ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್,
ಮೊ : 78998 64552
ಸುದ್ದಿಒನ್, ಚಿತ್ರದುರ್ಗ, ಜನವರಿ.09 : ಭದ್ರಾಮೇಲ್ದಂಡೆ ಯೋಜನೆಗೆ ರಾಷ್ಟ್ರೀಯ ಯೋಜನೆಯಡಿಯಲ್ಲಿ ಕಾಯ್ದಿರಿಸಿರುವ 5300 ಕೋಟಿ ರೂ.ಗಳನ್ನು ಬಿಡುಗಡೆಗೊಳಿಸಲು ಒತ್ತಾಯಿಸಿ ಕೇಂದ್ರ ಮಂತ್ರಿ ಎ.ನಾರಾಯಣಸ್ವಾಮಿ ಕಚೇರಿ ಎದುರು ಅನಿರ್ಧಿಷ್ಠಾವಧಿ ಧರಣಿ ನಡೆಸಲಾಗುವುದೆಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ಕಾರ್ಯಾಧ್ಯಕ್ಷ ಈಚಘಟ್ಟದ ಸಿದ್ದವೀರಪ್ಪ ತಿಳಿಸಿದರು.
ಪ್ರವಾಸಿ ಮಂದಿರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಐವತ್ತು ವರ್ಷಗಳ ಹಿಂದೆ ಕಾಣಿಸಿಕೊಂಡಿದ್ದ ಬರಗಾಲ ಮತ್ತೆ ಮರುಕಳಿಸುವ ಲಕ್ಷಣಗಳಿವೆ. ಭದ್ರಾಮೇಲ್ದಂಡೆ ಹಾಗೂ ಎತ್ತಿನಹೊಳೆ ಯೋಜನೆಗಳು ಮಧ್ಯಕರ್ನಾಟಕದ ಬಯಲುಸೀಮೆ ಬರಪೀಡಿತ ಚಿತ್ರದುರ್ಗ ಜಿಲ್ಲೆಗೆ ಅತ್ಯವಶ್ಯಕವಾಗಿದ್ದು, ಕೇಂದ್ರ ಸರ್ಕಾರವು ಭದ್ರಾಮೇಲ್ದಂಡೆ ಯೋಜನೆಯನ್ನು ರಾಷ್ಟೀಯ ಯೋಜನೆಯನ್ನಾಗಿ ಘೋಷಿಸಿ 5300 ಕೋಟಿ ರೂ.ಗಳನ್ನು ಕಾಯ್ದಿರಿಸಿದೆ. ಹಾಗಾಗಿ ಹಣವನ್ನು ಕೇಂದ್ರದಿಂದ ಬಿಡುಗಡೆಗೊಳಿಸಿ ಭದ್ರಾಮೇಲ್ದಂಡೆ ಕಾಮಗಾರಿ ತುಂಗಭದ್ರಾದಿಂದ ಭದ್ರಾನದಿಗೆ ಸಂಪರ್ಕಿಸುವ ಸಮಗ್ರ ಕಾಮಗಾರಿಗೆ ಚುರುಕು ಮುಟ್ಟಿಸುವಂತೆ ಕ್ರಮ ಕೈಗೊಳ್ಳಬೇಕು ಎಂದು ಕೇಂದ್ರ ಸಚಿವ ಎ.ನಾರಾಯಣಸ್ವಾಮಿಯನ್ನು ಒತ್ತಾಯಿಸಿದರು.
ಇನ್ನು ಹತ್ತು ದಿನದಲ್ಲಿ ಕೇಂದ್ರ ಸರ್ಕಾರದಿಂದ 5300 ಕೋಟಿ ರೂ. ಬಿಡುಗಡೆಯಾಗದಿದ್ದಲ್ಲಿ ಜಿಲ್ಲಾ ಪಂಚಾಯಿತಿಯಲ್ಲಿರುವ ಸಂಸದ ಎ.ನಾರಾಯಣಸ್ವಾಮಿರವರ ಕಚೇರಿಗೆ ಮುತ್ತಿಗೆ ಹಾಕುವುದಾಗಿ ಈಚಘಟ್ಟದ ಸಿದ್ದವೀರಪ್ಪ ಎಚ್ಚರಿಸಿದರು.
ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ಜಿಲ್ಲಾಧ್ಯಕ್ಷ ಡಿ.ಎಸ್.ಹಳ್ಳಿ ಮಲ್ಲಿಕಾರ್ಜುನ, ಪ್ರಧಾನ ಕಾರ್ಯದರ್ಶಿ ರಾಮರೆಡ್ಡಿ, ನಿಜಲಿಂಗಪ್ಪ, ಬೋರೇಶ್, ಸತೀಶ್, ಮಂಜುನಾಥ, ಶ್ರೀಕಂಠಮೂರ್ತಿ ಇನ್ನು ಅನೇಕರು ಪತ್ರಿಕಾಗೋಷ್ಟಿಯಲ್ಲಿ ಹಾಜರಿದ್ದರು.