ಸುದ್ದಿಒನ್, ಚಿತ್ರದುರ್ಗ, ಜನವರಿ. 28 : ಕಳೆದ ಕೆಲವು ತಿಂಗಳಿನಿಂದ ರಾಜ್ಯದ ಹಲವು ಜಿಲ್ಲೆಗಳಲ್ಲಿ ಮೈಕ್ರೋ ಫೈನಾನ್ಸ್ ಕಿರುಕುಳದಿಂದ ಜನ ನೊಂದಿದ್ದಾರೆ ಅಷ್ಟೇ ಅಲ್ಲದೇ ಕೆಲವೆಡರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದೀಗ ಚಿತ್ರದುರ್ಗ ಜಿಲ್ಲೆಯಲ್ಲಿಯೂ ಜನರಿಗೆ ಬ್ಯಾಂಕ್ ಸಿಬ್ಬಂದಿಗಳ ಕಿರುಕುಳ ಮಿತಿಮೀರಿದ್ದು, ಒಂದು ಕುಟುಂಬವೇ ಬೀದಿಗೆ ಬಂದಿದೆ.
ಚಿತ್ರದುರ್ಗದ ತಾಲ್ಲೂಕಿನ ಕೊಳಾಹಾಳ್ ಗ್ರಾಮದ ರಮೇಶ್ ಎಂಬ ವ್ಯಕ್ತಿ 2021ರಲ್ಲಿ ಭರಮಸಾಗರದ IDFC ಬ್ಯಾಂಕ್ ನಿಂದ 5 ಲಕ್ಷ ಸಾಲ ಪಡೆದಿದ್ದರು. ಈ ಸಾಲವನ್ನು ಮರುಪಾವತಿ ಮಾಡಲು ಆ ವ್ಯಕ್ತಿಯಿಂದ ಆಗಿರಲಿಲ್ಲ. ಹೀಗಾಗಿ ಐಡಿಎಫ್‌ಸಿ ಬ್ಯಾಂಕ್ ಸಿಬ್ಬಂದಿಗಳು ಮನೆಗೆ ಬೀಗ ಹಾಕಿದ್ದಾರೆ. ಮನೆಯ ಬಾಗಿಲು ಹಾಗೂ ಶೌಚಾಲಯದ ಬಾಗಿಲಿಗೆ ನೋಟಿಸ್ ಅಂಟಿಸಿದ್ದಾರೆ. ಇದರಿಂದ ರಮೇಶ್ ಕುಟುಂಬ ಊರು ಬಿಡುವಂತಾಗಿದೆ. ಸಾಲ ಪಡೆದ ಕುಟುಂಬದ ಮೇಲೆ ಬ್ಯಾಂಕ್ ಸಿಬ್ಬಂದಿಗಳು ಅಮಾನುಷವಾಗಿ ವರ್ತಿಸಿದ್ದಾರೆ ಎನ್ನಲಾಗಿದೆ.
ಸಿಬ್ಬಂದಿಗಳ ದುರ್ವರ್ತನೆಗೆ ಕುಟುಂಬದ ಸದಸ್ಯರು ಬೀದಿ ಪಾಲಾಗಿದ್ದು, ನರಕಯಾತನೆ ಅನುಭವಿಸುತ್ತಿದ್ದಾರೆ. ಮನೆಯ ವಸ್ತುಗಳನ್ನು ಒಳಗಡೆ ಇಟ್ಟು ಬೀಗ ಜಡಿದಿದ್ದಾರೆ. ಮನೆಗೆ ಬೀಗ ಹಾಕಿದ ಹಿನ್ನೆಲೆಯಲ್ಲಿ ಕಳೆದ ನಾಲ್ಕು ತಿಂಗಳುಗಳಿಂದ ಕುಟುಂಬದ ಸದಸ್ಯರು ಮೆಟ್ಟಿಲು ಕೆಳಗಡೆ ವಾಸವಾಗಿದ್ದಾರೆ. ಜೊತೆಗೆ ಎರಡೂವರೆ ವರ್ಷದ ಮಗುವಿನೊಂದಿಗೆ ನರಕಯಾತನೆ ಅನುಭವಿಸುವಂತಾಗಿದೆ. ಕಂತು ಕಟ್ಟಲಾಗದೆ ದುಡಿಯಲು ಚಿಕ್ಕಮಗಳೂರು ಕಡೆಗೆ ಹೋಗಿದ್ದಾಗ, ಬ್ಯಾಂಕ್ ಸಿಬ್ಬಂದಿಗಳು ಬೀಗ ಹಾಕಿ, ನೋಟಿಸ್ ಅಂಟಿಸಿದ್ದಾರೆ.
ಈ ಕುರಿತು ಮಾತನಾಡಿದ ರಮೇಶ್, ನಾವೇನು ಕಂತು ಕಟ್ಟಲ್ಲ ಎಂದು ಹೇಳುತ್ತಿಲ್ಲ. ಈಗ 50ಸಾವಿರ ಕಟ್ಟುತ್ತೇವೆ, ಉಳಿದ ಹಣ ಕಟ್ಟಲು ಸಮಯ ಕೊಡಿ ನಿಮ್ಮ ಸಾಲ ತೀರಿಸುತ್ತೇವೆ, ಈಗ ಮನೆ ಬೀಗ ಕೊಡಿ ಎಂದಿದ್ದಾರೆ. ಇದಕ್ಕೊಪ್ಪದ ಸಿಬ್ಬಂದಿಗಳು ಪೂರ್ತಿ ಸೆಟ್ಲಮೆಂಟ್ ಮಾಡಿ ಆಮೇಲೆ ಕೀ ಕೊಡುತ್ತೇವೆ ಎಂದು ಕುಟುಂಬದ ಮೇಲೆ ಅಮಾನುಷವಾಗಿ ವರ್ತಿಸಿದ್ದಾರೆ ಎಂದು ಹೇಳಲಾಗುತ್ತಿದೆ.