ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್
ಮೊ : 78998 64552
ಸುದ್ದಿಒನ್, ಚಿತ್ರದುರ್ಗ, ಆ.21 : ಪ್ರತಿಭಾವಂತ ವಿದ್ಯಾರ್ಥಿಗಳು ಮತ್ತು ಸಾಧಕರನ್ನು ಗುರುತಿಸುವುದು ಸಮಾಜದ ಆದ್ಯ ಕರ್ತವ್ಯ ಎಂದು ಆರ್ಯವೈಶ್ಯ ಅಧಿಕಾರಿಗಳ ಮತ್ತು ವೃತ್ತಿನಿರತರ ಸಂಘಗಳ ಒಕ್ಕೂಟದ ರಾಜ್ಯಾಧ್ಯಕ್ಷ ಡಿ.ಸುಬ್ರಮಣ್ಯಶೆಟ್ಟಿ ತಿಳಿಸಿದರು.
ಆರ್ಯವೈಶ್ಯ ಅಧಿಕಾರಿಗಳು ಹಾಗೂ ವೃತ್ತಿನಿರತರ ಸಂಘದಿಂದ ವಾಸವಿ ವಿದ್ಯಾಸಂಸ್ಥೆಯಲ್ಲಿ ಎಸ್.ಎಸ್.ಎಲ್.ಸಿ./ದ್ವಿತೀಯ ಪಿ.ಯು.ಸಿ.ಯಲ್ಲಿ ಹೆಚ್ಚು ಅಂಕಗಳನ್ನು ಗಳಿಸಿರುವ ವಿದ್ಯಾರ್ಥಿಗಳಿಗೆ ಭಾನುವಾರ ಹಮ್ಮಿಕೊಳ್ಳಲಾಗಿದ್ದ ಪ್ರತಿಭಾ ಪುರಸ್ಕಾರ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಶಿಕ್ಷಣದ ಜೊತೆ ವಿದ್ಯಾರ್ಥಿಗಳು ಸಾಮಾನ್ಯ ಜ್ಞಾನವನ್ನು ಹೆಚ್ಚು ತಿಳಿದುಕೊಂಡು ಬೇರೆಯವರಿಗೂ ತಿಳಿಸಬೇಕು. ನಾವು ಭಾರತೀಯರು ಎನ್ನುವ ಮನೋಭಾವನೆಯನ್ನು ಎಲ್ಲರೂ ಮೈಗೂಡಿಸಿಕೊಳ್ಳಿ. ಕೆಲವು ವಿಚಾರಗಳಲ್ಲಿ ನಮ್ಮ ದೇಶ ಇನ್ನು ಪರದೇಶವನ್ನು ಅವಲಂಭಿಸಿಕೊಂಡಿದೆ. ಮಕ್ಕಳಲ್ಲಿ ಸಂಸ್ಕಾರ, ಸಂಸ್ಕøತಿ, ಮೌಲ್ಯಗಳನ್ನು ಬಿತ್ತುವ ಹೊಣೆಗಾರಿಕೆ ಶಿಕ್ಷಕರು ಹಾಗೂ ಪೋಷಕರುಗಳ ಮೇಲಿದೆ ಎಂದು ಹೇಳಿದರು.
ಒಳ್ಳೆಯ ವಿಚಾರಗಳು ಪಠ್ಯಪುಸ್ತಕಗಳಲ್ಲಿರಬೇಕು. ಇತ್ತೀಚಿನ ದಿನಗಳಲ್ಲಿ ಪಠ್ಯಪುಸ್ತಕಗಳಲ್ಲಿನ ಕೆಲವು ವಿಚಾರಗಳನ್ನು ತೆಗೆಯಲಾಗುತ್ತಿರುವುದು ನೋವಿನ ಸಂಗತಿ. ನಮ್ಮ ಜನಾಂಗದಲ್ಲಿರುವ ಕೆಲವು ಶ್ರೀಮಂತರು ಹಣ ಗಳಿಕೆಯಲ್ಲಿಯೇ ಕಾಲಕಳೆಯುವ ಬದಲು ದುಡಿಮೆಯಲ್ಲಿ ಸ್ವಲ್ಪ ಭಾಗವನ್ನು ಇಂತಹ ಕಾರ್ಯಗಳಿಗೆ ದಾನ ಮಾಡಿದರೆ ಒಳ್ಳೆಯದು. ಹತ್ತನೆ ತರಗತಿ ಮತ್ತು ಪಿ.ಯು.ಸಿ.ಯಲ್ಲಿ ಹೆಚ್ಚು ಅಂಕಗಳಿಸಿರುವವರನ್ನು ಸನ್ಮಾನಿಸುತ್ತಿರುವುದು ಸಂತೋಷದ ಸಂಗತಿ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಕುವೆಂಪು ವಿಶ್ವವಿದ್ಯಾನಿಲಯ ಶಂಕರಘಟ್ಟದ ಸಹ ಪ್ರಾಧ್ಯಾಪಕ ಡಾ.ನೆಲ್ಲಿಕಟ್ಟೆ ಎಸ್.ಸಿದ್ದೇಶ್ ಮಾತನಾಡಿ ಮಕ್ಕಳಲ್ಲಿರುವ ಸ್ವಂತ ಸಾಮಥ್ರ್ಯವನ್ನು ಕಂಡು ಹಿಡಿಯುವುದೇ ನಿಜವಾದ ಪ್ರತಿಭೆ. ಆಂತರಿಕ ಶ್ರೀಮಂತಿಕೆ ಪುರಸ್ಕಾರ, ಪ್ರತಿಭೆಗೆ ಪೂರಕ ಸಾಧನ. ವಿದ್ಯಾರ್ಥಿಗಳ ಏಳಿಗೆಗೆ ಇಂತಹ ಪುರಸ್ಕಾರಗಳು ಬೇಕು ಎಂದು ಹೇಳಿದರು.
ಹಣದಿಂದ ಶಾಂತಿ, ನೆಮ್ಮದಿ ದೊರೆಯುವುದಿಲ್ಲ. ಅಂತರಂಗದ ವಿಶ್ವಾಸದಿಂದ ಮಾತ್ರ ನೆಮ್ಮದಿ ಕಂಡುಕೊಳ್ಳಲು ಸಾಧ್ಯ. ಜ್ಞಾನ, ಶಿಕ್ಷಣ, ಅರಿವು ಬೇಕು. ಅಕ್ಷರವಂತರು ಸಾಕಷ್ಟು ಇದ್ದಾರೆ. ಅಕ್ಕರೆವಂತರು ಸಿಕ್ಕಾಗ ಮಾತ್ರ ಇಂತಹ ಪ್ರತಿಭೆಗಳನ್ನು ಹೊರತರಲು ಸಹಕಾರಿಯಾಗಲಿದೆ. ನಾಯಕತ್ವ ಎನ್ನುವುದು ಮತ್ತೊಬ್ಬ ನಾಯಕನನ್ನು ಸೃಷ್ಠಿಸುವಂತಿರಬೇಕು. ತೆಂಗಿನ ಮರದಂತ ವ್ಯಕ್ತಿತ್ವ ಬೆಳೆಸಿಕೊಳ್ಳಬೇಕು. ಆಲದ ಮರದಂತಿರಬಾರದು. ಸದೃಢ, ಪ್ರಬುದ್ದ, ಸಾಮರಸ್ಯ ಭಾರತ ಕಟ್ಟಬೇಕಿದೆ ಎಂದರು.
ವಾಸವಿ ವಿದ್ಯಾಸಂಸ್ಥೆ ಅಧ್ಯಕ್ಷ ಎಸ್.ಎ.ಸತ್ಯನಾರಾಯಣಶೆಟ್ಟಿ ಮಾತನಾಡಿ ಮಕ್ಕಳಿಗೆ ಅಗತ್ಯವಿರುವಷ್ಟು ಸೌಲಭ್ಯಗಳನ್ನು ಮಾತ್ರ ಕೊಡಬೇಕು. ಮಕ್ಕಳೆಂಬ ಮಮಕಾರಕ್ಕೆ ಅತಿಯಾಗಿ ಪ್ರೀತಿ ತೋರಿಸಿದಾಗ ಕೆಲವೊಮ್ಮೆ ತಪ್ಪುದಾರಿಗೆ ಹೋಗುವುದುಂಟು. ಶಿಕ್ಷಣದ ಜೊತೆ ಸಂಸ್ಕಾರ ಕಲಿಸಬೇಕು ಎಂದು ಸಲಹೆ ನೀಡಿದರು.
ಪಿ.ಎಲ್.ಸುರೇಶ್‍ರಾಜು ಮಾತನಾಡುತ್ತ ಸಾಧಕರನ್ನು ಗುರುತಿಸುವುದು ಅಭೂತಪೂರ್ವ ಕಾರ್ಯಕ್ರಮ. ದುಡಿಮೆಯನ್ನು ಸದ್ವಿನಿಯೋಗವಾಗುವಂತ ಕೆಲಸಕ್ಕೆ ಬಳಸುತ್ತಿರುವುದು ಮೆಚ್ಚುವಂತಹದ್ದು ಎಂದು ಶ್ಲಾಘಿಸಿದರು.
ಎಲ್.ಆರ್.ವೆಂಕಟೇಶ್‍ಕುಮಾರ್ ಮಾತನಾಡಿ ಮಕ್ಕಳು ಶಿಕ್ಷಣವಂತರಾಗುವ ಮೂಲಕ ಗುರು-ಹಿರಿಯರು, ಪೋಷಕರು, ಸಮಾಜಕ್ಕೆ ಒಳ್ಳೆ ಕೀರ್ತಿ ತರಬೇಕು. ದೀಪದ ರೀತಿಯಲ್ಲಿ ಬೆಳಗಿ ಬೇರೆಯವರಿಗೆ ಬೆಳಕು ನೀಡಬೇಕು ಎಂದು ಪ್ರತಿಭಾವಂತ ಮಕ್ಕಳನ್ನು ಹಾರೈಸಿದರು.
ನಿವೃತ್ತ ಪ್ರಾಚಾರ್ಯರಾದ ಟಿ.ವಿ.ಸುರೇಶ್‍ಗುಪ್ತ ಮಾತನಾಡುತ್ತ ಪ್ರತಿಭಾವಂತ ಮಕ್ಕಳು ತಮ್ಮ ಆಯ್ಕೆಗೆ ಅನುಗುಣವಾಗಿ ಶಿಕ್ಷಣದ ಕಡೆ ಹೆಚ್ಚಿನ ಗಮನ ಕೊಟ್ಟು ಜೀವನದಲ್ಲಿ ಉತ್ತಮ ಭವಿಷ್ಯವನ್ನು ರೂಪಿಸಿಕೊಳ್ಳಿ. ಹಿಂದುಳಿದ ವರ್ಗಗಳ ಹರಿಕಾರ ದಿವಂಗತ ಡಿ.ದೇವರಾಜ ಅರಸು, ಕನ್ನಡ ಸಾಹಿತ್ಯದಲ್ಲಿ ವಿಶಿಷ್ಟ ಸ್ಥಾನ ಗಳಿಸಿರುವ ಎಸ್.ಎಲ್.ಭೈರಪ್ಪನವರ ಜನ್ಮದಿನದಂದು ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೆರವೇರಿಸುತ್ತಿರುವುದು ಒಂದು ಸುದೈವ ಎಂದು ಸಂತಸ ವ್ಯಕ್ತಪಡಿಸಿದರು.
ಪಾಮಡಿ ಸುಬ್ಬರಾಮಶ್ರೇಷ್ಠಿರವರು ಮಂತ್ರಿಯಾಗಲು ಅಭಿಮಾನಿಗಳು ಪ್ರೇರಣೆ ನೀಡಿದಾಗ ನಯವಾಗಿ ದೂರಸರಿಸಿ ಕೊನೆಗೆ ಜವಾಹರಲಾಲ ನೆಹರುರವರ ಒತ್ತಡಕ್ಕೆ ಮಣಿದು ಒಂದು ವರ್ಷ ಮಾತ್ರ ಮಂತ್ರಿಯಾಗಿ ಅನೇಕ ಜನಪರ ಕೆಲಸಗಳನ್ನು ಮಾಡಿದರು. ಇಂತಹ ಪ್ರಾಮಾಣಿಕರೆಲ್ಲಾ ನಿಮಗೆ ಆದರ್ಶವಾಗಬೇಕೆಂದು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಕನ್ನಡ ಸಾಹಿತ್ಯ ಪರಿಷತ್ ತಾಲ್ಲೂಕು ಅಧ್ಯಕ್ಷರಾದ ರಾಮಲಿಂಗಶ್ರೇಷ್ಠಿ, ತುಮಕೂರಿನ ರಾಧಕೃಷ್ಣನ್, ಡಾ.ರಾಮಲಿಂಗಶೆಟ್ಟಿ, ವೇದಿಕೆಯಲ್ಲಿದ್ದರು.
ಪಿ.ಎನ್.ಮೋಹನ್ ಅಧ್ಯಕ್ಷತೆ ವಹಿಸಿದ್ದರು.
ಶ್ರಾವ್ಯ ಪ್ರಾರ್ಥಿಸಿದರು, ಡಿ.ಆರ್.ತಿಪ್ಪೇಸ್ವಾಮಿ ಸ್ವಾಗತಿಸಿದರು. ಸುನಿಲ್ ವಡವಡಗಿ ವಂದಿಸಿದರು.