ಬೇಡಿಕೆ ಈಡೇರಿಸದಿದ್ದರೆ ಹೋರಾಟ ಆರಂಭ – ಗುತ್ತಿಗೆದಾರರ ರಾಜ್ಯಾಧ್ಯಕ್ಷ ಡಿ. ಕೆಂಪಣ್ಣ

2 Min Read

 

ಸುದ್ದಿಒನ್, ಹಿರಿಯೂರು, ಜನವರಿ.23 : ರಾಜ್ಯದಲ್ಲಿರುವ ಗುತ್ತಿಗೆದಾರರ ಬೇಡಿಕೆಗಳನ್ನು ಈಡೇರಿಸದಿದ್ದರೆ, ನಾನು ಯಾವುದೇ ಹೋರಾಟ ನಡೆಸಲು ಸಿದ್ದ ಎಂದು ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಡಿ. ಕೆಂಪಣ್ಣ ಹೇಳಿದರು.

ನಗರದ ಪಿ.ಆರ್.ಇ.ಡಿ. ಕಛೇರಿ ಆವರಣದಲ್ಲಿ ಸೋಮವಾರ ತಾಲೂಕು ಸಿವಿಲ್ ಗುತ್ತಿಗೆದಾರರ ಸಂಘದ ವತಿಯಿಂದ ಏರ್ಪಡಿಸಿದ್ದ ನೂತನ ಕಚೇರಿ ಉದ್ಘಾಟನೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಈಗಾಗಲೇ ಗುತ್ತಿಗೆದಾರರ ಸಾಕಷ್ಟು ಸಮಸ್ಯೆಗಳ ಬಗ್ಗೆ ಸಿಎಂ ಜತೆಯಲ್ಲಿ ಚರ್ಚಿಸಿದ್ದು, ಅವುಗಳನ್ನು ಈಡೇರಿಸುವ ನಿಟ್ಟಿನಲ್ಲಿ ಬಜೆಟ್‌ನಲ್ಲಿ ಅನುಕೂಲ ಮಾಡಿಕೊಡುತ್ತೇನೆ. ಅಲ್ಲದೇ ಅವರೆಲ್ಲಾರು ಜೀವನದಲ್ಲಿ ನನ್ನನ್ನು ನೆನೆಸುವಂತಹ ಮಹತ್ತರ ಕೊಡುಗೆ ಮಾರ್ಚ್ 4ರಂದು ನೀಡುತ್ತೇನೆ ಎಂದು ಸಿಎಂ ಭರವಸೆ ನೀಡಿದ್ದಾರೆ. ಅವರು ನುಡಿದಂತೆ ನಡೆಯುವ ಸಿಎಂ. ಆದ್ದರಿಂದ ಖಂಡಿತ ನಮ್ಮ ಬೇಡಿಕೆಗಳನ್ನು ಈಡೇರಿಸುತ್ತಾರೆ. ಪ್ರಸ್ತುತ ಎಲ್ಲಾ ವರ್ಗದವರಿಗೂ ಇನ್‌ಶೂರೆನ್ಸ್ ಮಾಡಿಕೊಟ್ಟಿದ್ದಾರೆ. ಆದರೆ ನಮ್ಮ ಗುತ್ತಿಗೆದಾರರಿಗೆ ಇಲ್ಲಿಯವರೆಗೂ ಈ ಸೌಲಭ್ಯ ಸಿಕ್ಕಿಲ್ಲ. ಸುಮಾರು 600ಕೋಟಿ ಹಣ ಇದ್ದರೂ ಇನ್‌ಶೂರೆನ್ಸ್ ಇಲ್ಲ. ಈ ಬಗ್ಗೆಯೂ ಸುಮಾರು ಒಂದೂವರೆ ವರ್ಷದಿಂದ ಹೋರಾಟ ನಡೆಸಿದ್ದೇವೆ. ಈ ಸೌಲಭ್ಯವನ್ನು ಶೀಘ್ರವೇ ಈಡೇರಲಿದೆ. ಅಲ್ಲದೇ ಸ್ಥಳೀಯ ಗುತ್ತಿಗೆದಾರರಿಗೂ ಅನುಕೂಲ ಮಾಡಿಕೊಡಲಿದ್ದಾರೆ ಎಂದರು.

ರಾಜ್ಯದಲ್ಲಿ ಕಳೆದ ಬಿಜೆಪಿ ಸರಕಾರಾವಧಿಯಲ್ಲಿ 40ಪರ್ಸೆಂಟ್ ಬಂದಾಗ ಮೊದಲು ಬಿಎಸ್‌ವೈ ಅವರಿಗೆ ಹೇಳಿದ್ವಿ. ಜನತೆ ಗುತ್ತಿಗೆದಾರರು ಸರಿಯಾಗಿ ಕೆಲಸ ಮಾಡುವುದಿಲ್ಲ ಎಂದು ಕೆಟ್ಟದಾಗಿ ಮಾತನಾಡುತ್ತಾರೆ. ಆದ್ದರಿಂದ ಅಧಿಕಾರಿಗಳ ಸಭೆ ಕರೆಯಿರಿ. ನಮ್ಮದು ತಪ್ಪಿದ್ದರೆ ನಾವು ತಿದ್ದಿಕೊಳ್ಳುತ್ತೇವೆ ಎಂದು ಮೂರು ಬಾರಿ ಪತ್ರ ಬರೆದರೂ ಗಮನಹರಿಸಲಿಲ್ಲ. ಇದರಿಂದ ಪಿಎಂ ಅವರಿಗೆ ಪತ್ರ ಬರೆದು ಹೋರಾಟ ಆರಂಭಿಸಿ, ಬೃಹದಾಕಾರವಾಗಿ ನಡೆದು ಹೊರ ದೇಶದಲ್ಲಿ ಚರ್ಚೆಯಾಗಿತ್ತು. ಆದ್ದರಿಂದ ನಮ್ಮ ಬೇಡಿಕೆ ಈಡೇರುವವರೆಗೂ ಹೋರಾಟ ನಡೆಸುತ್ತೇವೆ ಎಂದು ಡಿ. ಕೆಂಪಣ್ಣ ಸರ್ಕಾರವನ್ನು ಎಚ್ಚರಿಸಿದರು.

22 ಸಾವಿರ ಕೋಟಿ ಬಾಕಿ : ರಾಜ್ಯ ಗುತ್ತಿಗೆದಾರರ ಸಂಘದ ಕಾರ್ಯಾಧ್ಯಕ್ಷ ಆರ್. ಮಂಜುನಾಥ್ ಮಾತನಾಡಿ, ರಾಜ್ಯದಲ್ಲಿನ ಎಲ್ಲಾ ಇಲಾಖೆಗಳಿಂದ ಗುತ್ತಿಗೆದಾರರಿಗೆ 22 ಸಾವಿರ ಕೋಟಿ ಬಿಲ್ ಬರಬೇಕಿದೆ. ಬಜೆಟ್ ಗೆ ಮೊದಲು ಶೇ 50 ರಷ್ಟು ಬಿಲ್ ಪಾವತಿಸುವ ಭರವಸೆಯನ್ನು ಸಿಎಂ ನೀಡಿದ್ದಾರೆ. ಶೇ 40% ಲಂಚದ ಆರೋಪ ಮಾಡಿದ್ದಾಗ ಕೆಂಪಣ್ಣ ಹಾಗೂ ತಮಗೆ ಬೆದರಿಕೆ ಕರೆಗಳು ಬಂದಿದ್ದವು. ಈ ಬಗ್ಗೆ ಜಗ್ಗದೆ ಹೋರಾಟ ಮುಂದುವರಿಸಿದ್ದೆವು. ಅನುದಾನ ಇಲ್ಲದೆ ಟೆಂಡರ್ ಕರೆಯುವ ಪರಿಪಾಠ ಎಲ್ಲಾ ಸರ್ಕಾರಗಳಲ್ಲಿದೆ. ಇದರಿಂದ ಗುತ್ತಿಗೆದಾರರು ಸಂಕಷ್ಟಕ್ಕೆ ಸಿಲುಕುತ್ತಾರೆ ಎಂದು ಬೇಸರ ವ್ಯಕ್ತಪಡಿಸಿದರು.

ಬೆಂಗಳೂರಿನಲ್ಲಿ ಸಿಎಂ ಸಚಿವ ಸಂಪುಟದ ಸಭೆ ಕರೆದಿದ್ದ ಕಾರಣಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಡಿ. ಸುಧಾಕರ್ ಒಂದು ಗಂಟೆ ಮುಂಚಿತವಾಗಿ ಬಂದು ನೂತನ ಕಚೇರಿ ಉದ್ಘಾಟಿಸಿ ವೇದಿಕೆಯಿಂದ ನಿರ್ಗಮಿಸಿದರು.

ಒಬ್ಬರ ಮೇಲೆ ಒಬ್ಬರು ಪೈಪೋಟಿ ಮಾಡುತ್ತ ಶೇ 25 ರಿಂದ 30 ರಷ್ಟು ಕಡಿಮೆ ಮೊತ್ತಕ್ಕೆ ಟೆಂಡರ್ ಹಾಕಿದರೆ ಹಾಳಾಗುವುದು ನಾವೇ. ಕನಿಷ್ಟ ಜಿಲ್ಲೆಯಲ್ಲಿನ ಗುತ್ತಿಗೆದಾರರು ಸೌಹಾರ್ದದಿಂದ ಆಯಾ ತಾಲ್ಲೂಕಿನ ಕಾಮಗಾರಿಗಳನ್ನು ಅದೇ ತಾಲ್ಲೂಕಿನ ಗುತ್ತಿಗೆದಾರರು ನಡೆಸುವಂತಹ ವಾತಾವರಣ ನಿರ್ಮಾಣವಾಗಬೇಕು ಎಂದು ಗುತ್ತಿಗೆದಾರರ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಟಿ. ಚಂದ್ರಶೇಖರ್ ಹೇಳಿದರು.

ರಾಜ್ಯ ವಕ್ಫ್ ಮಂಡಳಿ ಅಧ್ಯಕ್ಷ ಕೆ. ಅನ್ವರ್ ಬಾಷಾ ವೇದಿಕೆ ಕಾರ್ಯಕ್ರಮ ಉದ್ಘಾಟಿಸಿದರು. ಸಂಘದ ತಾಲ್ಲೂಕು ಅಧ್ಯಕ್ಷ ಕೆ.ರಂಗಸ್ವಾಮಿ ಅಧ್ಯಕ್ಷತೆ ವಹಿಸಿದ್ದರು. ಕೆ. ಮಲ್ಲೇಶ್, ಎಚ್.ಆರ್. ನಿರಂಜನಮೂರ್ತಿ, ಎಸ್. ಖಾದರ್, ಎಸ್.ಜೆ. ಹನುಮಂತರಾಯ, ಟಿ. ಚಂದ್ರಶೇಖರ್, ಎಂ.ಎನ್.ಹೇಮಂತಕುಮಾರ್, ಡಿ. ನಾರಾಯಣರೆಡ್ಡಿ, ಎಂ.ಎಸ್.ಈರಲಿಂಗೇಗೌಡ, ಕಂದಿಕೆರೆ ಸುರೇಶ್ ಬಾಬು, ಲಕ್ಷ್ಮೀರೆಡ್ಡಿ ಉಪಸ್ಥಿತರಿದ್ದರು.

Share This Article
Leave a Comment

Leave a Reply

Your email address will not be published. Required fields are marked *