ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್
ಮೊ : 78998 64552
ಸುದ್ದಿಒನ್, ಚಿತ್ರದುರ್ಗ, (ಜು.16) : ಭಾರತ ವಿಶ್ವಗುರುವಾಗುತ್ತ ಹೆಜ್ಜೆಯಿಡಲು ಇಚ್ಚಿಸಿರುವುದು ಯಶಸ್ವಿಯಾಗಬೇಕಾದರೆ ಹನ್ನೆರಡನೆ ಶತಮಾನದ ಬಸವಾದಿ ಶರಣರು ಕಟ್ಟಿದ ಲಿಂಗಾಯಿತ ಧರ್ಮವನ್ನು ಜಾಗತೀಕರಿಸುವುದರಿಂದ ಮಾತ್ರ ಸಾಧ್ಯ ಎಂದು ಆರ್ಥಿಕ ಚಿಂತಕ ಡಾ.ಜಿ.ಎನ್.ಮಲ್ಲಿಕಾರ್ಜುನಪ್ಪ ಹೇಳಿದರು.
ಜಾಗತಿಕ ಲಿಂಗಾಯಿತ ಮಹಾಸಭಾ ಜಿಲ್ಲಾ ಘಟಕ ಹಾಗೂ ಕೈಗಾರಿಕಾ ವಸಾಹತು ಸಹಯೋಗದೊಂದಿಗೆ ಬಸವ ಮಂಟಪದಲ್ಲಿ ಭಾನುವಾರ ನಡೆದ ವಿಶೇಷ ಉಪನ್ಯಾಸ ಮತ್ತು ಜಾಗತಿಕ ಲಿಂಗಾಯಿತ ಮಹಾಸಭಾ ಸದಸ್ಯತ್ವದ ಗುರುತಿನ ಚೀಟಿ ವಿತರಣಾ ಕಾರ್ಯಕ್ರಮದಲ್ಲಿ ಲಿಂಗಾಯತ ಸ್ವತಂತ್ರ ಧರ್ಮ ಹೇಗೆ, ಎಂತು ಎಂಬ ವಿಷಯ ಕುರಿತು ಉಪನ್ಯಾಸ ನೀಡಿದರು.
ಒಂದು ಕೈಯಲ್ಲಿ ಖಡ್ಗ, ಮತ್ತೊಂದು ಕೈಯಲ್ಲಿ ಧರ್ಮಗ್ರಂಥವನ್ನು ಹಿಡಿದುಕೊಂಡು ಹೋಗುವುದಾಗಲಿ, ಮೌಢ್ಯ, ದ್ವೇಷ, ಅಸೂಯೆಗಳನ್ನು ಬೆಳೆಸಿಕೊಂಡು ಹೋಗುವ ಬದಲು ದಯೆಯೇ ಧರ್ಮದ ಮೂಲವಯ್ಯ ಎನ್ನುವ ನೆಲೆಯಲ್ಲಿ ನಡೆದಾಗ ಮಾತ್ರ ಸಾಮರಸ್ಯಯುತ, ಸಾಮಾಜಿಕ ಬದುಕು ಕಟ್ಟಿಕೊಳ್ಳಬಹುದು. ಇಂದಿನ ಯುವ ಜನಾಂಗವನ್ನು ನೈತಿಕ, ಆಧ್ಯಾತ್ಮಿಕ, ಆರ್ಥಿಕ ನೆಲೆಗಟ್ಟಿನಲ್ಲಿ ಬೆಳೆಸುವ ಕರ್ತವ್ಯ ಎಲ್ಲಾ ಸಂಘಟನೆಗಳ ಹಾಗೂ ನೇತಾರರದ್ದಾಗಬೇಕು ಎಂದರು.
ದೇಶಕ್ಕೆ ಮೊದಲು ಪ್ರಜಾಪ್ರಭುತ್ವವನ್ನು ಕೊಟ್ಟಿದ್ದು, ಬಸವಧರ್ಮ. ಲಿಂಗಾಯಿತ ಧರ್ಮವನ್ನು ಜಾತಿಯ ನೆಲೆಯಲ್ಲಿ ನೋಡಬಾರದು. ಲಿಂಗಾಯಿತ ಬಸವ ಧರ್ಮ ಎನ್ನುವುದು ಹುಟ್ಟಿನಿಂದಲ್ಲ. ಆಚರಣೆಯಿಂದ ಬರುವುದು. ಇಷ್ಟಲಿಂಗ ಪೂಜೆ ಎಂದರೆ ವಿಶ್ವದ ಸಂಕೇತ. ದ್ವೇಷ, ಅಸೂಯೆ, ಯಾವುದೇ ಪಕ್ಷದ ಜೊತೆ ಗುರುತಿಸಿಕೊಳ್ಳುವುದಾಗಲಿ ಮಾಡಿದಾಗ ಭಾರತ ವಿಶ್ವಗುರುವಾಗುವುದಿಲ್ಲ. ವಿಜ್ಞಾನ, ತಂತ್ರಗಾರಿಕೆ ಮುಂದುವರೆದಂತೆಲ್ಲಾ ಮಕ್ಕಳು ತಂದೆ-ತಾಯಿಗಳಿಗೆ ಅಪಮಾನ ಮಾಡುವ ಸ್ಥಿತಿಯಲ್ಲಿರುವುದು ನೋವಿನ ಸಂಗತಿ ಎಂದು ಬೇಸರ ವ್ಯಕ್ತಪಡಿಸಿದರು.
ಮೌಢ್ಯದ ಹಿಂದೆ ಹೋಗುವುದಕ್ಕಿಂತ ವೈಚಾರಿಕತೆ ಜೊತೆ ಸಾಗಿದಾಗ ಅಭಿವೃದ್ದಿ ಕಂಡುಕೊಳ್ಳಬಹುದು. ಹಾಗಾಗಿ ವೈದ್ದಿಕದ ವಿರುದ್ದ ಹೋರಾಡಿದ ಬುದ್ದ, ಬಸವಣ್ಣನವರ ಚಿಂತನೆಗಳು ಪ್ರಸ್ತುತ ಮುಖ್ಯ. ಜ್ಯೋತಿಷಿಗಳು ವಂಚನೆ ಮಾಡುವ ಕೈಚಳಕ ಹೊಂದಿದ್ದಾರೆ.
ಗ್ರಹ, ನಕ್ಷತ್ರಗಳು ಎಂದೇಳಿಕೊಂಡು ದಿಕ್ಕುತಪ್ಪಿಸುತ್ತಿರುವುದರ ವಿರುದ್ದ ಎಲ್ಲರೂ ಜಾಗೃತರಾಗಬೇಕು. ಲಿಂಗಾಯಿತ ಸ್ವತಂತ್ರ ಧರ್ಮ ಎಂದು ಕೇಂದ್ರಕ್ಕೆ ಕೊಟ್ಟಿರುವ ಮನವಿ ಹಿಂದಕ್ಕೆ ಬಂದಿದೆ. ಅದಕ್ಕಾಗಿ ವೈಜ್ಞಾನಿಕ ನೆಲೆಯ ಸಂಘಟನೆ ಮೂಲಕ ಹೋಗಬೇಕು. ಜಾಗತಿಕ ಲಿಂಗಾಯಿತ ಮಹಾಸಭಾ ಹುಟ್ಟಿಕೊಂಡಿರುವುದು ಧರ್ಮ ಒಡೆಯಲಿಕ್ಕೆ ಎನ್ನುವುದಾದರೆ ಹೇಗೆ ಎಂದು ಪ್ರಶ್ನಿಸಿದ ಡಾ.ಜಿ.ಎನ್.ಮಲ್ಲಿಕಾರ್ಜುನಪ್ಪ ಜಾತಿ ಒಡೆಯುತ್ತದೆ. ಧರ್ಮ ಒಗ್ಗೂಡಿಸುತ್ತದೆ ಎಂದು ಜಾತಿ ಮತ್ತು ಧರ್ಮಕ್ಕಿರುವ ವ್ಯತ್ಯಾಸವನ್ನು ತಿಳಿಸಿದರು.
ಆಧುನಿಕ ತಂತ್ರಜ್ಞಾನ ಬೆಳೆದಿರುವ ಇಂದಿನ ಕಾಲದಲ್ಲಿ ಮೂಢನಂಬಿಕೆಯನ್ನು ಇನ್ನು ಆಚರಿಸುತ್ತಿದ್ದೇವಲ್ಲ. ಮೌಢ್ಯ ಸಮಾಜಕ್ಕೆ ಬುದ್ದಿವಂತರೆ ಶತ್ರುಗಳು. ವಿಶ್ವಗುರುವಾಗುವ ಎಲ್ಲ ಅರ್ಹತೆ ಶರಣ ಧರ್ಮಕ್ಕಿದೆ ಎಂದರು.
ಬಸವ ಮಂಟಪದ ದಾನೇಶ್ವರಿ ಮಾತಾಜಿ ಸಾನಿಧ್ಯ ವಹಿಸಿದ್ದರು.
ಜಾಗತಿಕ ಲಿಂಗಾಯಿತ ಮಹಾಸಭಾ ಜಿಲ್ಲಾ ಪ್ರಧಾನ ಸಂಚಾಲಕ ಡಿ.ಕೆಂಚವೀರಪ್ಪನವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಹಿಳಾ ಸಂಚಾಲಕಿ ಶ್ರೀಮತಿ ಶೈಲಜಾ, ಚಂದ್ರಶೇಖರ ಕಗ್ಗಲಗೌಡ್ರು, ಮುಖ್ಯ ಶಿಕ್ಷಕ ಡಾ.ಮಹೇಶ್, ಧನಂಜಯ ವೇದಿಕೆಯಲ್ಲಿದ್ದರು.
ಜಾಗತಿಕ ಲಿಂಗಾಯಿತ ಮಹಾಸಭಾ ಜಿಲ್ಲಾ ಘಟಕದ ಸಂಚಾಲಕರು ಹಾಗೂ ಸದಸ್ಯರುಗಳು ಉಪನ್ಯಾಸ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.