ಮಂಗಳೂರು: ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಪ್ರಮೋದ್ ಮುತಾಲಿಕ್ ಸ್ಪರ್ಧೆ ಮಾಡುವುದು ಖಚಿತ ಎನ್ನುವುದು ಈಗಾಗಲೇ ಗೊತ್ತಾಗಿದೆ. ಆದರೆ ಯಾವ ಕ್ಷೇತ್ರದಿಂದ ಅನ್ನೋದು ಇನ್ನು ಕನ್ಫರ್ಮ್ ಆಗಿರಲಿಲ್ಲ. ಇದೀಗ ಕಾರ್ಕಳ ಕ್ಷೇತ್ರದ ಶಾಸಕ ಸುನಿಲ್ ಕುಮಾರ್ ಅವರ ಕ್ಷೇತ್ರದ ಮೇಲೆ ಮುತಾಲಿಕ್ ಕಣ್ಣಾಕಿದ್ದು, ಆ ಕ್ಷೇತ್ರವನ್ನು ಬಿಟ್ಟುಕೊಡುವಂತೆ ಸೂಚಿಸಿದ್ದಾರೆ.
ಹಿಂದುತ್ವದ ವಿಚಾರವಾಗಿ ಮಾತನಾಡಿದ ಪ್ರಮೋದ್ ಮುತಾಲಿಕ್, ಬೆಳೆಸಿದ ಗುರುಗಳು ಬಂದಿದ್ದಾರೆಂದು ಕ್ಷೇತ್ರವನ್ನು ತ್ಯಾಗ ಮಾಡಿ. ನೀವೂ ಬೇರೆ ಕಡೆ ಎಲ್ಲಾದರೂ ಸ್ಪರ್ಧಿಸಿ. ನಿಮ್ಮಲ್ಲಿ ನಿಜವಾದ ಹಿಂದುತ್ವ, ಆರ್ ಎಸ್ ಎಸ್ ಇದ್ದರೆ ಈ ಕ್ಷೇತ್ರವನ್ನು ನನಗೆ ತ್ಯಾಗ ಮಾಡಿ ಎಂದು ಬಹಿರಂಗವಾಗಿಯೇ ಆಗ್ರಹಿಸಿದ್ದಾರೆ.
ಹಿಂದುತ್ವದ ವಿಚಾರದಲ್ಲಿ ಮುತಾಲಿಕ್ ಹಿಂದುತ್ವ ಹಾಗೂ ನಿಮ್ಮ ಹಿಂದುತ್ವವನ್ನು ಒಂದೇ ತಕ್ಕಡಿಯಲ್ಲಿ ಹಾಕಿ ತೂಗಿ. ಯಾರು ಹಿಂದುತ್ವಕ್ಕಾಗಿ ಇದ್ದಾರೆ ಎಂಬುದನ್ನು ಜನರೇ ತೀರ್ಮಾನ ಮಾಡುತ್ತಾರೆ. ಕ್ಷೇತ್ರವನ್ನು ನನಗೆ ಬಿಟ್ಟುಕೊಡಿ ಹಿಂದುತ್ವ ಎಂದರೆ ಏನು ಎಂದು ನಾನು ತೋರಿಸುತ್ತೇನೆ. ಈಗ ಕ್ಷೇತ್ರ ಬಿಟ್ಟುಕೊಟ್ಟರೆ ಐದು ವರ್ಷದ ಬಳಿಕ ಇದೇ ಕ್ಷೇತ್ರದಲ್ಲಿ ನಿಮ್ಮನ್ನು ನಿಲ್ಲಿಸುತ್ತೇನೆ ಎಂದಿದ್ದಾರೆ.
ಈಗ ನೀವೆಲ್ಲಾ ಗಳಿಸಿದ್ದು ಸಾಕು. ತಾತಾ, ಮುತ್ತಾತನ ಕಾಲದಿಂದಾನು ಗಳಿಸಿದ್ದು ಸಾಕು. ತಲವಾರು ಹಿಡಿದುಕೊಂಡು ಬಂದವನ ಮುಂದೆ ಹೋರಾಟ ಮಾಡಿದವನು ನಾನು. ಭಯಾನಕವಾದ ತುರ್ತು ಪರಿಸ್ಥಿತಿಯಲ್ಲಿ ಹೋರಾಟ ಮಾಡಿದವನು ನಾನು. ಫೋನ್ ಮಾಡಿ ಭಯ ಪಡಿಸುವ ಚಿಲ್ಲರೆ ಕೆಲಸ ನನ್ನ ಬಳಿ ಇಟ್ಟುಕೊಳ್ಳಬೇಡಿ ಎಂದು ನೇರವಾಗಿಯೇ ಆಕ್ರೋಶ ಹೊರ ಹಾಕಿದ್ದಾರೆ.