ಶೀಘ್ರದಲ್ಲೇ ಒಳ ಮೀಸಲಾತಿ ಜಾರಿಗೊಳಿಸದಿದ್ದರೆ ರಾಜ್ಯಾದ್ಯಂತ ಉಗ್ರ ಹೋರಾಟ : ಹನುಮಂತಪ್ಪ ದುರ್ಗ ಎಚ್ಚರಿಕೆ

2 Min Read

 

ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್
ಮೊ : 78998 64552

ಸುದ್ದಿಒನ್, ಚಿತ್ರದುರ್ಗ, ನವೆಂಬರ್. 11 : ಒಳ ಮೀಸಲಾತಿ ಜಾರಿಗೊಳಿಸುವ ಅಧಿಕಾರ ಆಯಾ ರಾಜ್ಯ ಸರ್ಕಾರಗಳಿಗಿದೆ ಎಂದು ಸುಪ್ರೀಂಕೋರ್ಟ್ ತೀರ್ಪು ನೀಡಿ ಮೂರು ತಿಂಗಳಾಗಿದ್ದರೂ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಮಲ್ಲಿಕಾರ್ಜುನ ಖರ್ಗೆ ಕಡೆ ಬೆರಳು ತೋರಿಸಿ ಜವಾಬ್ದಾರಿಯಿಂದ ನುಣಿಚಿಕೊಳ್ಳುವ ನಾಟಕವಾಡುತ್ತಿರುವುದನ್ನು ನಾವುಗಳು ಸಹಿಸುವುದಿಲ್ಲವೆಂದು ಮಾದಿಗ ಮಹಾಸಭಾ ರಾಜ್ಯಾಧ್ಯಕ್ಷ ಹನುಮಂತಪ್ಪ ದುರ್ಗ ಎಚ್ಚರಿಸಿದರು.

ಪತ್ರಕರ್ತರ ಭವನದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಒಳ ಮೀಸಲಾತಿಗಾಗಿ ದಲಿತರು ಮೂವತ್ತು ವರ್ಷಗಳ ಕಾಲ ನಡೆಸಿದ ಹೋರಾಟಕ್ಕೆ ಸುಪ್ರೀಂಕೋರ್ಟ್ ತೀರ್ಪಿನಿಂದ ಜಯ ಸಿಕ್ಕಂತಾಗಿದ್ದರೂ ರಾಜ್ಯ ಸರ್ಕಾರ ಅನುಷ್ಠಾನಗೊಳಿಸುವಲ್ಲಿ ಮೀನಾಮೇಷ ಎಣಿಸುತ್ತಿದೆ. ನಾಳೆ ನಡೆಯುವ ರಾಜ್ಯದ ಮೂರು ವಿಧಾನಸಭೆ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ವಿರುದ್ದ ಮಾದಿಗರು ಮತ ಚಲಾಯಿಸಲು ಕಟಿಬದ್ದರಾಗಿದ್ದಾರೆ. ಒಳ ಮೀಸಲಾತಿ ಜಾರಿಗೆ ಇನ್ನು ವಿಳಂಭ ಮಾಡಿದರೆ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ದ ಹೋರಾಟ ಜನಾಂದೋಲನ ನಡೆಸುವುದಾಗಿ ಹನುಮಂತಪ್ಪ ದುರ್ಗ ಹೇಳಿದರು.

 

ಎಸ್.ಎಂ.ಕೃಷ್ಣ ರಾಜ್ಯದ ಮುಖ್ಯಮಂತ್ರಿಯಾಗಿದ್ದಾಗ ಸದಾಶಿವ ಆಯೋಗ ವರದಿ ಕೊಟ್ಟರು ನೆನೆಗುದಿಗೆ ಬಿದ್ದಿತು. ಬಿಜೆಪಿ.ಸರ್ಕಾರ ರಾಜ್ಯದಲ್ಲಿ ಅಧಿಕಾರಕ್ಕೆ ಬಂದಾಗ ಕೇಂದ್ರಕ್ಕೆ ವರದಿ ಸಲ್ಲಿಸಿತು. ಈಗಿನ ಕಾಂಗ್ರೆಸ್ ಸರ್ಕಾರ ಒಳ ಮೀಸಲಾತಿ ಕುರಿತು ಚಕಾರವೆತ್ತುತ್ತಿಲ್ಲ. ಮೊದಲಿನಿಂದಲೂ ದಲಿತರಿಗೆ ಮೋಸ ಮಾಡಿಕೊಂಡು ಬರುತ್ತಿದೆ ಎಂದು ಕಿಡಿಕಾರಿದರು.

 

ನ್ಯಾಯವಾದಿ ಸುರೇಶ್ ಎಸ್.ಕೆ.ಬಂಜಗೆರೆ ಮಾತನಾಡಿ ಸುಪ್ರೀಂಕೋರ್ಟ್ ಐತಿಹಾಸಿಕ ತೀರ್ಪು ನೀಡಿ 3 ತಿಂಗಳಾಗಿದೆ. ಇನ್ನು ಒಳ ಮೀಸಲಾತಿ ಜಾರಿಗೆ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಮನಸ್ಸು ಮಾಡುತ್ತಿಲ್ಲದಿರುವುದನ್ನು ನೋಡಿದರೆ ಹಿಂದಿನಿಂದಲೂ ಮಾದಿಗರನ್ನು ವಂಚಿಸಿಕೊಂಡು ಬರುತ್ತಿದ್ದಾರೆನ್ನುವುದರಲ್ಲಿ ಅನುಮಾನವಿಲ್ಲ. ಶೀಘ್ರವೇ ಜಾರಿಗೊಳಿಸಿ ಮಾದಿಗರಿಗೆ ಸಾಮಾಜಿಕ ನ್ಯಾಯ ಒದಗಿಸದಿದ್ದರೆ ರಾಜ್ಯಾದ್ಯಂತ ಉಗ್ರ ಹೋರಾಟ ನಡೆಸಲಾಗುವುದೆಂದು ಎಚ್ಚರಿಕೆ ನೀಡಿದರು.

ಮಾದಿಗ ಮಹಾಸಭಾ ಜಿಲ್ಲಾಧ್ಯಕ್ಷ ದೇವರಾಜ್ ಮಾತನಾಡುತ್ತ ನ.13 ರಂದು ನಡೆಯುವ ರಾಜ್ಯದ ಮೂರು ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಸೋಲಿಸುವಂತೆ ಮಾದಿಗರಿಗೆ ಕರೆ ನೀಡಿದ್ದು, ದಲಿತ ವಿರೋಧಿ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ತಕ್ಕ ಪಾಠ ಕಲಿಸಲಾಗವುದೆಂದರು. ವಕೀಲ ಎಲ್.ಸುರೇಶ್ ಕೂಡ್ಲಹಳ್ಳಿ, ವಿಜಯ್‍ಕುಮಾರ್ ಸೇರಿದಂತೆ ಮತ್ತಿತರರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

 

Share This Article
Leave a Comment

Leave a Reply

Your email address will not be published. Required fields are marked *