ಸುದ್ದಿಒನ್, ಚಿತ್ರದುರ್ಗ, ಸೆಪ್ಟೆಂಬರ್. 24 : ಮೀಸಲಾತಿ ಇಲ್ಲದೇ ಹೋಗಿದ್ದರೆ ಯಾರು ಸಹ ಜಾತಿ ಗಣತಿಯ ಬಗ್ಗೆ ಚರ್ಚೆ ನಡೆಸುತ್ತಿರಲಿಲ್ಲ. ನಮ್ಮದು ಜಾತ್ಯತೀತ ರಾಷ್ಟ್ರ. ಜಾತಿ ಗಣತಿಯಿಂದ ಜಾತಿಗಳ ಸಂಘರ್ಷಕ್ಕೆ ಕಾರಣವಾಗುತ್ತದೆ. ಸರ್ಕಾರವು ರಾಜ್ಯದ ಜನರ ಆರ್ಥಿಕ, ಶೈಕ್ಷಣಿಕ, ಔದ್ಯೋಗಿಕ ಸೌಲಭ್ಯಗಳನ್ನು ನೀಡಲು ಗಮನ ಹರಿಸಬೇಕು ಎಂದು ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿಯವರು ಹೇಳಿದರು.
ಸಿರಿಗೆರೆಯಲ್ಲಿ ಬುಧವಾರ ಜರುಗಿದ ಲಿಂ.ಶ್ರೀ ಶಿವಕುಮಾರ ಶಿವಾಚಾರ್ಯ ಸ್ವಾಮೀಜಿಯವರ 34ನೇ ಶ್ರದ್ಧಾಂಜಲಿಯ ಸಮಾರೋಪ ಸಮಾರಂಭದಲ್ಲಿ ದಿವ್ಯಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ತಾತ್ವಿಕ ನೆಲೆಗಟ್ಟಿನಲ್ಲಿ ಬಸವಪಂಥಿಯವರು ಮೀಸಲಾತಿ ಕೇಳಬಾರದು. ಸಾಮಾಜಿಕವಾಗಿ ಕೆಳಸ್ತರವಾಗಿರುವವರಿಗೆ ಮೀಸಲಾತಿ ಸಿಗಲಿ. ಸರ್ಕಾರ ಜಾತಿಗಳ ವರ್ಗಿಕರಣ ಮಾಡದೇ ಬಡತನದ ಮೇಲೆ ವರ್ಗೀಕರಣ ಮಾಡಿಲಿ. ಸಾಮಾಜಿಕವಾಗಿ ಜಾತಿ ಗಣತಿಯಿಂದ ಯಾವುದೇ ಉಪಯೋಗವಿಲ್ಲ. ಸರ್ಕಾರವು ಬಸವಣ್ಣನವರ ಭಾವಚಿತ್ರದ ಜೊತೆಗೆ ವಚನ ಸಾಹಿತ್ಯ ತತ್ವಗಳನ್ನು ಜಾತಿಗಣತಿಯಲ್ಲಿ ಅಳವಡಿಸಿಕೊಳ್ಳಬೇಕು. ಗ್ಯಾರಂಟಿಯೋಜನೆಗಳಲ್ಲಿ ಜಾತಿ ಇಲ್ಲ. ಹಾಗೆ ಗಣತಿಯಲ್ಲಿ ಜಾತಿಯನ್ನು ಪರಿಗಣಿಸಬಾರದು.
ಭಕ್ತಿಸಂಪನ್ನ ಶಿಷ್ಯರು ಮಠಕ್ಕೆ ಹತ್ತಿರವಾಗುತ್ತಿದ್ದರೆ, ವ್ಯವಹಾರಿಕ ಸಂಬಂಧ ಇರುವವರು ಮಠದಿಂದ ದೂರ ಸರಿಯುತ್ತಿದ್ದಾರೆ. ಎಲ್ಲಾ ಸರ್ಕಾರಗಳು ನೀರಾವರಿ ಯೋಜನೆಗಳಿಗೆ ಸಂಪೂರ್ಣವಾಗಿ ಸ್ಪಂದಿಸಿವೆ. ಶಿವಕುಮಾರ ಶ್ರೀಗಳು ಮಠವನ್ನು ನೈತಿಕ ಶಕ್ತಿಯಿಂದ ಮುನ್ನಡೆಸಿದ್ದಾರೆ. ಶಿಷ್ಯರು ಶ್ರೀಮಂತರಾದರೆ ಮಠವು ತಾನಗೆ ಶ್ರೀಮಂತವಾಗುತ್ತದೆ ಎಂದರು.
ಮಾಜಿ ಮುಖ್ಯಮಂತ್ರಿ ಹಾಗೂ ಸಂಸದರಾದ ಬಸವರಾಜ ಬೊಮ್ಮಾಯಿ ಮಾತನಾಡಿ ಸಿರಿಗೆರೆ ಮಠವು ಸಂಸ್ಕøತಿ ಮತ್ತು ಸಂಸ್ಕಾರ ಕಲಿಸುತ್ತಿದ್ದು, ಪ್ರಚಲಿತ ವರ್ತಮಾನಗಳಿಗೆ ತಕ್ಕಂತೆ ಸಹಕಾರ ನೀಡುತ್ತಿದೆ. ಗುರುಪರಂಪರೆಯನ್ನು ಆಚರಿಸುವುದು ಈ ಮಠದ ವೈಶಿಷ್ಟ್ಯ. ಲಿಂ.ಶ್ರೀಗಳು ನಡೆದಾಡುವ ದೇವರು. ಸಾಧಕರಿಗೆ ಸಾವು ಅಂತ್ಯವಲ್ಲ, ಸಾವಿನ ನಂತರವೂ ಅವರ ಬದುಕು ಜೀವಂತವಾಗಿರುತ್ತದೆ. ಮಠ ಶ್ರೀಮಂತವಾಗಿಲ್ಲ, ಆದರೆ ಮಠವನ್ನು ನಂಬಿದ ಭಕ್ತರು ಶ್ರೀಮಂತರಾಗಿದ್ದಾರೆ. ಶ್ರೀಗಳ ಹೃದಯ ತಾಯಿಯ ಹೃದಯದಂತೆ, ಶುದ್ಧ ಮನಸ್ಸಿನಂತೆ. ಮಾನವ ತತ್ವದ ಮೇಲೆ ನಡೆದು ಆತ್ಮಸಾಕ್ಷಾತ್ಕಾರವನ್ನು ಸಾಧಿಸುವುದು ಮುಖ್ಯ. ಇಂದಿನ ಸಂಘರ್ಷಮಯ ಬದುಕಿನಲ್ಲಿ ವೈಚಾರಿಕತೆ ಕೊರತೆಯಿಂದ ಸಮಾಜ ಗೊಂದಲದಲ್ಲಿದೆ ಎಂದರು.
ಸಭಾಪತಿಗಳಾದ ಬಸವರಾಜ ಹೊರಟ್ಟಿ ಮಾತನಾಡಿ ಸರ್ಕಾರ ಮಾಡದ ಜನಪರ ಕೆಲಸಗಳನ್ನು ತರಳಬಾಳು ಶ್ರೀಗಳು ಮಾಡಿದ್ದಾರೆ. ರೈತಪರ ಮತ್ತು ನೀರಾವರಿ ಯೋಜನೆಗಳನ್ನು ಜಾರಿಗೆ ತಂದು ಹಲವರ ಬಾಳಿಗೆ ಬೆಳಕಾಗಿದ್ದಾರೆ. ಅನ್ನ, ಅಕ್ಷರ ದಾಸೋಹದ ಮೂಲಕ ಮಕ್ಕಳಲ್ಲಿ ಶಿಸ್ತು, ಸಮಯಪಾಲನೆ ಹಾಗೂ ಸಂಸ್ಕಾರ ಬೆಳೆಸಿರುವುದು ಮಠದ ಹೆಗ್ಗಳಿಕೆ. ಈಡೀ ದೇಶಕ್ಕೆ ಮಾದರಿಯಾದ ಮಠವೆಂದರೆ ಅದು ತರಳಬಾಳು ಮಠ. ಮಠಕ್ಕಿಂತ ಮಠದ ಭಕ್ತರು ಶ್ರೀಮಂತರಾಗಲಿ ಎಂಬುದು ಶ್ರೀಗಳ ನಿಜವಾದ ಆಶಯ ಎಂದರು.
ಶಾಸಕರಾದ ಶಿವಗಂಗಾ ಬಸವರಾಜ್ ಮಾತನಾಡಿ ಇವತ್ತಿನ ದುಷ್ಟ ಶಕ್ತಿಗಳು ನಮ್ಮನ್ನು ಹಾಳು ಮಾಡಲು ಯತ್ನಿಸುತ್ತಿವೆ. ಆದರೆ ಲಿಂ. ಶಿವಕುಮಾರ ಶ್ರೀಗಳು ಕಟ್ಟಿಬೆಳೆಸಿದ ಸಮಾಜ ಉಳಿಯಬೇಕಾದರೆ ಎಲ್ಲರೂ ಶ್ರಮಿಸಿ ಅವರ ಮಾರ್ಗದರ್ಶನದಲ್ಲಿ ನಾವೆಲ್ಲ ನಡೆಯಬೇಕಾಗಿದೆ. ತರಳಬಾಳು ಮಠ ಆಧುನಿಕ ಭಗೀರಥ ಪೀಠವಾಗಿದೆ. ಹಿರಿಯ ಗುರುಗಳ ದಿಟ್ಟತನ, ಆಶೀರ್ವಾದ ಮತ್ತು ಭಕ್ತಿಯ ಭಾವನೆ ಎಲ್ಲರ ಮೇಲೂ ಹರಿಯುತ್ತಿವೆ. ಹೀಗಾಗಿ ಸಮಾಜ ಉಳಿವಿಗೆ ಸದ್ಭಕ್ತರ ಸಮರ್ಪಣೆ ಅಗತ್ಯ ಎಂದರು.
ಮಾಜಿ ಸಚಿವರಾದ ಹೆಚ್.ಆಂಜನೇಯ ಮಾತನಾಡಿ ಲಿಂ. ಶಿವಕುಮಾರ ಶ್ರೀಗಳು ಗ್ರಾಮೀಣ ಭಾಗಗಳಲ್ಲಿ ಶಾಲಾ-ಕಾಲೇಜುಗಳನ್ನು ತೆರೆದು ಬಡವರ ಬದುಕಿಗೆ ಬೆಳಕಾಗಿದ್ದಾರೆ. ಸಿರಿಗೆರೆ ಮಠ ಜಾತಿಯತೆ, ಅಸ್ಪೃಶ್ಯತೆಯನ್ನು ಹೊಗಲಾಡಿಸಿದೆ. ಇಲ್ಲಿ ಭಕ್ತರು ಶಿಸ್ತುವಂತರು, ಹೃದಯಂತರೂ, ಭಕ್ತಿವಂತರೂ ಆಗಿದ್ದಾರೆ. ಡಾ. ಶ್ರೀಗಳ ಇಚ್ಚಾಶಕ್ತಿ ರೈತರ ಕಲ್ಯಾಣಕ್ಕಾಗಿ ಮುಡಿಪಾಗಿದೆ. ಹಿರಿಯ ಗುರುಗಳು ಪ್ರಾರಂಭಿಸಿದ ವಚನ ಸಾಹಿತ್ಯ ಪ್ರಸಾರದ ಕಾರ್ಯವನ್ನು ಈಗಿನ ಶ್ರೀಗಳು ತಂತ್ರಜ್ಞಾನ ಸಹಾಯದಿಂದ ಮುಂದುವರೆಸುತ್ತಿದ್ದಾರೆ. ಈ ಕಾರ್ಯಕ್ಕೆ ಎಲ್ಲರೂ ಕೈಜೋಡಿಸಬೇಕು ಎಂದರು.
ಶಾಸಕರಾದ ಡಾ. ಎಂ. ಚಂದ್ರಪ್ಪ ಅವರು ಮಾತನಾಡಿ ಶಿವಕುಮಾರ ಶ್ರೀಗಳು ಸ್ವಾತಂತ್ರ್ಯ ಪೂರ್ವದಲ್ಲಿಯೇ ಶಿಕ್ಷಣ ಸಂಸ್ಥೆಗಳನ್ನು ನಿರ್ಮಿಸಿ ಗ್ರಾಮೀಣ ಮಕ್ಕಳಿಗೆ ಜ್ಞಾನದಾಸೋಹ, ಅನ್ನದಾಸೋಹ ಒದಗಿಸಿದರು. ಅವರು ಬಸವಣ್ಣನ ಆದರ್ಶಗಳನ್ನು ಮೈಗೂಡಿಸಿಕೊಂಡು ಭೇದಭಾವವಿಲ್ಲದೆ ಎಲ್ಲರನ್ನೂ ಪ್ರೀತಿಯಿಂದ ಕಾಣುತ್ತಿದ್ದರು. ಅವರ ಕಾಯಕಶೀಲತೆ ಒಂದು ವಿಶೇಷತೆ. ಇಂದಿನ ಶ್ರೀಗಳು ರೈತರ ಬದುಕಿಗೆ ದಾರಿದೀಪವಾಗಿ ಸಮಾಜವನ್ನು ಉನ್ನತ ಮಟ್ಟಕ್ಕೆ ತರುವ ಕಾರ್ಯಗಳಲ್ಲಿ ಶ್ರಮಿಸುತ್ತಿದ್ದಾರೆ ಎಂದರು.
ಶಾಸಕರಾದ ಯು.ಬಿ. ಬಣಕಾರ್ ಮಾತನಾಡಿ ಶ್ರೀಗಳ ಶ್ರದ್ಧಾಂಜಲಿಯು ಸಮಾಜ ಚಿಂತನೆಯ ಕಾರ್ಯಕ್ರಮವಾಗಿದೆ. ಎಲ್ಲಾ ಸರ್ಕಾರಗಳು ಶ್ರೀಗಳ ಜನಪರ ಕೆಲಸಗಳಿಗೆ ಸ್ಪಂದಿಸಿವೆ. ಸ್ವಾತಂತ್ರ್ಯ ಪೂರ್ವದಲ್ಲಿಯೇ ಶಿವಕುಮಾರ ಶ್ರೀಗಳು ಗ್ರಾಮೀಣ ಭಾಗಗಳಲ್ಲಿ ಶಾಲೆಗಳನ್ನು ತೆರೆದು ಸಮಾನ ಶಿಕ್ಷಣ, ಸಹಪಂಕ್ತಿ ಭೋಜನಕ್ಕೆ ಅವಕಾಶ ನೀಡಿದರು. ಡಾ. ಶ್ರೀಗಳು ನೀರಾವರಿ ಯೋಜನೆಗಳ ಮೂಲಕ ರೈತರಿಗೆ ನೆರವಾಗಿದ್ದಾರೆ. ಬರುವ ದಿನಗಳಲ್ಲಿ ಪರಮಪೂಜ್ಯರ ಅಣತಿಯಂತೆ, ಆಶೀರ್ವಾದದಂತೆ ನಡೆಯೋಣ ಎಂದರು.
ಶಾಸಕರಾದ ಟಿ. ರಘುಮೂರ್ತಿ ಮಾತನಾಡಿ ಹಿರಿಯ ಗುರುಗಳ ಮಾರ್ಗದರ್ಶನ, ಚಿಂತನೆಗಳು ನಮ್ಮೆಲ್ಲರ ಬಾಳಿಗೆ ಬೆಳಕಾಗಲಿ. ಸಮಾಜದ ಸಂಸ್ಕøತಿ, ಆಚರಣೆಗೆ ಅವರು ನೀಡುತ್ತಿರುವ ಸಹಕಾರ ಸಂತೋಷ ತಂದಿದೆ. ಶ್ರೀಗಳು ವಿಶ್ವಕ್ಕೆ ವಚನ ಸಾಹಿತ್ಯವನ್ನು ಪಸರಿಸಿದ್ದಾರೆ. ಬಿಸಿಲು ಬೆಳದಿಂಗಳು ಅಂಕಣದ ಮೂಲಕ ಸಮಾಜದ ಅಂಕುಡೊಂಕುಗಳನ್ನು ತಿದ್ದುತ್ತಿದ್ದಾರೆ. ಸಮಾಜದಲ್ಲಿ ಕಾಲಕಾಲಕ್ಕೆ ನಡೆಯುವ ದೋಷಗಳನ್ನು ತಿದ್ದಿ, ಭಕ್ತರನ್ನು ಜಾಗೃತಗೊಳಿಸುತ್ತಿದ್ದಾರೆ ಎಂದರು.
ಶ್ರೀಮಠ ಸಾಧುಸದ್ಧರ್ಮ ವೀರಶೈವ ಸಂಘದ ಅಧ್ಯಕ್ಷರಾದ ಹೆಚ್.ಆರ್.ಬಸವರಾಜಪ್ಪ ಅವರು ಮಾತನಾಡಿ ಸಿರಿಗೆರೆ ಮಠವು ಜಾತ್ಯತೀತ ಮಠವಾಗಿದೆ. ಕಾಲ ಕಾಲಕ್ಕೂ ಮಠಕ್ಕೆ ಒಳ ಶತ್ರುಗಳು ಇದ್ದರೂ, ಅವರಿಂದ ಮಠದ ಕೀರ್ತಿಗೆ ಧಕ್ಕೆ ಬರುವುದಿಲ್ಲ. ಉದ್ಯಮಿಗಳ ಪಾಲಾಗುತ್ತಿರುವ ರೈತರ ಭೂಮಿ, ಭೂಸ್ವಾದೀನದ ವಿರುದ್ದ ಸರ್ಕಾರ ಸೂಕ್ತಕ್ರಮ ಕೈಗೊಳ್ಳಬೇಕು. ರೈತನೇ ದೇಶದ ಮಾಲೀಕ. ವಯೋವೃದ್ಧ ತಂದೆ-ತಾಯಿಯರನ್ನು ಕೊನೆಯವರೆಗೂ ನೋಡಿಕೊಳ್ಳುವವರು ರೈತ ಮಾತ್ರ ಎಂದರು.
ಐಕ್ಯಮಂಟಪದಲ್ಲಿ ಲಿಂ. ಶಿವಕುಮಾರ ಶ್ರೀಗಳ ಕತೃ ಗದ್ದಿಗೆಯಲ್ಲಿ ವಿಶೇಷ ಪೂಜೆ ಹಾಗೂ ಮಹಾರುದ್ರಾಭಿಷೇಕ, ಶ್ರೀಗಳಿಂದ ಪುಷ್ಪ ನಮನ, ಶಿವ ಧ್ವಜಾರೋಹಣ ಕಾರ್ಯಕ್ರಮಗಳು ಜರುಗಿದವು. ತರಳಬಾಳು ಪ್ರಕಾಶನದ ಸಾಹಿತ್ಯ ಸಿರಿ ಮಾಲಿಕೆಯ ಕೃತಿಗಳಾದ ಕದಲಿ.ಕ.ಕರ್ಪೂರ್, ಶಿವಸಿರಿ ಮಹಾಕಾವ್ಯ, ಭರಮಸಾಗರ ತರಳಬಾಳು ಹುಣ್ಣಿಮೆ ಸ್ಮರಣ ಸಂಚಿಕೆ 2025 ಕೃತಿಗಳು ಲೋಕಾರ್ಪಣೆಗೊಂಡವು.
ನಿವೃತ್ತ ಪ್ರಾಚಾರ್ಯರಾದ ಡಾ.ನಾ.ಲೋಕೇಶಒಡೆಯರ್ ಅವರು ಶ್ರೀ ಶಿವಕುಮಾರ ಶಿವಾಚಾರ್ಯ ಸ್ವಾಮಿಗಳವರ ಅಸಾಧಾರಣ ಸಾಧನೆಯ ವಿಷಯದ ಕುರಿತು ಉಪನ್ಯಾಸ ನೀಡಿದರು. ಕರ್ನಾಟಕ ಕಲಾಶ್ರೀ ಪುರಸ್ಕೃತರಾದ ತೋಟಪ್ಪ ಉತ್ತಂಗಿ ಅವರಿಂದ ವಚನ ಗಾಯನ ಹಾಗೂ ತರಳಬಾಳು ಕಲಾ ಸಂಘದಿಂದ ವಚನ ನೃತ್ಯಗಳು ಪ್ರದರ್ಶನಗೊಂಡವು.
ಕಾರ್ಯಕ್ರಮದಲ್ಲಿ ಮಾಜಿ ಲೋಕಸಭಾ ಸದಸ್ಯರಾದ ಜಿ.ಎಂ.ಸಿದ್ದೇಶ್ವರ, ಶಾಸಕರಾದ ಹೆಚ್.ಡಿ.ತಮ್ಮಯ್ಯ, ಪ್ರಕಾಶ್ ಕೋಳಿವಾಡ, ಕವಿ ಪ್ರದೀಪ್ ಕುಮಾರ್ ಹೆಬ್ರಿ, ಪ್ರದೀಪ್ ಶಾಂತನಗೌಡ, ನೀರಾವರಿ ನಿಗಮದ ಅಭಿಯಂತರಾದ ಮಲ್ಲಿಕಾರ್ಜುನ ಗುಂಗೆ ಹಾಗೂ ಅಪಾರ ಭಕ್ತಾಧಿಗಳು ಇದ್ದರು.

