ವರದಿ ಮತ್ತು ಫೋಟೋ ಕೃಪೆ : ಕೆ.ಎಂ.ಮುತ್ತುಸ್ವಾಮಿ ಕಣ್ಣನ್
ಮೊ : 78998 64552
ಚಿತ್ರದುರ್ಗ: ಸದಾಶಿವ ಆಯೋಗದ ವರದಿ ಬೆಂಕಿ ಹತ್ತಿ ಉರಿಯುತ್ತಿದ್ದು, ರಾಜ್ಯ ಸರ್ಕಾರ ಏನಾದರೂ ಆಯೋಗದ ವರದಿಯನ್ನು ಕೇಂದ್ರಕ್ಕೆ ಶಿಫಾರಸ್ಸು ಮಾಡಿದ್ದೇ ಆದಲ್ಲಿ ಸಚಿವರುಗಳಾದ ಜಿ.ಸಿ.ಮಾಧುಸ್ವಾಮಿ ಹಾಗೂ ಗೋವಿಂದ ಕಾರಜೋಳ ಇವರ ಮನೆಗಳಿಗೆ ಮುತ್ತಿಗೆ ಹಾಕಿ ಉಗ್ರವಾಗಿ ಪ್ರತಿಭಟಿಸಲಾಗುವುದೆಂದು ಬಂಜಾರ ಗುರುಪೀಠದ ಸರ್ದಾರ್ ಸೇವಾಲಾಲ್ ಸ್ವಾಮೀಜಿ ಎಚ್ಚರಿಕೆ ನೀಡಿದರು.
ಬಂಜಾರ ಭವನದಲ್ಲಿ ಗುರುವಾರ ನಡೆದ ಸಂತ ಸೇವಾಲಾಲ್ ಮಹಾರಾಜ್‍ರವರ 284 ನೇ ಜಯಂತಿಯ ಸಾನಿಧ್ಯ ವಹಿಸಿ ಮಾತನಾಡಿದ ಸರ್ದಾರ್ ಸೇವಾಲಾಲ್ ಸ್ವಾಮೀಜಿ ನಮಗೆ ಮೀಸಲಾತಿ ಹೆಚ್ಚಿಗೆಯಾಗಬೇಕೆ ವಿನಃ ಒಳಮೀಸಲಾತಿ ಬೇಕಿಲ್ಲ. ಸದಾಶಿವ ಆಯೋಗದ ವರದಿ ಜಾರಿಗೆ ತರಲು ದೊಡ್ಡ ಷಡ್ಯಂತ್ರ ನಡೆಯುತ್ತಿದೆ. ನಮ್ಮ ಮೀಸಲಾತಿ ಅನ್ನಕ್ಕೆ ಕೈಹಾಕಿದವರು ಸುಟ್ಟು ಹೋಗುತ್ತಾರೆ.
ಹೆಚ್.ಆಂಜನೇಯ ನಮ್ಮ ಮೀಸಲಾತಿಗೆ ಕೈಹಾಕಿದ ಫಲವಾಗಿ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಸೋತು ಸ್ಥಾನ ಕಳೆದುಕೊಂಡರು. ಸದಾಶಿವ ಆಯೋಗದ ವರದಿಯನ್ನು ಕೇಂದ್ರಕ್ಕೆ ಯಾವುದೇ ಕಾರಣಕ್ಕೂ ರಾಜ್ಯ ಸರ್ಕಾರ ಶಿಫಾರಸ್ಸು ಮಾಡಬಾರದು. ಇದರಿಂದ ರಾಜಕೀಯ ಹಾಗೂ ಶೈಕ್ಷಣಿಕವಾಗಿ ಶೋಷಣೆಗೊಳಗಾಬೇಕಾಗುತ್ತದೆ.
ಈ ನಿಟ್ಟಿನಲ್ಲಿ ಭೋವಿ. ಲಂಬಾಣಿ, ಕೊರಚ, ಕೊರಮ ಹೀಗೆ ಅನೇಕ ಜಾತಿಗಳು ಜಾಗೃತರಾಗಬೇಕೆಂದು ಕರೆ ನೀಡಿದರು.
ಸದಾಶಿವ ಆಯೋಗದ ವರದಿಯನ್ನು ಜಾರಿಗೆ ತಂದು ಸೋದರ ಸಮಾಜ ವಿರುದ್ದ ಮನಸ್ತಾಪ ಉಂಟು ಮಾಡುವ ಹುನ್ನಾರ ನಡೆಯುತ್ತಿದೆ. ಮೀಸಲಾತಿ ಹೆಚ್ಚಿಸಿ ನಮ್ಮ ಸಮಾಜಕ್ಕೆ ಅನುದಾನ ಕೊಡಬೇಕು. ಒಳಮೀಸಲಾತಿ ಬೇಕಿಲ್ಲ. ರಾಜ್ಯದ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಸೂರಗೊಂಡನಕೊಪ್ಪ ಅಭಿವೃದ್ದಿಗೆ ಐದು ಕೋಟಿ ರೂ.ಗಳನ್ನು ಬಿಡುಗಡೆಗೊಳಿಸಿದ್ದಾರೆ. ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ನೂರು ಕೋಟಿ ರೂ.ಗಳನ್ನು ಮಂಜೂರು ಮಾಡಿದ್ದರು. ಯಾವ ಪಕ್ಷವೂ ನಮ್ಮ ಸಮಾಜದ ಪರವಾಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಇಡಿ ವಿಶ್ವದಲ್ಲಿ ಎಲ್ಲಿ ಹೋದರೂ ನಮ್ಮ ಭಾಷೆ, ಕಲೆ, ಸಂಸ್ಕøತಿ ಒಂದೆ ರೀತಿಯಲ್ಲಿರುತ್ತದೆ. ವಿಶಿಷ್ಠ ಕಲೆ ಹೊಂದಿರುವ ಸಮಾಜ ನಮ್ಮದು. 280 ವರ್ಷಗಳ ಹಿಂದೆಯೇ ಸಂತ ಸೇವಾಲಾಲ್ ಮಹಾರಾಜರು ಹಣ ಕೊಟ್ಟು ನೀರು ಕುಡಿಯುವ ಪರಿಸ್ಥಿತಿ ಬರುತ್ತದೆ ಎಂದು ಹೇಳಿದ್ದರು. ಅದರಂತೆ ಇಂದು ನಾವುಗಳೆಲ್ಲಾ ಬಾಟಲಿ ನೀರು ಖರೀಧಿಸಿ ಕುಡಿಯುವಂತಾಗಿದ್ದೇವೆ. ಧರ್ಮ, ಗೋರಕ್ಷಕರಾಗಿದ್ದ ಸೇವಾಲಾಲ್ ಮಹಾರಾಜರು ಮನೆ ಮನೆಯಲ್ಲಿ ಹಸುಗಳನ್ನು ಸಾಕಿ ಹಾಲು, ಮೊಸರು, ಬೆಣ್ಣೆ, ತುಪ್ಪ ಬಳಸಿ ಎನ್ನುವ ಸಂದೇಶ ನೀಡಿದ್ದರು. ಶಾಂತಿಪ್ರಿಯರಾಗಿದ್ದ ಅವರು ಸ್ವಾಭಿಮಾನಕ್ಕೆ ಧಕ್ಕೆ ಬಂದಾಗ ಕ್ರಾಂತಿಯಾಗುತ್ತಿದ್ದರು. ಹೋರಾಟದ ಮೂಲಕ ಬಂಜಾರ ಸಮಾಜವನ್ನು ರಕ್ಷಿಸಿದವರು ಎಂದು ಸ್ಮರಿಸಿದರು.
ಬಂಜಾರ ಜನಾಂಗ ಯಾರ ಮೇಲೂ ದೌರ್ಜನ್ಯ, ದಬ್ಬಾಳಿಕೆ ಮಾಡಿದವರಲ್ಲ. ಸರ್ವ ಧರ್ಮಿಯರನ್ನು ಪ್ರೀತಿಸಿ ಗೌರವದಿಂದ ಕಾಣುವ ಸಮಾಜ ನಮ್ಮದು. ನಮ್ಮ ಜನಾಂಗದಲ್ಲಿ ಹುಟ್ಟಿದ ಪ್ರತಿಯೊಬ್ಬರು ಸಮಾಜಕ್ಕೆ ಏನನ್ನಾದರೂ ಕೊಡುಗೆ ನೀಡಬೇಕು. ಯಾರಿಗೂ ದ್ವೇಷ, ಅಸೂಯೆ, ಕೆಡಕು ಬಯಸಬಾರದು, ಸೇವೆಗಾಗಿ ಬದುಕಿ ಎನ್ನುವ ಸಂದೇಶವನ್ನು ಸಂತ ಸೇವಾಲಾಲ್ ಮಹಾರಾಜರು ನೀಡಿದ್ದಾರೆ. ಈಗ ಬಂಜಾರ ಸಮಾಜ ಆತಂಕದಲ್ಲಿರುವುದರಿಂದ ಸದಾಶಿವ ಆಯೋಗದ ವರದಿ ಜಾರಿಗೆ ಬಿಡುವುದಿಲ್ಲ ಎಂದು ಕೇಂದ್ರ ಮತ್ತು ರಾಜ್ಯ ಸರ್ಕಾರವನ್ನು ಎಚ್ಚರಿಸಿದರು.
ತಾಂಡ ಅಭಿವೃದ್ದಿ ನಿಗಮದ ನಿರ್ದೇಶಕ ಗಿರೀಶ್ ಮಾತನಾಡಿ ಮುಂದಿನ ವರ್ಷ ಸಂತ ಸೇವಾಲಾಲ್ ಮಹಾರಾಜ್‍ರವರ ಜಯಂತಿಯನ್ನು ಅದ್ದೂರಿಯಾಗಿ ಆಚರಿಸಿ ಅಸ್ತಿತ್ವ ಉಳಿಸಿಕೊಳ್ಳಬೇಕಿದೆ. ಎಲ್ಲಾ ಸರ್ಕಾರಿ ಕಚೇರಿ ಹಾಗೂ ಶಾಲೆಗಳಲ್ಲಿ ಸೇವಾಲಾಲ್ ಮಹಾರಾಜ್ ಜಯಂತಿಯನ್ನು ಕಡ್ಡಾಯವಾಗಿ ಆಚರಿಸುವಂತೆ ಸರ್ಕಾರ ಆದೇಶಿಸಬೇಕು. ಸೂರಗೊಂಡನಕೊಪ್ಪಕ್ಕೆ ಹತ್ತು ಕೋಟಿ ರೂ.ಗಳನ್ನು ಘೋಷಿಸಿರುವ ರಾಜ್ಯದ ಮುಖ್ಯಮಂತ್ರಿ ಬಸವರಾಜ್‍ಬೊಮ್ಮಾಯಿ ಬಜೆಟ್‍ನಲ್ಲಿ ಐದು ಕೋಟಿ ರೂ.ಗಳನ್ನು ನೀಡಿದ್ದಾರೆ. ಸದಾಶಿವ ಆಯೋಗದ ವರದಿ ಜಾರಿಗೆ ಹುನ್ನಾರ ನಡೆಯುತ್ತಿದೆ. ವರದಿಯನ್ನು ಸಾರಾಸಗಟಾಗಿ ತಿರಸ್ಕರಿಸಬೇಕಾಗಿರುವುದರಿಂದ ಬಂಜಾರ ಸಮಾಜ ಒಗ್ಗಟ್ಟಾಗಬೇಕು. ಒಂದು ವೇಳೆ ರಾಜ್ಯ ಸರ್ಕಾರ ಕೇಂದ್ರ ಆಯೋಗದ ವರದಿಯನ್ನು ಶಿಫಾರಸ್ಸು ಮಾಡಿದರೆ ಉಗ್ರ ಹೋರಾಟ ನಡೆಸಲಾಗುವುದೆಂದು ಬೆದರಿಕೆ ಹಾಕಿದರು.
ವಿಧಾನಪರಿಷತ್ ಮಾಜಿ ಸದಸ್ಯ ರಘು ಆಚಾರ್ ಪತ್ನಿ ಶ್ರೀಮತಿ ಆಶಾ ರಘು ಆಚಾರ್, ವಿಶ್ವಕರ್ಮ ಅಕಾಡೆಮಿ ಮಾಜಿ ಅಧ್ಯಕ್ಷೆ ಸತ್ಯವತಿ, ಬಂಜಾರ ಸಮಾಜದ ಜಿಲ್ಲಾಧ್ಯಕ್ಷ ಎಂ.ಸತೀಶ್‍ಕುಮಾರ್, ಗೌರವಾಧ್ಯಕ್ಷ ಗಿರೀಶ್, ಜಾನಪದ ಅಕಾಡೆಮಿ ನಿರ್ದೇಶಕಿ ರುದ್ರಾಕ್ಷಿಬಾಯಿ, ಬಂಜಾರ ಜಾನಪದ ಕಲಾವಿದ ಉಮೇಶ್‍ನಾಯ್ಕ, ವೆಂಕಟೇಶ್‍ನಾಯ್ಕ, ತಿಪ್ಪೇಸ್ವಾಮಿ ನಾಯ್ಕ, ಪರಮೇಶ್‍ನಾಯ್ಕ, ವೆಂಕಟೇಶ್‍ನಾಯ್ಕ, ಉಮೇಶ್‍ನಾಯ್ಕ, ಉಮಾಪತಿ, ಪರಮೇಶ್, ವಿಷ್ಣು, ವೀರಭದ್ರ ವೇದಿಕೆಯಲ್ಲಿದ್ದರು.