ಚಿತ್ರದುರ್ಗ. ಜುಲೈ.16: ರಸಗೊಬ್ಬರ ಮಾರಾಟಗಾರರು ಗೊಬ್ಬರ ಚೀಲದ ಮೇಲೆ ಮುದ್ರಿತವಾದ ಗರಿಷ್ಠ ಬೆಲೆಗಿಂತ ಹೆಚ್ಚಿನ ಬೆಲೆಗೆ ಗೊಬ್ಬರ ಮಾರಾಟ ಮಾಡುತ್ತಿರುವ ಕುರಿತು ರೈತರಿಂದ ದೂರು ಕೇಳಿಬಂದಿವೆ. ಹೆಚ್ಚಿನ ಬೆಲೆಗೆ ರಸಗೊಬ್ಬರ ಮಾರಾಟ ಮಾಡುವುದು ಕಂಡುಬಂದರೆ ಪರವಾನಿಗೆ ರದ್ದು ಮಾಡಿ, ಕಾನೂನು ಕ್ರಮ ಕೈಗೊಳ್ಳುವುದಾಗಿ ಕೃಷಿ ಜಂಟಿ ನಿರ್ದೇಶಕ ಬಿ.ಮಂಜುನಾಥ್ ಎಚ್ಚರಿಕೆ ನೀಡಿದ್ದಾರೆ.
ಜಿಲ್ಲೆಯಲ್ಲಿ ಉತ್ತಮವಾದ ಮಳೆಯಾಗುತ್ತಿದೆ. ರೈತರು ಮೆಕ್ಕೆಜೋಳ, ಸಾವೆ ಸೇರಿದಂತೆ ಇನ್ನಿತರ ಬೆಳೆಗಳಿಗೆ ಮೇಲು ಗೊಬ್ಬರವಾಗಿ ಯೂರಿಯಾ ಸೇರಿದಂತೆ ಹಲವು ರಸಗೊಬ್ಬರ ಉಪಯೋಗಿಸುತ್ತಾರೆ. ಈ ಸಮಯದಲ್ಲಿ ರಸಗೊಬ್ಬರದ ಕೃತಕ ಅಭಾವ ಸೃಷ್ಠಿಸುವುದು ಹಾಗೂ ರೈತರಿಂದ ಹೆಚ್ಚಿನ ಬೆಲೆ ಪಡೆಯುವುದು ಕಂಡುಬಂದರೆ ಯಾವುದೇ ಮುಲಾಜೂ ಇಲ್ಲದೆ ಮಾರಾಟಗಾರ ವಿರುದ್ದ ಪ್ರಕರಣ ದಾಖಲಿಸಿ ಕಾನೂನು ಕ್ರಮ ಕೈಗೊಳ್ಳಲಾಗುವುದು. ರಸಗೊಬ್ಬರ ಮಾರಾಟಗಾರರು ದರ ಪಟ್ಟಿ ಮತ್ತು ದೈನಂದಿನ ದಾಸ್ತಾನು ವಿವರಗಳನ್ನು ಕಡ್ಡಾಯವಾಗಿ ಮಳಿಗೆಗಳ ಮುಂದೆ ಸಾರ್ವಜನಿಕರಿಗೆ ಗೊಚರವಾಗುವಂತೆ ಸೂಚನಾ ಫಲಕದಲ್ಲಿ ಪ್ರದರ್ಶಿಸಬೇಕು ಎಂದು ಜಂಟಿ ಕೃಷಿ ನಿರ್ದೇಶಕ ಬಿ. ಮಂಜುನಾಥ್ ತಿಳಿಸಿದ್ದಾರೆ.