ಸಾಮಾಜಿಕ ಕಾರ್ಯಗಳಿಗೆ ಜನ ಬೆಂಬಲವಿದ್ದರೆ ಪೂರ್ವಜರು ಬಿಟ್ಟು ಹೋಗಿರುವ ಆದರ್ಶ, ಮೌಲ್ಯಗಳು ಉಳಿಯಲು ಸಾಧ್ಯ : ಎಸ್.ಆರ್. ಲಕ್ಷ್ಮಿಕಾಂತ ರೆಡ್ಡಿ

1 Min Read

 

ಸುದ್ದಿಒನ್, ಚಿತ್ರದುರ್ಗ, ಡಿ, 18 : ಧಾರ್ಮಿಕ ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವುದು ಪುಣ್ಯ ವಿಶೇಷಗಳಲ್ಲಿ ಒಂದು. ಇಂತಹ ಸದಾವಕಾಶ ನನಗೆ ನಮ್ಮ ಸಂಸ್ಥೆಯ ಮೂಲಕ  ಒದಗಿ ಬಂದಿದೆ ಎಂದು ನಾನು ಹೆಮ್ಮೆಯಿಂದ ಹೇಳಿಕೊಳ್ಳುತ್ತೇನೆ. ಸಾಮಾಜಿಕ ಕಾರ್ಯಗಳಿಗೆ ಜನ ಬೆಂಬಲ  ಕೊಡುತ್ತಿದ್ದರೆ ನಮ್ಮ ಪೂರ್ವಜರು ಬಿಟ್ಟು ಹೋಗಿರುವ ಆದರ್ಶ ಮೌಲ್ಯಗಳು ಉಳಿಯಲು ಸಾಧ್ಯ ಎಂದು  ದಿ ಮರ್ಚೆಂಟ್ಸ್ ಸೌಹಾರ್ದ ಸಹಕಾರ ಬ್ಯಾಂಕಿನ ಅಧ್ಯಕ್ಷರಾದ ಸಹಕಾರಿ ಧುರೀಣ ಎಸ್.ಆರ್. ಲಕ್ಷ್ಮಿಕಾಂತ ರೆಡ್ಡಿ ಅವರು ಅಭಿಪ್ರಾಯಪಟ್ಟರು.

ನಗರದ ಜೆಸಿಆರ್ ಬಡಾವಣೆಯ ಗಣಪತಿ ದೇವಾಲಯದಲ್ಲಿ ಗಮಕ ಕಲಾಭಿಮಾನಿಗಳ ಸಂಘ, ಜೆಸಿಆರ್ ಗಣಪತಿ ದೇವಾಲಯ ಸಮಿತಿ ಹಾಗೂ ದಿ ಮರ್ಚೆಂಟ್ಸ್ ಸೌಹಾರ್ದ ಸಹಕಾರ ಬ್ಯಾಂಕ್ ನಿಯಮಿತ ಚಿತ್ರದುರ್ಗ, ಇವರುಗಳ ಸಹಯೋಗದಲ್ಲಿ ಏರ್ಪಡಿಸಿದ್ದ ಮಾಸಿಕ ಗಮಕ ವಾಚನ ವ್ಯಾಖ್ಯಾನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು.

ರಾಮಾಯಣ ಕಾವ್ಯದ ಸೀತಾನ್ವೇಷಣೆ ಭಾಗದ ವಾಚನವನ್ನು ಶಿವಮೊಗ್ಗದ ಹೊಸಳ್ಳಿಯ ಪ್ರಸಾದ್ ಭಾರಧ್ವಜ್ ಅವರು ಹೃದಯಂಗಮವಾಗಿ ವಾಚನ ಮಾಡಿದರು. ಇದಕ್ಕೆ ಸಂವಾದಿಯಾಗಿ ಚಿಕ್ಕಮಗಳೂರಿನ ಗಮಕಿ, ನಿವೃತ್ತ ಉಪನ್ಯಾಸಕರಾದ ಕಲಾಶ್ರೀ ರಾಮಸುಬ್ರಾಯ ಶೇಟ್ ಅವರು ಕಾವ್ಯದ ವ್ಯಾಖ್ಯಾನವನ್ನು  ಬಹು ಸೂಕ್ಷ್ಮವಾದ  ತತ್ವಾದರ್ಶಗಳನ್ನು ಭಾವಪೂರ್ಣವಾಗಿ  ಮನಗಾಣಿಸಿದರು.
ಜೆಸಿಆರ್ ಗಣಪತಿ ದೇವಾಲಯ ಸಮಿತಿ ಅಧ್ಯಕ್ಷರಾದ ಜಿ. ಆರ್. ಕೃಷ್ಣಮೂರ್ತಿ ಅವರು ಮುಖ್ಯ ಅತಿಥಿಗಳಾಗಿ  ಭಾಗವಹಿಸಿದ್ದರು.

ಗಮಕಲಾಭಿಮಾನಿಗಳ ಸಂಘದ ಅಧ್ಯಕ್ಷೆ ಕೆ .ಆರ್. ರಮಾದೇವಿ ಅವರು ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡುತ್ತಾ ಗಮಕಲಾ ಸಂಘಕ್ಕೆ ಇದೀಗ  40 ವರ್ಷ ತುಂಬಿದೆ.ಜನತೆಯ  ಸಹಕಾರ, ನೆರವು ಮತ್ತು ಪ್ರೋತ್ಸಾಹ ಇದೇ ರೀತಿ ಸದಾ ಸಿಕ್ಕರೆ ನಲವತ್ತು  ಕಾರ್ಯಕ್ರಮಗಳನ್ನು ಜನತೆಯ ಹತ್ತಿರವೇ ಹೋಗಿ ಮಾಡುವುದಾಗಿ ತಿಳಿಸಿದರು.

ಈ ಸಂದರ್ಭದಲ್ಲಿ ಮರ್ಚೆಂಟ್ಸ್ ಬ್ಯಾಂಕ್ ನ ಅಧ್ಯಕ್ಷರಾದ ಎಸ್ .ಆರ್  ಲಕ್ಷ್ಮಿ ಕಾಂತ ರೆಡ್ಡಿ ಅವರನ್ನು ಸಂಘಗಳ  ವತಿಯಿಂದ ಸನ್ಮಾನಿಸಿ  ಗೌರವಿಸಲಾಯಿತು.

Share This Article
Leave a Comment

Leave a Reply

Your email address will not be published. Required fields are marked *