ಚಾಮರಾಜನಗರ: ರೈತರ ವಿಚಾರವಾಗಿ, ಅವರ ಭೂಮಿ ವಿಚಾರವಾಗಿ ಸಚಿವ ವಿ ಸೋಮಣ್ಣ ಅಧಿಕಾರಿಗೆ ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ. ಸಂಪೂರ್ಣ ಮಾಹಿತಿ ನೀಡದೆ ಹೋದರೆ ಇಲ್ಲೆ ರೂಮಿನೊಳಗೆ ಕೂಡಿ ಹಾಕಿ, ಬೀಗ ಹಾಕಿ ಹೋಗುತ್ತೀನಿ ಎಂದು ಎಚ್ಚರಿಕೆ ನೀಡಿದ್ದಾರೆ.
ಜಿಲ್ಲೆಯ ಸಭಾಂಗಣದಲ್ಲಿ ರೈತರಿಗೆ ಸಂಬಂಧಿಸಿದ ವಿಷಯಗಳು ಹಾಗೂ ಕೆರೆಗಳಿಗೆ ನೀರು ತುಂಬಿಸುವ ವಿಚಾರದ ಬಗ್ಗೆ ಚರ್ಚೆ ನಡೆಯಿತು. ಸಂಬಂಧ ಪಟ್ಟ ಅಧಿಕಾರಿಗಳೊಂದಿಗೆ ಸುಮಾರು ಮೂರು ಗಂಟೆಗಳ ಕಾಲ ಸಭೆ ನಡೆಸಲಾಗಿತ್ತು. ಈ ವೇಳೆ ರೈತರು ಕೂಡ ತಮ್ಮ ಕಷ್ಟಗಳನ್ನು ಹೇಳಿಕೊಂಡರು. ರೈತರ ಸಮಸ್ಯೆ ಕೇಳಿದ ಸಚಿವ ಸೋಮಣ್ಣ, ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ರೈತರ ಭೂಮಿ, ರಸ್ತೆಗಳು ಈ ಅಕ್ರಮ ಗಣಿಗಾರಿಕೆಯಿಂದ ಹಾಳಾಗುತ್ತಿದೆ. ಸ್ಥಗಿತಗೊಂಡ ಗಣಿಗಳಲ್ಲೂ ಗಣಿಗಾರಿಕೆ ನಡೆಯುತ್ತಿದೆ. ಇದಕ್ಕೆ ಅಧಿಕಾರಿಗಳು ಯಾರು ಸ್ಪಂದಿಸುತ್ತಿಲ್ಲ ಎಂದು ರೈತರು ತಮ್ಮ ಸ್ಥಳೀಯವಾದ ಸಮಸ್ಯೆಗಳನ್ನು ಸಚಿವರ ಮುಂದೆ ತೋಡಿಕೊಂಡಿದ್ದಾರೆ.
ಈ ವೇಳೆ ಸಚಿವ ಸೋಮಣ್ಣ ಗಣಿ ಮತ್ತು ಭೂವಿಜ್ಞಾನ ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ನನಗೆ ಗೊತ್ತಿದೆ. ಈತ ಬಹಳ ಖತರ್ನಾಕ್. ಕೋರ್ಟ್ ನಲ್ಲಿ ಸ್ಟೇ ತಂದು ನೀವೆ ಗಣಿಗಾರಿಕೆ ಆರಂಭಿಸಿದ್ದೀರಾ..? ಏಜೆಂಟ್ ರೀತಿ ಕೆಲಸ ಮಾಡುತ್ತೀರಾ..? ಇವತ್ತು ಎಷ್ಟೊತ್ತೇ ಆಗಲಿ. ರೈತರಿಗೆ ಸಂಬಂಧಪಟ್ಟಂತ ಎಲ್ಲಾ ಮಾಹಿತಿ ನೀಡಬೇಕು. ಇಲ್ಲವಾದರೇ ರೂಮಿನಲ್ಲಿ ಕೂಡಿ ಹಾಕಿ ಲಾಕ್ ಮಾಡಿಕೊಂಡು ಹೋಗುತ್ತೇನೆ ಎಂದಿದ್ದಾರೆ.