ಚಿತ್ರದುರ್ಗ,(ಡಿ.02) : ಸರ್ಕಾರಿ ಅಧಿಕಾರಿಗಳು ಆರೋಗ್ಯಯುತವಾಗಿದ್ದರೆ, ಆಡಳಿತ ವ್ಯವಸ್ಥೆಯೂ ಆರೋಗ್ಯವಾಗಿರಲಿದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಂ.ಎಸ್. ದಿವಾಕರ್ ಹೇಳಿದರು.
ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಶುಕ್ರವಾರ ಜಿಲ್ಲಾ ಪಂಚಾಯತಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಪಿವಿಎಸ್ ಆಸ್ಪತ್ರೆ, ಇಂಡಿಯಾನ ಎಸ್‍ಜೆಎಂ ಹಾರ್ಟ್ ಸೆಂಟರ್, ಬಸವೇಶ್ವರ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ ಮತ್ತು ಕರ್ನಾಟಕ ರಾಜ್ಯ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘ ಜಿಲ್ಲಾ ಶಾಖೆ ಚಿತ್ರದುರ್ಗ ಇವರ ಸಹಯೋಗದಲ್ಲಿ ಜಿಲ್ಲೆಯ ಪಂಚಾಯತ್ ಅಭಿವೃದ್ಧಿ ಅಧಿಕಾರಿ, ಕಾರ್ಯದರ್ಶಿ, ಎಸ್‍ಡಿಎಎಗಳಿಗೆ ಆರೋಗ್ಯ ತಪಾಸಣಾ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.
ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು, ಕಾರ್ಯದರ್ಶಿ, ಎಸ್‍ಡಿಎಎ ಅವರು ಅಭಿವೃದ್ಧಿ ಇಲಾಖೆಯ ರಾಯಬಾರಿಗಳಾಗಿದ್ದು, ನಿಮ್ಮಿಂದ ಜಿಲ್ಲೆಯ ಅಭಿವೃದ್ಧಿ ಕಾರ್ಯಗಳು ಆಗಬೇಕಿದೆ. ನಿಮ್ಮಗಳ ಆರೋಗ್ಯವೇ ಜಿಲ್ಲೆಯ ನಾಗರಿಕರ ಆರೋಗ್ಯವಾಗಿದೆ ಎಂದು ಅಭಿಪ್ರಾಯಪಟ್ಟರು.
ರೋಗ ಬರುವುದು ಮನುಷ್ಯರಿಗೆ. “ರೋಗ” ಅವಮಾನ ಎಂದು ತಿಳಿಯದೇ, ತಪಾಸಣೆ ಮಾಡಿಸುವುದರಿಂದ ರೋಗ ಇನ್ನೊಬ್ಬರಿಗೆ ಗೊತ್ತಾಗುತ್ತದೆ ಎಂದು ಹಿಂಜರಿಕೆ ಮನೋಭಾವನೆ ಬಿಟ್ಟು, ಆರೋಗ್ಯ ತಪಾಸಣೆಗೆ ಒಳಗಾಗಬೇಕು ಎಂದು ಹೇಳಿದ ಅವರು, ಉತ್ತಮ ಆರೋಗ್ಯ ಕಾಪಾಡಿಕೊಂಡಾಗ ಮಾತ್ರ ಅಧಿಕಾರಿಗಳು ಉತ್ತಮವಾಗಿ ಕಾರ್ಯನಿರ್ವಹಣೆ ಮಾಡಲು ಸಾಧ್ಯವಾಗಲಿದೆ ಎಂದರು.
ಕಳೆದ ಎಂಟು ತಿಂಗಳ ಹಿಂದೆ ಬೆಂಗಳೂರಿನ ಜಯದೇವ ಆಸ್ಪತ್ರೆಯಲ್ಲಿ ಬಿಎಂಟಿಸಿ ಚಾಲಕರು ಮತ್ತು ನಿರ್ವಾಹಕರಿಗೆ ಆರೋಗ್ಯ ತಪಾಸಣೆ ನಡೆಸಲಾಯಿತು. ಇದರಲ್ಲಿ ಶೇ.45ಕ್ಕೂ ಹೆಚ್ಚು ಮಂದಿಗೆ ಹೃದಯ ರೋಗ ಸಮಸ್ಯೆ ಇರುವುದು ಗೊತ್ತಾಯಿತು. ಸರ್ಕಾರಿ ಅಧಿಕಾರಿಗಳು, ನೌಕರರು ಸದಾ ಒತ್ತಡದಲ್ಲಿ ಕಾರ್ಯನಿರ್ವಹಣೆ ಹಾಗೂ ಸಮಯದ ಅಭಾವದಿಂದ ಆರೋಗ್ಯದ ಕಡೆಗೆ ಗಮನ ಹರಿಸಲು ಸಾಧ್ಯವಾಗುವುದಿಲ್ಲ. ಹಾಗಾಗಿ ಉತ್ತಮ ಆರೋಗ್ಯ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಅಧಿಕಾರಿಗಳು, ನೌಕರರು ನಿರಂತರವಾಗಿ ಆರೋಗ್ಯ ತಪಾಸಣೆಗೆ ಒಳಗಾಗಿ, ವೈದ್ಯರ ಸಲಹೆ, ಸೂಚನೆ ಪಾಲಿಸಬೇಕು ಎಂದು ಕಿವಿಮಾತು ಹೇಳಿದರು.
ಇಂಡಿಯಾನ ಎಸ್‍ಜೆಎಂ ಹಾರ್ಟ್ ಸೆಂಟರ್‍ನ ಹೃದಯ ತಜ್ಞ ಡಾ.ಜಿ.ಮಂಜುನಾಥ್ ಮಾತನಾಡಿ, ಹೃದಯಾಘಾತ ಆಗದೇ ಇರುವುದಕ್ಕಿಂತ ಮುಂಚಿತವಾಗಿ ಚಿಕಿತ್ಸೆ ಪಡೆಯುವುದು ಬಹುಮುಖ್ಯ. ಪ್ರಸ್ತುತ ದಿನಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಯುವಕರಲ್ಲಿ ಹೃದಯ ಸಂಬಂಧಿ ಖಾಯಿಲೆಗಳು ಕಂಡುಬರುತ್ತಿವೆ. ಹಾಗಾಗಿ ಮುಂಜಾಗ್ರತಾ ಕ್ರಮವಾಗಿ ಕಡ್ಡಾಯವಾಗಿ ಇಸಿಜಿ, ಎಕೋ ತಪಾಸಣೆ ಮಾಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಆರೋಗ್ಯ ತಪಾಸಣೆ ಶಿಬಿರದಲ್ಲಿ ತಜ್ಞ ವೈದ್ಯರು ಜಿಲ್ಲೆಯ 189 ಗ್ರಾಮ ಪಂಚಾಯಿತಿಗಳ ಪಂಚಾಯತ್ ಅಭಿವೃದ್ಧಿ ಅಧಿಕಾರಿ, ಕಾರ್ಯದರ್ಶಿ, ಎಸ್‍ಡಿಎಎಗಳಿಗೆ ಬಿ.ಪಿ, ಶುಗರ್, ಇಸಿಜಿ ಹಾಗೂ ಇಕೋಕಾರ್ಡಿಯೋಗ್ರಾಂ, ಕಣ್ಣು, ಕಿವಿ, ಮೂಗು, ದಂತ ತಪಾಸಣೆ ನಡೆಸಲಾಯಿತು.
ಇದೇ ಸಂದರ್ಭದಲ್ಲಿ ಕೋವಿಡ್-19ರ ಸಾಂಕ್ರಾಮಿಕ ರೋಗ ನಿಯಂತ್ರಣ ಕಾರ್ಯಕ್ರಮಗಳಡಿ ಗ್ರಾಮ ಪಂಚಾಯಿತಿಯ ನಿಯೋಜಿತ ಸಿಬ್ಬಂದಿಗಳು ಕರ್ತವ್ಯ ನಿರ್ವಹಿಸುತ್ತಿದ್ದಾಗ ನಿಧನ ಹೊಂದಿದ ಕುಟುಂಬವರಿಗೆ ತಲಾ ರೂ.20 ಲಕ್ಷದಂತೆ ಒಟ್ಟು ಮೂರು ಕುಟುಂಬಗಳಿಗೆ ಪರಿಹಾರ ನೀಡಲಾಯಿತು.
ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಡಾ.ರಂಗಸ್ವಾಮಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ರಂಗನಾಥ್, ಆಯುಷ್ ವೈದ್ಯಾಧಿಕಾರಿ ಡಾ.ಶಿವಕುಮಾರ್, ರೋಗಶಾಸ್ತ್ರಜ್ಞ ಡಾ.ರುದ್ರೇಶ್, ಇಂಡಿಯಾನ ಎಸ್‍ಜೆಎಂ ಹಾರ್ಟ್ ಸೆಂಟರ್‍ನ ಶಿಬಿರ ಸಂಯೋಜಕ ಎಸ್.ಮಂಜಣ್ಣ ಸೇರಿದಂತೆ ಮತ್ತಿತರರು ಇದ್ದರು.