದಿ ಕಾಮಗಾರಿಗಳನ್ನು ಸ್ಥಗಿತಗೊಳಿಸಿತ್ತು.
ನಂತರ ಬಿಜೆಪಿ. ಅಧಿಕಾರಕ್ಕೆ ಬಂದ ಮೇಲೆ ಭದ್ರಾಮೇಲ್ದಂಡೆ ಯೋಜನೆ, ಮೆಡಿಕಲ್ ಕಾಲೇಜು, ತುಮಕೂರು-ಚಿತ್ರದುರ್ಗ-ದಾವಣಗೆರೆ ನೇರ ರೈಲು ಮಾರ್ಗ ಯೋಜನೆಯನ್ನು ಜಾರಿಗೆ ತಂದಿತು. ನೂತನ ಕಾಂಗ್ರೆಸ್ ಸರ್ಕಾರ ಗ್ಯಾರೆಂಟಿಗಳ ಗೊಂದಲದಲ್ಲಿ ಜಿಲ್ಲೆಯ ಜನರ ಬೇಡಿಕೆಗಳನ್ನು ನಿರ್ಲಕ್ಷಿಸಬಾರದು. ಇಂಡಿಯನ್ ಮೆಡಿಕಲ್ ಕೌನ್ಸಿಲ್‍ನಿಂದ ಬರಬೇಕಾದರೆ ಅನುಮತಿ ಪತ್ರ ಬಂದಿದೆ.
ಕೇಂದ್ರೀಯ ವಿದ್ಯಾಲಯದ ಅನುಮತಿ ಪತ್ರ ಕೇಂದ್ರ ಸರ್ಕಾರದ ಮುಂದಿದೆ. ಮತ್ತೆ ಪುಟಿದೇಳುವ ಪ್ರಯತ್ನ ಮಾಡುತ್ತೇವೆಂದು ಕೆ.ಎಸ್.ನವೀನ್ ಹೇಳಿದರು.
ಬಿಜೆಪಿ.ಜಿಲ್ಲಾಧ್ಯಕ್ಷ ಎ.ಮುರಳಿ, ಪ್ರಧಾನ ಕಾರ್ಯದರ್ಶಿಗಳಾದ ನರೇಂದ್ರ ಹೊನ್ನಾಳ್, ರಾಜೇಶ್ ಬುರುಡೆಕಟ್ಟೆ, ಉಪಾಧ್ಯಕ್ಷ ಸಂಪತ್, ವಕ್ತಾರ ನಾಗರಾಜ್‍ಬೇದ್ರೆ, ಮಾಧ್ಯಮ ವಕ್ತಾರ ದಗ್ಗೆಶಿವಪ್ರಕಾಶ್ ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.