ಚಿತ್ರದುರ್ಗ,(ಸೆಪ್ಟಂಬರ್ 28) : ಕಲಾ ವಿಭಾಗದ ಮಕ್ಕಳಿಗೆ ಇಂಗ್ಲೀಷ್ ವಿಷಯ ಕಬ್ಬಿಣ ಕಡಲೆಯಾಗಿ ಪರಿಣಮಿಸಿದೆ ಹಾಗಾಗಿ ವಿದ್ಯಾರ್ಥಿಗಳಿಗೆ ಮತ್ತು ಶಿಕ್ಷಕರಿಗೆ ಸ್ಫೂರ್ತಿ ತುಂಬುವ ನಿಟ್ಟಿನಲ್ಲಿ ಇಂತಹ ಕಾರ್ಯಕ್ರಮಗಳು ಅಗತ್ಯವಾಗಿದೆ. ಕಲಿಕೆಯಲ್ಲಿ ಆಸಕ್ತಿ ಇದ್ದರೆ ಎಲ್ಲಾ ಭಾಷೆಗಳನ್ನು ಸರಳವಾಗಿ ಕಲಿಯಬಹುದು ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರಾದ ಎನ್.ರಾಜು ತಿಳಿಸಿದರು.
ನಗರದ ಸರ್ಕಾರಿ ವಿಜ್ಞಾನ ಕಾಲೇಜಿನಲ್ಲಿ ಬುಧವಾರ ಪದವಿಪೂರ್ವ ಶಿಕ್ಷಣ ಇಲಾಖೆ, ಜಿಲ್ಲಾ ಪದವಿ ಪೂರ್ವ ಇಂಗ್ಲಿμï ಉಪನ್ಯಾಸಕರ ವೇದಿಕೆ, ಸರ್ಕಾರಿ ವಿಜ್ಞಾನ ಕಾಲೇಜು ಹಾಗೂ ಇನ್ನರ್ ವೀಲ್ ಕ್ಲಬ್ ಇವರ ಸಹಯೋಗದಲ್ಲಿ ವಿಶ್ವದ ಅತ್ಯಂತ ಕಿರಿಯ ಮುಖ್ಯೋಪಾಧ್ಯಾಯ ಬಾಬರ್ ಅಲಿ, (ಮುರ್ಷಿದಾಬಾದ್ ಪಶ್ಚಿಮ ಬಂಗಾಳ) ಇವರಿಗೆ ಸನ್ಮಾನ, ಮಕ್ಕಳೊಂದಿಗೆ ಸಂವಾದ ಹಾಗೂ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ವಿಶ್ವದ ಅತ್ಯಂತ ಕಿರಿಯ ಮುಖ್ಯೋಪಾಧ್ಯಾಯರಾದ ಬಾಬರ್ ಅಲಿ ಅವರು ನಮ್ಮ ಜಿಲ್ಲೆಗೆ ಬಂದಿರುವುದು ಸಂತಸ ತಂದಿದೆ. ಅವರ ಸಂವಾದ ಮತ್ತು ಸ್ಫೂರ್ತಿಯೊಂದಿಗೆ ಈ ಬಾರಿಯಾದರೂ ನಮ್ಮ ಪಿಯು ಫಲಿತಾಂಶ 10ನೇ ಸ್ಥಾನದಲ್ಲಿ ಬರಲಿ ಎಂದು ಆಶಯ ವ್ಯಕ್ತಪಡಿಸಿದರು.
ವಿಶ್ವದ ಅತ್ಯಂತ ಕಿರಿಯ ಮುಖ್ಯೋಪಾಧ್ಯಾಯ ಬಾಬರ್ ಅಲಿ ಮಾತನಾಡಿ, ನಾನು 6ನೇ ತರಗತಿ ಶಾಲೆಗೆ ಹೋಗುವಾಗ ಬೀದಿ ಬದಿಯಲ್ಲಿ ಶಿಕ್ಷಣವಿಲ್ಲದೇ ಆಟವಾಡುತ್ತಿದ್ದ ವಿದ್ಯಾರ್ಥಿಗಳನ್ನು ಕಂಡು ಅವರೂ ನನ್ನಂತೆ ಶಿಕ್ಷಣ ಪಡೆದುಕೊಳ್ಳಬೇಕೆಂದು ಅವರಿಗೆ ನಾನೇ ಪಾಠ ಮಾಡಲು ಆರಂಭಿಸಿದೆ. ಆಗ 8 ವಿದ್ಯಾರ್ಥಿಗಳಿದ್ದರು. ಅವರನ್ನು ಕರೆ ತರುವುದೇ ಸವಾಲಾಗಿತ್ತು. ಈಗ ಸಾಕಷ್ಟು ವಿದ್ಯಾರ್ಥಿಗಳಿದ್ದು, ಸಂಪೂರ್ಣವಾಗಿ ಉಚಿತ ಶಿಕ್ಷಣ ನೀಡಲಾಗುತ್ತಿದೆ ಎಂದು ತಿಳಿಸಿದರು.
ಮಕ್ಕಳಿಗೆ ಉಚಿತವಾಗಿ ಶಿಕ್ಷಣ ನೀಡಲು ಪ್ರಾರಂಭಿಸಿದರ ಪ್ರತಿಫಲವೇ ಈಗಿನ ಆನಂದ ಶಿಕ್ಷಾ ನಿಕೇತನ ಶಾಲೆ. ಆನಂದ್ ಶಿಕ್ಷಾ ನಿಕೇತನ್ ಎಂದರೆ ಸಂತೋಷದ ಕಲಿಕೆಗಾಗಿ ಶಾಲೆ. ಇಲ್ಲಿ ಶಿಕ್ಷಣದ ಜೊತೆಗೆ, ವಿದ್ಯಾರ್ಥಿಗಳ ಜೀವನದಲ್ಲಿ ಬದಲಾವಣೆ ತರುವ ಬಗ್ಗೆ ಕಾಳಜಿ ವಹಿಸಲಾಗುವುದು ಎಂದರು.
ಸ್ವಾಮಿ ವಿವೇಕಾನಂದರ ತತ್ವಗಳಿಂದ ಸ್ಫೂರ್ತಿಗೊಂಡು ನಾನೂ ಸಮಾಜಕ್ಕೆ ಏನಾದರೂ ಕೊಡಬೇಕೆಂದು ಶಿಕ್ಷಣ ವಂಚಿತರನ್ನು ಶಿಕ್ಷಣವಂತರನ್ನಾಗಿಸಬೇಕೆಂದು ಪ್ರಾಮಾಣಿಕತೆಯಿಂದ ಕೆಲಸ ಮಾಡುತ್ತಿದ್ದೇನೆ ಎಂದು ತಿಳಿಸಿದರು.
ಜಿಲ್ಲೆಯಲ್ಲಿ ಇಂಗ್ಲಿಷ್ ಭಾಷೆಯಲ್ಲಿ ಹೆಚ್ಚು ಅಂಕ ಪಡೆದ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಾದ ಪಂಚಮಿ, ಸಂಗೀತಾ, ಚಿನ್ಮಯಿ ಎಂ.ಎಸ್, ಶ್ವೇತಾ ಪಿ.ವಿ. ಫಾಲಾಕ್ಷ, ಶಿವಕುಮಾರ ಎಂ.ಎ ಅಂಕಿತಾ , ಅಖಿಲಾ ಜಿ.ಎಂ, ಭವಾನಿ ಕೆ.ಒ, ವಿದ್ಯಾ ಟಿ, ಶ್ವೇತಾ ಸಿ.ಎಂ, ಲಾವಣ್ಯ ಯು, ತನುಶ್ರೀ ಟಿ.ಜಿ, ಕಾವೇರಿ ಬಿ.ಎಸ್, ಮುಕ್ತಾ ಎಸ್ ಎಸ್. ಇವರಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಪದವಿ ಪೂರ್ವ ಶಿಕ್ಷಣ ಇಲಾಖೆಯ ನಿವೃತ್ತ ಜಂಟಿ ನಿರ್ದೇಶಕರಾದ ಪಿ.ಎನ್.ಕೃಷ್ಣಪ್ರಸಾದ್, ಕೆ.ವೀರಭದ್ರಪ್ಪ, ಜಿಲ್ಲಾ ಪದವಿ ಪೂರ್ವ ಪ್ರಾಚಾರ್ಯರ ಸಂಘದ ಅಧ್ಯಕ್ಷ ಕೆ.ನಾಗಣ್ಣ, ಜಿಲ್ಲಾ ಪದವಿ ಪೂರ್ವ ಉಪನ್ಯಾಸಕರ ಸಂಘದ ಅಧ್ಯಕ್ಷ ಬಿ.ಆರ್ ಮಲ್ಲೇಶಪ್ಪ, ಜಿಲ್ಲಾ ಪದವಿಪೂರ್ವ ಇಂಗ್ಲಿಷ್, ಉಪನ್ಯಾಸಕರ ವೇದಿಕೆ ಅಧ್ಯಕ್ಷ ವಿಜಯ್ ಜೆ, ಜಿಲ್ಲಾ ಪದವಿ ಪೂರ್ವ ಇಂಗ್ಲಿಷ್ ಉಪನ್ಯಾಸಕರ ವೇದಿಕೆ ಕಾರ್ಯಕ್ರಮ ಸಂಯೋಜಕರಾದ ನಾಗರಾಜ್ ಬೆಳಗಟ್ಟ, ನಿವೃತ್ತ ಪ್ರಾಂಶುಪಾಲರು ಮತ್ತು ಬರಹಗಾರರಾದ ಎಂ.ಜಿ.ರಂಗಸ್ವಾಮಿ, ಪ್ರಚಾರ್ಯರಾದ ಗಣೇಶ್, ಸರ್ಕಾರಿ ವಿಜ್ಞಾನ ಕಾಲೇಜಿನ ಪ್ರಾಂಶುಪಾಲರಾದ ಡಾ.ಹೆಚ್.ಗೋಪಾಲಯ್ಯ, ಎಂ. ರವೀಶ್, ಸಿ.ಚಂದ್ರಶೇಖರಪ್ಪ, ಆರ್. ಅನಿಲ್ ಕುಮಾರ್, ಡಾ ಹೇಮಂತ್ ರಾಜು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.