ಚಿತ್ರದುರ್ಗ: ಈ ಬಾರಿಯ ಮುಂಗಾರು ಮಳೆ ಜೋರಾಗಿರುವ ಕಾರಣ, ರಾಜ್ಯದೆಲ್ಲೆಡೆ ಜಲಾಶಯಗಳು ಭರ್ತಿಯಾಗುತ್ತಿವೆ. ಇನ್ನು ಚಿತ್ರದುರ್ಗ ಜಿಲ್ಲೆಯ ಏಕೈಕ ರೈತರ ಜೀವನಾಡಿಯಾಗಿರುವ ಹಿರಿಯೂರು ತಾಲೂಕಿನ ವಾಣಿ ವಿಲಾಸ ಜಲಾಶಯ ಕೂಡ ಕೋಡಿ ಬೀಳುವ ನಿರೀಕ್ಷೆ ಇದೆ. ಯಾಕಂದ್ರೆ ಈಗಾಗಲೇ ನೀರು 120 ಅಡಿ ಮುಟ್ಟುವ ಹಂತಕ್ಕೆ ತಲುಪಿದೆ. 130 ಅಡಿ ನೀರು ಬಂದರೆ ಸಾಕು ಕೋಡಿ ಬೀಳಲಿದೆ. ಪ್ರಸ್ತುತ 117.70 ಅಡಿ ನೀರು ಇದೆ. ಭದ್ರಾ ಜಲಾಶಯದ ಕಾಲುವೆಯಿಂದ ಕೂಡ ಪ್ರತಿದಿನ 700 ಕ್ಯೂಸೆಕದ ನೀರು ಹರಿದು ಬರುತ್ತಿದೆ.
ವಾಣಿ ವಿಲಾಸ ಜಲಾಶಯದ 135 ಅಡಿ ಎತ್ತರವಿದ್ದು, 30 ಟಿಎಂಸಿ ನೀರಿನ ಸಂಗ್ರಹಣಾ ಸಾಮರ್ಥ್ಯವನ್ನು ಹೊಂದಿದೆ. 130 ಅಡಿಗೆ ಕೋಡಿ ಬೀಳಲಿದೆ. ಸದ್ಯ ಎತ್ತಿನಹೊಳೆಯಿಂದ ಕೂಡ ವಾಣಿ ವಿಲಾಸ ಜಲಾಶಯಕ್ಕೆ ಪ್ರಾಯೋಗಿಕವಾಗಿ ನೀರು ಹರಿಸಲಾಗುತ್ತಿದೆ. ಈ ಜಲಾಶಯ ಕೋಡಿ ಬಿದ್ದು 89 ವರ್ಷಗಳೇ ಕಳೆದಿತ್ತು. ಆದರೆ 2022ರಲ್ಲಿ ಕೋಡಿ ಬಿದ್ದು ರೈತರ ಮೊಗದಲ್ಲಿ ಸಂತಸ ಮೂಡಿಸಿತ್ತು. 2023ರಲ್ಲಿ ಕೆಲವು ಕಡೆ ಬರದ ಛಾಯೆಯೇ ಇತ್ತು. ಇನ್ನು ಚಿತ್ರದುರ್ಗ ಜಿಲ್ಲೆಯಲ್ಲೂ ಹೇಳಿಕೊಳ್ಳುವಂತೆ ಮಳೆ ಏನು ಆಗಿರಲಿಲ್ಲ.
ಈ ಬಾರಿಯ ಮುಂಗಾರು ಅಬ್ಬರಿಸುತ್ತಲೇ ಇದೆ. ಇನ್ನು ಕೇವಲ 12 ಅಡಿ ನೀರಿ ಬಂದರೆ ಕೋಡಿ ಬೀಳಲಿದೆ. ಅದಕ್ಕಾಗಿ ಇನ್ನೊಂದೆರಡು ತಿಂಗಳು ಇದೇ ಥರ ಮಳೆ ಬೀಳಬೇಕಾಗಿದೆ. ಇನ್ನು ಈ ಜಲಾಶಯವನ್ನು 1907ರಲ್ಲಿ ಮೈಸೂರಿನ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ನಿರ್ಮಾಣ ಮಾಡಿದ್ದರು. ಅಂದಿನಿಂದ ಇಂದಿನವರೆಗೂ ಹಿರಿಯೂರು, ಚಿತ್ರದುರ್ಗ, ಚಳ್ಳಕೆರೆ ಸೇರಿದಂತೆ ಸುತ್ತಮುತ್ತಲ ಜನರಿಗೆ ನೀರಿನ ಮೂಲವಾಗಿದೆ.