ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್
ಮೊ : 78998 64552
ಚಿತ್ರದುರ್ಗ,(ಜ.21): ವಿದ್ಯಾರ್ಥಿ ಜೀವನ ಅಮೂಲ್ಯ ಮತ್ತು ಪವಿತ್ರವಾದುದು. ಅದಕ್ಕಾಗಿ ಸಮಯವನ್ನು ವ್ಯರ್ಥವಾಗಿ ಕಳೆಯದೆ ಶಿಕ್ಷಣದ ಕಡೆ ಹೆಚ್ಚಿನ ಗಮನ ಕೊಡಿ ಎಂದು ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ವಿದ್ಯಾರ್ಥಿನಿಯರಿಗೆ ಕರೆ ನೀಡಿದರು.
ಬಾಲಕಿಯರ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಶನಿವಾರ ನಡೆದ ಕಾಲೇಜು ವಾರ್ಷಿಕೋತ್ಸವ ಸಮಾರಂಭ ಉದ್ಗಾಟಿಸಿ ಮಾತನಾಡಿದರು.
ಯಾವುದೇ ಒಂದು ದೇಶ ಮುಂದುವರೆಯಬೇಕಾದರೆ ಯುವ ಶಕ್ತಿಯಿಂದ ಮಾತ್ರ ಸಾಧ್ಯ. ಭವಿಷ್ಯದ ಪ್ರಜೆಗಳಾದ ನೀವುಗಳು ಉಪನ್ಯಾಸಕರು ತರಗತಿಯಲ್ಲಿ ಹೇಳಿಕೊಡುವ ಪಾಠಗಳನ್ನು ಶ್ರದ್ದೆಯಿಟ್ಟು ಕಲಿಯಬೇಕು. ಈ ಕಾಲೇಜಿಗೆ ಕೊಠಡಿಗಳ ಕೊರತೆಯಿರುವುದನ್ನು ನನ್ನ ಗಮನಕ್ಕೆ ತಂದಾಗ ಮಿನಿರಲ್ ಫಂಡ್‍ನಿಂದ ಇಪ್ಪತ್ತು ಕೊಠಡಿಗಳನ್ನು ನಿರ್ಮಿಸಿಕೊಟ್ಟಿದ್ದೇನೆ. ಅದೇ ರೀತಿ ಸಂಘ ಸಂಸ್ಥೆಗಳು, ದಾನಿಗಳು ನೀಡುವ ನೆರವನ್ನು ಬಳಸಿಕೊಂಡು ಶಿಕ್ಷಣವಂತರಾಗುವ ಮೂಲಕ ಸದೃಢ ಸಮಾಜ ನಿರ್ಮಿಸಿ ಎಂದು ಹೇಳಿದರು.
ಬ್ರಿಟನ್-ಉಕ್ರೇನ್ ಯುದ್ದದಲ್ಲಿ ನಮ್ಮ ದೇಶದ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಕರೆತಂದಿರುವ ಪ್ರಧಾನಿ ಮೋದಿ ಮಾತಿಗೆ ಅಷ್ಟೊಂದು ಕಿಮ್ಮತ್ತಿದೆ. ಬರೀ ನಮ್ಮ ದೇಶದ ವಿದ್ಯಾರ್ಥಿಗಳಷ್ಟೆ ಅಲ್ಲ. ವಿರೋಧಿ ರಾಷ್ಟ್ರಗಳಾದ ಚೀನಾ, ಪಾಕಿಸ್ತಾನದ ವಿದ್ಯಾರ್ಥಿಗಳನ್ನು ವಿಮಾನದಲ್ಲಿ ಸುರಕ್ಷಿತವಾಗಿ ಕರೆತಂದು ಅವರವರ ದೇಶಗಳಿಗೆ ಕಳಿಸಿಕೊಟ್ಟಿರುವ ಕೀರ್ತಿ ಪ್ರಧಾನಿ ಮೋದಿಗೆ ಸಲ್ಲುತ್ತದೆ.
ನಮ್ಮ ದೇಶದ ಆರ್ಥಿಕ ವ್ಯವಸ್ಥೆ ಸದೃಢವಾಗುತ್ತಿದೆ. ಜನಸಂಖ್ಯೆಯಲ್ಲಿಯೂ ಭಾರತ ಪ್ರಗತಿ ಸಾಧಿಸುತ್ತಿದೆ. ಬ್ರಿಟನ್-ಉಕ್ರೇನ್ ಯುದ್ದ ನಿಲ್ಲಿಸಿ ಎಂದು ಹೇಳುವ ತಾಕತ್ತು ಯಾರಿಗಿದೆ ಎಂದು ಬೇರೆ ಬೇರೆ ದೇಶಗಳು ಮಾತನಾಡಿಕೊಳ್ಳುತ್ತಿದ್ದಾಗ.
ಭಾರತದ ಪ್ರಧಾನಿ ಮೋದಿಗೆ ಮಾತ್ರ ಯುದ್ದ ನಿಲ್ಲಿಸಿ ಎಂದು ಹೇಳುವ ಶಕ್ತಿಯಿದೆ ಎಂದು ಮೆಕ್ಸಿಕನ್ ಅಧ್ಯಕ್ಷ ಹೇಳಿದ್ದಾರೆಂದರೆ ಮೋದಿರವರ ಮಾತಿಗೆ ಎಷ್ಟೊಂದು ಗೌರವವಿದೆ ಎನ್ನುವುದನ್ನು ನೀವುಗಳೇ ಊಹಿಸಿಕೊಳ್ಳಿ ಎಂದು ವಿದ್ಯಾರ್ಥಿನಿಯರಿಗೆ ತಿಳಿಸಿದರು.
2021-22 ನೇ ಸಾಲಿನಲ್ಲಿ ನಡೆದ ದ್ವಿತೀಯ ಪಿ.ಯು.ಸಿ.ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕಗಳನ್ನು ಪಡೆದ ಹದಿನಾಲ್ಕು ವಿದ್ಯಾರ್ಥಿನಿಯರನ್ನು ಸನ್ಮಾನಿಸಿ ತಲಾ ಎರಡು ಸಾವಿರ ರೂ.ಗಳ ನಗದು ಬಹುಮಾನ ನೀಡಲಾಯಿತು.
ವಿಧಾನ ಪರಿಷತ್ ಮುಖ್ಯ ಸಚೇತನ ವೈ.ಎ.ನಾರಾಯಣಸ್ವಾಮಿ, ಪದವಿಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ರಾಜು ಎನ್. ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಕೆ.ಮಂಜುನಾಥ್, ಕಾಲೇಜು ಅಭಿವೃದ್ದಿ ಸಮಿತಿ ಸದಸ್ಯೆ ಶ್ರೀಮತಿ ಗಾಯತ್ರಿ ಶಿವರಾಂ, ರೊ.ಮಧುಪ್ರಸಾದ್ ಕೆ. ಬಾಲಕಿಯರ ಸರ್ಕಾರಿ ಪದವಿಪೂರ್ವ ಕಾಲೇಜು ಪ್ರಾಚಾರ್ಯರಾದ ನಾಗರಾಜ್ ಹೆಚ್. ಉಪನ್ಯಾಸಕರ ಸಂಘದ ಅಧ್ಯಕ್ಷ ಬಿ.ಆರ್.ಮಲ್ಲೇಶಪ್ಪ ಇನ್ನಿತರರು ವೇದಿಕೆಯಲ್ಲಿದ್ದರು.